ಪಾರದರ್ಶಕ ಚುನಾವಣೆಗೆ ವ್ಯವಸ್ಥಿತ ಸಿದ್ಧತೆ-ಜಿಲ್ಲಾಧಿಕಾರಿ

| Published : Apr 24 2024, 02:16 AM IST

ಪಾರದರ್ಶಕ ಚುನಾವಣೆಗೆ ವ್ಯವಸ್ಥಿತ ಸಿದ್ಧತೆ-ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ನಿಯೋಜಿತಗೊಂಡಿರುವ ಸಾಮಾನ್ಯ ವೀಕ್ಷಕರಿಗೆ ಕ್ಷೇತ್ರದ ಚುನಾವಣಾ ಸಿದ್ಧತೆಗಳ ಕುರಿತಾಗಿ ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಪಾರದರ್ಶಕ ಹಾಗೂ ವ್ಯವಸ್ಥಿತ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ನಿಯೋಜಿತಗೊಂಡಿರುವ ಸಾಮಾನ್ಯ ವೀಕ್ಷಕರಿಗೆ ಕ್ಷೇತ್ರದ ಚುನಾವಣಾ ಸಿದ್ಧತೆಗಳ ಕುರಿತಾಗಿ ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಪಾರದರ್ಶಕ ಹಾಗೂ ವ್ಯವಸ್ಥಿತ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗದಿಂದ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ನಿಯೋಜಿತಗೊಂಡ ಸಾಮಾನ್ಯ ವೀಕ್ಷಕರಾದ ಐಎಎಸ್ ಅಧಿಕಾರಿ ಆದೇಶ ತಿತರ್‌ಮರೆ, ಪೊಲೀಸ್ ವೀಕ್ಷಕರಾದ ಐಪಿಎಸ್ ಅಧಿಕಾರಿ ಧಮೇಂದ್ರಸಿಂಗ್ ಭಡೌರಿಯಾ ಹಾಗೂ ಚುನಾವಣಾ ವೆಚ್ಚ ವೀಕ್ಷಕರಾದ ಐಆರ್‌ಎಸ್ ಅಧಿಕಾರಿ ಗುಲ್ಜಾರ್ ಬೇಗಂ ಅವರು ಸಿದ್ಧತೆಗಳ ಕುರಿತಂತೆ ಪರಿಶೀಲಿಸಿದರು. ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗದಗ ಹಾಗೂ ಹಾವೇರಿ ಜಿಲ್ಲೆಯ ಐದು ಹಾಗೂ ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಮತದಾರರ ವಿವರ ಹಾಗೂ ಮತಗಟ್ಟೆಗಳ ಸಿದ್ಧತೆ, ಸಹಾಯಕ ಚುನಾವಣಾಧಿಕಾರಿಗಳ ನೇಮಕದ ವಿವರ, ಮಹಿಳಾ ಮತ್ತು ಪುರುಷ ಮತದಾರರ ಅನುಪಾತ, ಮತದಾನದ ಪ್ರಮಾಣ, ಸೂಕ್ಷ್ಮ ಮತ್ತು ದುರ್ಬಲ ಮತಗಟ್ಟೆಗಳ ವಿವರ, ವಿದ್ಯುನ್ಮಾನ ಮತಯಂತ್ರಗಳ ಹಂಚಿಕೆ, ಚೆಕ್ ಪೋಸ್ಟ್‌ ಸ್ಥಳ ಮಾಹಿತಿ, ಮಸ್ಟರಿಂಗ್, ಡಿ-ಮಸ್ಟರಿಂಗ್ ಹಾಗೂ ಕೌಂಟಿಂಗ್ ಸೆಂಟರ್‌ಗಳ ಮಾಹಿತಿ, ಅಂಚೆ ಮತದಾನದ ಸಿದ್ಧತೆ ವಿವರಿಸಿದರು. ಹಾವೇರಿ ಲೋಕಸಭಾ ವ್ಯಾಪ್ತಿಯಲ್ಲಿ (ಹಾವೇರಿ-ಗದಗ ಜಿಲ್ಲೆ) ೧೩೩೬ ಸ್ಥಳಗಳಲ್ಲಿ ೧೯೮೨ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಶಿರಹಟ್ಟಿ ಕ್ಷೇತ್ರದಲ್ಲಿ ೨೫೧, ಗದಗ ಕ್ಷೇತ್ರದಲ್ಲಿ ೨೨೩, ರೋಣ ಕ್ಷೇತ್ರದಲ್ಲಿ ೨೬೭, ಹಾನಗಲ್ ಕ್ಷೇತ್ರದಲ್ಲಿ೨೪೩, ಹಾವೇರಿ ಕ್ಷೇತ್ರದಲ್ಲಿ ೨೬೧, ಬ್ಯಾಡಗಿ ಕ್ಷೇತ್ರದಲ್ಲಿ ೨೪೨, ಹಿರೇಕೆರೂರು ಕ್ಷೇತ್ರದಲ್ಲಿ ೨೨೯ ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ೨೬೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲೂ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಲೈಟಿಂಗ್, ಶೌಚಾಲಯ, ಪಿಠೋಪಕರಣ, ರ‍್ಯಾಂಪ್, ಶೆಲ್ಟರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ೨೮ ಚೆಕ್ ಪೋಸ್ಟ್ ಸ್ಥಾಪನೆ: ಹಾವೇರಿ ಜಿಲ್ಲೆಯಲ್ಲಿ ೧೮ ಹಾಗೂ ಗದಗ ಜಿಲ್ಲೆಯಲ್ಲಿ ೧೦ ಸೇರಿ ಒಟ್ಟು ೨೮ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಅಕ್ರಮಗಳ ಬಗ್ಗೆ ತೀವ್ರ ನಿಗಾವಹಿಸಲಿದೆ. ಪ್ರತಿ ಚೆಕ್ ಪೋಸ್ಟ್‌ನಲ್ಲಿ ವೆಬ್‌ಕ್ಯಾಮೆರಾ ಅಳವಡಿಸಿದ್ದು ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾವಹಿಸಲಾಗಿದೆ ಎಂದು ತಿಳಿಸಿದರು.

