ಕೆರೆಗಳ ಹೂಳೆತ್ತುವ ಕಾರ್ಯ ವ್ಯವಸ್ಥಿತವಾಗಿ ನಡೆಸಿ: ಡೀಸಿ ಸೂಚನೆ

| Published : May 04 2024, 12:32 AM IST

ಕೆರೆಗಳ ಹೂಳೆತ್ತುವ ಕಾರ್ಯ ವ್ಯವಸ್ಥಿತವಾಗಿ ನಡೆಸಿ: ಡೀಸಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ನೀರು ಬತ್ತಿ ಹೋಗಿರುವ ಕೆರೆಗಳಲ್ಲಿ ರೈತರು ಅನಧಿಕೃತವಾಗಿ ಮಣ್ಣನ್ನು ಇತಿ-ಮಿತಿಯಿಲ್ಲದೇ ತೆಗೆಯುತ್ತಿದ್ದಾರೆ ಎಂದು ದೂರುಗಳು ಕೇಳಿ ಬರುತ್ತಿದೆ. ಮಣ್ಣು ಸಾಗಿಸುವಾಗ ರಸ್ತೆ ಮೇಲೆಲ್ಲಾ ಮಣ್ಣು ಹಾಗೂ ಧೂಳು ಚೆಲ್ಲುತ್ತಿದ್ದೂ, ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಂದಿನ ದಿನಗಳಲ್ಲಿ ಮಳೆಗಾಲ ಬರುವುದರಿಂದ ಮಳೆ ನೀರಿನ ಶೇಖರಣೆ ಮಾಡಲು ಜಿಲ್ಲೆಯ ಕೆರೆ-ಕಟ್ಟೆಗಳಲ್ಲಿ ಹೂಳೆತ್ತುವ ಕಾರ್ಯ ವ್ಯವಸ್ಥಿತವಾಗಿ ಹಾಗೂ ಶೀಘ್ರವಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ಅತಿಯಾದ ಬಿಸಿಲಿನ ತಾಪಮಾನ ಹಾಗೂ ಮಳೆ ಬಾರದೆ ಇರುವುದರಿಂದ ಕೆರೆಗಳೆಲ್ಲ ಬತ್ತಿ ಹೋಗಿವೆ. ಮುಂದಿನ ದಿನಗಳಲ್ಲಿ ಕೆರೆ-ಕಟ್ಟೆಗಳಲ್ಲಿ ನೀರು ತುಂಬಿಸಲು ಕ್ರಮ ವಹಿಸುವಂತೆ ಸೂಚಿಸಿದರು.

ತಾಲೂಕುವಾರು ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ಇದುವರೆಗೂ ಕೆರೆಗಳಲ್ಲಿ ಹೂಳೆತ್ತಿರುವ ಬಗ್ಗೆ ಹಾಗೂ ಈ ತಿಂಗಳಲ್ಲಿ ಹೂಳೆತ್ತುವ ಕೆರೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ನೀರು ಬತ್ತಿ ಹೋಗಿರುವ ಕೆರೆಗಳಲ್ಲಿ ರೈತರು ಅನಧಿಕೃತವಾಗಿ ಮಣ್ಣನ್ನು ಇತಿ-ಮಿತಿಯಿಲ್ಲದೇ ತೆಗೆಯುತ್ತಿದ್ದಾರೆ ಎಂದು ದೂರುಗಳು ಕೇಳಿ ಬರುತ್ತಿದೆ. ಮಣ್ಣು ಸಾಗಿಸುವಾಗ ರಸ್ತೆ ಮೇಲೆಲ್ಲಾ ಮಣ್ಣು ಹಾಗೂ ಧೂಳು ಚೆಲ್ಲುತ್ತಿದ್ದೂ, ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಜಿಪಂ ಸಿಇಒ ಶೇಕ್ ತನ್ವಿರ್ ಆಸೀಫ್ ಮಾತನಾಡಿ, ಮಾರ್ಚ್ ತಿಂಗಳಲ್ಲಿ ವಿಶ್ವ ಜಲ ದಿನದ ಪ್ರಯುಕ್ತ ಕೆರೆಗಳ ಹೂಳೆತ್ತುವ ಹಾಗೂ ಕೆರೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಕೆರೆಗಳು, ಕಲ್ಯಾಣಿ, ಕಾಲುವೆಗಳ ಅಭಿವೃದ್ಧಿ ಕಾಮಗಾರಿಯನ್ನು ವ್ಯವಸ್ಥಿತವಾಗಿ ನಡೆಸಿ ಪ್ರತಿ ತಾಲೂಕುವಾರು 2 ಕೆರೆಗಳ ಅಭಿವೃದ್ಧಿ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಮಳೆಯಾಗದ ಕಾರಣ ನೀರಿನ ಸಮಸ್ಯೆಯಿದ್ದು, ಜನ ಮತ್ತು ಜಾನುವಾರುಗಳಿಗೆ ಸಮಸ್ಯೆಯಾಗದಂತೆ ಆಯಾ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಿ ಎಂದರು.

ಹಿಂದಿನ ವರ್ಷಗಳ ಮಾಹಿತಿಯ ಆಧಾರದ ಮೇಲೆ ಕುಡಿಯುವ ನೀರಿನ ಕೊರತೆ ಉಂಟಾಗುವ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದೆ. ಈ ಗ್ರಾಮಗಳ ವಸ್ತುಸ್ಥಿತಿಯ ಮೇಲೆ ನಿಗಾವಹಿಸಬೇಕು ಎಂದರು.