ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಪವಿತ್ರ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಕಿಡಿಗೇಡಿಗಳು ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದುಗಳ ಭಾವನೆಗೆ ಧಕ್ಕೆ ತರಲಾಗುತ್ತಿದೆ. ಹೋರಾಟದ ಮೂಲಕ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳ ನವೀನ್ ಎಚ್ಚರಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಈಗಾಗಲೇ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದೆ. ಈ ತನಿಖೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಕೆಲ ಕಿಡಿಗೇಡಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಕ್ಷೇತ್ರದ ಪಾವಿತ್ರ್ಯತೆ ಹಾಳು ಮಾಡುವ ಹುನ್ನಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ಹಿಂದೆ ಬೇರೆ ಯಾರದ್ದೋ ಕುಮ್ಮಕ್ಕು ಇದೆ ಎಂಬ ಅನುಮಾನ ಕಾಡುತ್ತಿದೆ. ಎಸ್‌ಐಟಿ ತನಿಖಾ ತಂಡದ ಬಗ್ಗೆ ಯಾವುದೇ ವಿವರ ನೀಡದಿದ್ದರು ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ದೂರಿದರು.ಇದು ಧರ್ಮಸ್ಥಳ ಕ್ಷೇತ್ರದ ಅಪಾರ ಭಕ್ತರ ಭಾವನೆಗಳನ್ನು ಘಾಸಿಗೊಳಿಸುತ್ತಿದೆ. ಈ ರೀತಿ ಆಧಾರ ರಹಿತ ಆರೋಪ ಮಾಡುವುದನ್ನು ನಿಲ್ಲಿಸದಿದ್ದರೆ ಹಿಂದುಗಳು ಒಗ್ಗೂಡಿ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದರೆ ಅದರ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆ ಅವರ ಅಪಾರ ಶ್ರಮವಿದೆ. ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳ ಮೂಲಕ ರಾಜ್ಯದ ಕೋಟ್ಯಂತರ ಮಹಿಳೆಯರ ಸ್ವಾವಲಂಬನೆ ಬದುಕಿಗೆ ಅವರು ದಾರಿ ಮಾಡಿಕೊಟ್ಟಿದ್ದಾರೆ ಎಂದರು.ಧರ್ಮಸ್ಥಳ ಸಂಸ್ಥೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹಿಂದು ದೇವಾಲಯಗಳ ಜೀರ್ಣೋದ್ಧಾರಕ್ಕೆ ಸಹಾಯಧನ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮ ನಡೆಸುತ್ತಿದೆ. ಕ್ಷೇತ್ರದ ಅಭಿವೃದ್ಧಿ ಸಹಿಸದ ದುರುಳರು ವ್ಯವವಸ್ಥಿತ ಅಪಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ನೀಲನಹಳ್ಳಿ ಧನಂಜಯ ಮಾತನಾಡಿ, ಧರ್ಮಸ್ಥಳದ ಹೆಸರಿನಲ್ಲೇ ಧರ್ಮ ಇದೆ. ಈ ಕ್ಷೇತ್ರಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಕೇಳಿ ಬಂದಿರುವ ಆರೋಪಗಳು ನಿಜವಾಗಿದ್ದರೆ ದೇಶದ ಕಾನೂನು ಅಂತಹವರಿಗೆ ಶಿಕ್ಷೆ ನೀಡುತ್ತದೆ ಎಂದರು.ಹಿಂದುಗಳ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಹೆಸರನ್ನು ಕಳಂಕ ತರುವ ನಿಟ್ಟಿನಲ್ಲಿ ಕೆಲವರು ಪಿತೂರಿ ನಡೆಸುತ್ತಿದ್ದಾರೆ. ಧರ್ಮಸ್ಥಳ ಸಂಸ್ಥೆ ಬಡವರ ಉದ್ದಾರಕ್ಕೆ ಶ್ರಮಿಸುತ್ತಿದೆ. ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ತಕ್ಷಣ ಇಂತಹ ನೀಚ ಕೃತ್ಯ ನಿಲ್ಲಿಸಬೇಕು. ಕ್ಷೇತ್ರದ ಬಗ್ಗೆ ಕಪೋಲಕಲ್ಪಿತ ಕತೆ ಕಟ್ಟಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಕಾರ್ಯದರ್ಶಿ ಪುರುಷೋತ್ತಮ್, ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಮಂಜುಳಾ ಶಂಕರ್‌ನಾಗ್ ಮುಖಂಡರಾದ ಚಿಕ್ಕಮರಳಿ ನವೀನ್‌ಕುಮಾರ್, ನಿರ್ಮಲ ರಮೇಶ್ ಅನುಸೂಯ ಇತರರು ಇದ್ದರು.