ಮಸ್ಟರಿಂಗ್ -ಡಿ ಮಸ್ಟರಿಂಗ್: ಹಾವೇರಿ ಲೋಕಸಭಾ ಕ್ಷೇತ್ರದ ಶಿರಹಟ್ಟಿ, ಗದಗ, ರೋಣ, ಹಾನಗಲ್, ಹಾವೇರಿ, ಬ್ಯಾಡಗಿ, ಹಿರೇಕೆರೂರು ಹಾಗೂ ರಾಣೇಬೆನ್ನೂರು ನಗರಗಳಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯ ಜರುಗಲಿದೆ. ಹಾವೇರಿ ಸರ್ಕಾರಿ ಇಂಜನೀಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತರಬೇತಿ: ಮತಗಟ್ಟೆ ಸಿಬ್ಬಂದಿಗಳಿಗೆ ಏ.೧೦ರಂದು ಮೊದಲ ಹಂತದ ತರಬೇತಿ ನೀಡಲಾಗಿದೆ. ಮೇ ೧ರಂದು ಎರಡನೇ ಹಂತದ ತರಬೇತಿ ಆಯೋಜಿಸಲಾಗಿದೆ. ಸೂಕ್ಷ್ಮ ವೀಕ್ಷಕರಿಗೆ ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ ಮೊದಲ ಹಂತದ ತರಬೇತಿ ನೀಡಲಾಗಿದೆ. ಗದಗ ಜಿಲ್ಲೆಯಲ್ಲಿ ಏ. ೨೬ರಂದು ತರಬೇತಿ ಜರುಗಲಿದೆ ಎಂದು ವಿವರಿಸಿದರು.

ಮನೆಯಿಂದ ಮತದಾನ:ಏ.೨೫ ರಿಂದ ೨೭ರವರೆಗೆ ೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರು ಮನೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೇ ೧ರಿಂದ ೩ರವರೆಗೆ ಅಗತ್ಯ ಸೇವಾ ಸಿಬ್ಬಂದಿಗೆ ಅಂಚೆ ಮತದಾನ ಸೌಲಭ್ಯ ಹಾಗೂ ಮೇ ೧ರಂದು ಚುನಾವಣಾ ಕರ್ತವ್ಯದಲ್ಲಿರುವವರಿಗೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಹಾವೇರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಗದಗ ಸಿಇಒ ಭರತ್, ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ನೇಮನಗೌಡ, ಹಾವೇರಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಗದಗ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸುರೇಖಾ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ನಿಯೋಜಿತಗೊಂಡಿರುವ ಸಾಮಾನ್ಯ ವೀಕ್ಷಕರಾದ ಐ.ಎ.ಎಸ್.ಅಧಿಕಾರಿ ಆದೇಶ ತಿತರ್‌ಮರೆ ಅವರು ಮತಗಟ್ಟೆ ಅಧಿಕಾರಿಗಳ ನಿಯೋಜನೆ ನಿಮಿತ್ತ ರ‍್ಯಾಂಡಮೈಜೇಷನ್ ಕಾರ್ಯವನ್ನು ವೀಕ್ಷಿಸಿದರು.