ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟೀಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳು, ರಸ್ತೆ ಕೆಲಸ ವ್ಯವಸ್ಥಿತವಾಗಿ ನಿರ್ವಹಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಷ್ಟೀಯ ಹೆದ್ದಾರಿ ಅಭಿಯಂತರರಿಗೆ ಸೂಚನೆ ನೀಡಿದರು.ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ರಾಹೆ - 66 ರಲ್ಲಿ ಬ್ರಹ್ಮಾವರ ತಾಲೂಕಿನ ಆಕಾಶವಾಣಿ ಜಂಕ್ಷನ್‌ನಿಂದ ಬ್ರಹ್ಮಾವರ ಮಹೇಶ್ ಆಸ್ಪತ್ರೆ ಜಂಕ್ಷನ್‌ವರೆಗೆ ಫ್ಲೈಓವರ್ ಅಥವಾ ಅಂಡರ್‌ಪಾಸ್ ನಿರ್ಮಿಸುವ ಕುರಿತು ಹಾಗೂ ರಾಹೆ ಸಂಬಂಧಿಸಿದ ಕುಂದುಕೊರತೆಗಳ ಕುರಿತು ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 100 ಕಿ.ಮೀ.ಗೂ ಹೆಚ್ಚು ಉದ್ದ ರಾ.ಹೆ. 66 ಹಾದು ಹೋಗಿದ್ದು, ಪೂರ್ಣ ಪ್ರಮಾಣದಲ್ಲಿ ಸರ್ವಿಸ್ ರಸ್ತೆ, ಮೂಲಭೂತ ಸೌಕರ್ಯಗಳಾದ ಚರಂಡಿ, ದಾರಿದೀಪ, ಸೇರಿದಂತೆ ಮತ್ತಿತರ ನಿರ್ವಹಣೆ ಕೊರತೆಯಿಂದಾಗಿ ಹೆದ್ದಾರಿಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಗಳು ಉಂಟಾಗುತ್ತಿವೆ, ಅಪಘಾತ ಪ್ರಕರಣಗಳು ಸಹ ಉಂಟಾಗುತ್ತಿವೆ. ಇವುಗಳನ್ನು ತಪ್ಪಿಸಲು ಅಗತ್ಯವಿರುವ ಎಲ್ಲಾ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಹೆದ್ದಾರಿ ಪ್ರಾಧಿಕಾರದ ಅಭಿಯಂತರರಿಗೆ ಸೂಚನೆ ನೀಡಿದರು.ಹೆದ್ದಾರಿ ಟೋಲ್ಗಳಲ್ಲಿ ಶುಲ್ಕ ಪಾವತಿಯಾದ ಮೊತ್ತದ ಶೇ.1 ರಷ್ಟು ಹಣವನ್ನು ಗ್ರಾಮ ಪಂಚಾಯತಿಗಳಿಗೆ ನೀಡಬೇಕೆಂಬ ಆದೇಶವಿದೆ. ಆದರೆ, ಇದು ಕಾರ್ಯರೂಪಕ್ಕೆ ಬಂದಿಲ್ಲ. ಪಂಚಾಯತಿಗಳು ಈ ಹಣ ನೀಡಬೇಕೆಂದು ಕೇಳಿ ಪತ್ರ ಬರೆಯಲು ತಿಳಿಸಿದ ಅವರು, ಹೆದ್ದಾರಿ ಅಕ್ಕಪಕ್ಕದಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಿದ್ದಲ್ಲಿ ಅದಕ್ಕೆ ಅನುಮತಿ ನೀಡಲು ಗ್ರಾಮ ಪಂಚಾಯತಿಗೆ ಮಾತ್ರ ಅಧಿಕಾರವಿದೆ. ಇವುಗಳ ನಿರ್ವಹಣೆಯನ್ನು ಗ್ರಾಮ ಪಂಚಾಯತಿಗಳೇ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಬ್ರಹ್ಮಾವರ ಹಾಗೂ ತೆಕ್ಕಟ್ಟೆಯಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಲು ಯೋಜನೆ ರೂಪಿಸಿ, ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾಮಗಾರಿಗಳನ್ನು ಶೀಘ್ರವಾಗಿ ಕೈಗೊಳ್ಳಬೇಕು ಎಂದರು.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ರಾಹೆ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ ಮತ್ತಿತರರು ಇದ್ದರು.