ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಹಲವು ಬದಲಾವಣೆಗಳಾಗುತ್ತಿವೆ.
ಕನ್ನಡಪ್ರಭ ವಾರ್ತೆ ನಂಜನಗೂಡು
ಆಧುನಿಕ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು, ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಪತ್ರಕರ್ತರು ಹೊಂದಿಕೊಳ್ಳಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಕರೆ ನೀಡಿದರು.ಶ್ರಾವಣ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಂಜನಗೂಡು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ 2025ನೇ ಸಾಲಿನ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉಧ್ಘಾಟಿಸಿ ಅವರು ಮಾತನಾಡಿ, ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಹಲವು ಬದಲಾವಣೆಗಳಾಗುತ್ತಿವೆ. ಈ ಬದಲಾವಣೆಗಳಿಗೆ ಪತ್ರಕರ್ತರು ಹೊಂದಿಕೊಳ್ಳಬೇಕು. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ನಿಖರ ಹಾಗೂ ವಿಶ್ವಾಸಾರ್ಹ ಸುದ್ದಿಗಳನ್ನು ಜನರಿಗೆ ತಲುಪಿಸಬೇಕು. ಸಮಾಜದಲ್ಲಿನ ಸಮಸ್ಯೆ ಗಳನ್ನು ಗುರುತಿಸಿ, ಜನರ ದ್ವನಿಯಾಗಿಕಾರ್ಯನಿರ್ವಹಿಸುವ ಮೂಲಕ ಪತ್ರಿಕೋದ್ಯಮ ದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದರು.
ಮುಖ್ಯ ಭಾಷಣಕಾರರಾದ ಹಿರಿಯ ಪತ್ರಕರ್ತ ರಮೇಶ್ ಉತ್ತಪ್ಪ ಮಾತನಾಡಿ, ಮುದ್ರಣ ಮಾಧ್ಯಮದ ಭವಿಷ್ಯ ಮುಗಿದಿದೆ ಎಂಬ ಮಾತುಗಳನ್ನು ಸಾಕಷ್ಟು ಬಾರಿ ಕೇಳಿದ್ದೇನೆ. ಪತ್ರಿಕೆ ಓದಲು ಸಮಯವಿಲ್ಲ, ಮೊಬೈಲ್‌ನಲ್ಲೇ ಸುದ್ದಿ ಸಿಗುತ್ತದೆ ಎಂದು ಹೇಳುವವರು ಪತ್ರಿಕೆಗಳನ್ನು ಖರೀದಿಸಿ ಓದುವ ಮೂಲಕ ಮುದ್ರಣ ಮಾಧ್ಯಮವನ್ನು ಬೆಳೆಸಬೇಕು ಎಂದರು.ಪ್ರಜಾಪ್ರಭುತ್ವದ ಬೇರುಗಳು ಪತ್ರಿಕೆಗಳಲ್ಲಿವೆ. ಪತ್ರಿಕೆಗಳನ್ನು ಬೆಳೆಸದಿದ್ದರೆ ನಷ್ಟವಾಗುವುದು ಪತ್ರಕರ್ತರಿಗೆ ಮಾತ್ರವಲ್ಲ, ಜನರು ತಮ್ಮ ಧ್ವನಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಪತ್ರಿಕೋದ್ಯಮ ತೊರೆದ ಕೆಲವು ಪತ್ರಕರ್ತರು ಹೊರಗಡೆ ಉತ್ತಮ ಸ್ಥಿತಿಯಲ್ಲಿದ್ದಾರೆ . ಪತ್ರಿಕೋದ್ಯಮದ ಮಹತ್ವವನ್ನು ಕಡೆಗಣಿಸಬಾರದು. ಪತ್ರಿಕೆಗಳು ಉಳಿಯುವುದು ಪ್ರಜಾಪ್ರಭುತ್ವದ ಬಲವರ್ಧನೆಗೆ ಅಗತ್ಯವಾಗಿದೆ ಎಂದು ತಿಳಿಸಿದರು.
ಪತ್ರಕರ್ತರು ಅನಗತ್ಯ ಭ್ರಮೆಗಳನ್ನು ಬದಿಗಿಟ್ಟು ವಾಸ್ತವದ ಅರಿವಿನೊಂದಿಗೆ ಕಾರ್ಯನಿರ್ವಹಿಸಬೇಕು. ವೃತ್ತಿಜೀವನದ ಒತ್ತಡದ ನಡುವೆಯೂ ಕುಟುಂಬದ ಆರೋಗ್ಯ, ಮಕ್ಕಳ ಶಿಕ್ಷಣ ಹಾಗೂ ವೈಯಕ್ತಿಕ ಬದುಕಿಗೂ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪತ್ರಕರ್ತ ರ ಸಂಘದ ಅದ್ಯಕ್ಷ ಕೆ. ದೀಪಕ್ ಸಲಹೆ ನೀಡಿದರು.ಸ್ವತಂತ್ರ ಭಾರತದ ನಿರ್ಮಾಣಕ್ಕೆ ಶ್ರಮಿಸಿದ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಲಗಂಗಾಧರ ತಿಲಕರ ಆದರ್ಶಗಳನ್ನು ಪತ್ರಕರ್ತರು ಪಾಲಿಸಬೇಕು. ಅವರ ವಿಚಾರಧಾರೆಗಳ ವಾರಸುದಾರರು ತಾವು ಎಂಬ ಅರಿವು ಪತ್ರಕರ್ತರಲ್ಲಿ ಮೂಡಬೇಕು. ಪತ್ರಿಕೋದ್ಯಮದ ಮೌಲ್ಯ ಮತ್ತು ಘನತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಪತ್ರಕರ್ತನ ಜವಾಬ್ದಾರಿಯಾಗಿದೆ ಎಂದರು.
ಪತ್ರಕರ್ತರು ಮಾಹಿತಿ ಸಂಗ್ರಹಿಸಿ, ವಾಸ್ತವಾಂಶಗಳ ಆಧಾರದ ಮೇಲೆ ವರದಿ ಮಾಡಬೇಕು. ಸುದ್ದಿಗಳಲ್ಲಿ ವೈಯಕ್ತಿಕ ಅಭಿಪ್ರಾಯಗಳನ್ನು ಬೆರೆಸದೆ ವಸ್ತುನಿಷ್ಠತೆಗೆ ಆದ್ಯತೆ ನೀಡಬೇಕು. ಪ್ರಜಾಪ್ರಭುತ್ವದ ಉಳಿವು ಮತ್ತು ಬಲವರ್ಧನೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.ಪ್ರಸ್ತುತ ಸಾಮಾಜಿಕ ಮಾಧ್ಯಮಗಳು ಭವಿಷ್ಯದ ಮಾಧ್ಯಮಗಳಾಗಿ ಬೆಳೆಯುತ್ತಿವೆ. ಆದರೆ, ಯಾವುದೇ ಹೊಣೆಗಾರಿಕೆ ಇಲ್ಲದ ಮಾಧ್ಯಮಗಳನ್ನು ಬಳಸಿಕೊಂಡು ಆಡಳಿತ ನಡೆಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತರಿಗಾಗಿ ಆರು ಕೋಟಿ ರೂ. ವೆಚ್ಚದಲ್ಲಿ ಪತ್ರಕರ್ತರ ಭವನ ನಿರ್ಮಿಸಲಾಗುತ್ತಿದೆ. ಈಗಾಗಲೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮೂರು ಕೋಟಿ ಅನುದಾನ ನೀಡಿದ್ದಾರೆ ಎಂದರು,ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಹಿತಾಸಕ್ತಿ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತರುವ ಪತ್ರಕರ್ತರು ವೃತ್ತಿಯ ಜತೆಗೆ ಕುಟುಂಬದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸಬೇಕು ಎಂದರು.
ಶಿವರಾತ್ರಿಶ್ವರ ಮಾದ್ಯಮ ಪ್ರಶಸ್ತಿಯನ್ನು ಗ್ರಾಮೀಣ ಪತ್ರಕರ್ತ ಟಿ,ಕೆ, ಬಸವರಾಜು ಅವರಿಗೆ ಸುತ್ತೂರು ಮಠದ ಜೆಎಸ್ಎಸ್ ವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ರಾದ ಆರ್,ಮಹೇಶ್ ಪ್ರದಾನ ಮಾಡಿದರು.ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಧರ್ಮಾಪುರ ನಾರಾಯಣ್, ನಿರ್ದೇಶಕ ಹುಲ್ಲಹಳ್ಳಿ ಮೋಹನ್, ತಾಲೂಕು ಅದ್ಯಕ್ಷ ಎಚ್.ಡಿ. ರಂಗಸ್ವಾಮಿ, ನಂಜನಗೂಡು ಮಧು. ಬಸವರಾಜು, ವೇಣು. ಭಾಗವಹಿಸಿದ್ದರು.