ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದಲ್ಲಿ ಪುತ್ತರಿ ಕೋಲಾಟ್ ಹಾಗೂ ಉಮ್ಮತ್ತಾಟ್ ಪಡಿಪು ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಕೊಡವ ಜನಪದ ಆಟ್-ಪಾಟ್ ಕಲಿಯಲು ಇಂದಿನ ಯುವ ಪೀಳಿಗೆ ಹೆಚ್ಚು ಆಸಕ್ತಿ ತೋರುತ್ತಿರುವುದು ಸಂತಸದ ವಿಚಾರವಾಗಿದ್ದು, ಕೊಡವ ಸಂಸ್ಕೃತಿಯ ಬಲವರ್ಧನೆಗೆ ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಟಿ. ಶೆಟ್ಟಿಗೇರಿ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ನಡೆದ ಪುತ್ತರಿ ಕೋಲಾಟ್ ಹಾಗೂ ಉಮ್ಮತ್ತಾಟ್ ಪಡಿಪು ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಕ್ಕಳಿಗೆ ನಮ್ಮ ಸಂಸ್ಕೃತಿಯ ಮೇಲೆ ಆಸಕ್ತಿ ಹುಟ್ಟುವಂತೆ ಮಾಡುತ್ತಿರುವ ಪೋಷಕರ ಪ್ರಯತ್ನವು ಕೂಡ ಅಷ್ಟೇ ಮುಖ್ಯವಾದದ್ದಾಗಿದ್ದು ಇದೇ ರೀತಿಯಲ್ಲಿ ಪೋಷಕರ ಸಹಕಾರವಿದ್ದರೆ ಇನ್ನಷ್ಟು ಈ ರೀತಿಯ ಶಿಬಿರಗಳನ್ನು ನಮ್ಮ ಕೊಡವ ಸಮಾಜದ ವತಿಯಿಂದ ನಡೆಸಲಾಗುವುದು ಎಂದು ಹೇಳಿದರು.ಕೊಡವ ಸಮಾಜದ ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ ಟಿ.ಶೆಟ್ಟಿಗೇರಿ ಕೊಡವ ಸಮಾಜವು ನಿರಂತರ ಚಟುವಟಿಕೆಯ ಕೇಂದ್ರವಾಗಿದ್ದು, ಕೊಡವ ಸಂಸ್ಕೃತಿಯ ಉಳಿಕೆ ಹಾಗೂ ಬೆಳವಣಿಗಾಗಿ ಯುವ ಪೀಳಿಗೆಗೆ ಹೆಚ್ಚಿನ ಆಸಕ್ತಿ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದು, ಅದರ ಭಾಗವಾಗಿ ಕೊಡವ ಸಂಸ್ಕೃತಿಯ ಮೂಲ ಬೇರಾದ ಜನಪದ ಆಟ್-ಪಾಟ್ ಕಲಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಬೊಳಕಾಟ್, ಕತ್ತಿಯಾಟ್ ಸೇರಿದಂತೆ ನಮ್ಮ ಸಂಸ್ಕೃತಿಯ ಎಲ್ಲಾ ಆಟ್-ಪಾಟ್''''''''''''''''ಗಳನ್ನು ಕಲಿಸಲಾಗುವುದು ಎಂದರು.ಉಮ್ಮತ್ತಾಟ್ ಕಲಿಸಿದ ಕೊಡವ ಸಮಾಜದ ನಿರ್ದೇಶಕಿ ಚಂಗುಲಂಡ ಅಶ್ವಿನಿ ಸತೀಶ್ ಮಾತನಾಡಿ, ಮಕ್ಕಳು ಅತಿ ಹೆಚ್ಚು ಉತ್ಸಾಹದಿಂದ ಕಲಿಕಾ ಶಿಬಿರದಲ್ಲಿ ಭಾಗವಹಿಸಿ ಬಹಳ ಬೇಗನೆ ಕಲಿಯುತ್ತಿದ್ದದ್ದು ಹಾಗೂ ಪೋಷಕರು ಸಮಯಕ್ಕೆ ಸರಿಯಾಗಿ ಮಕ್ಕಳನ್ನು ಕರೆತರುತಿದ್ದದ್ದು ಮಕ್ಕಳ ಉಮ್ಮತ್ತಾಟ್ ಕಲಿಕೆಗೆ ಪೂರಕವಾಗಿತ್ತು ಎಂದು ಸಂತಸ ವ್ಯಕ್ತಪಡಿಸಿದರು. ಪುತ್ತರಿ ಕೋಲಾಟ್ ಕಲಿಸಿದ ಕೊಡವ ಸಮಾಜದ ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ ಮಾತನಾಡಿ ನಾವು ಪಾಶ್ಚಾತ್ಯ ಸಂಸ್ಕೃತಿ ಕಲಿಯಲು ತೋರುವ ಆಸಕ್ತಿ, ಹುಮ್ಮಸ್ಸು ನಮ್ಮ ನಾಡಿನ ಸಂಸ್ಕೃತಿ ಕಲಿಯಲು ತೋರದಿರುವುದು ನಮ್ಮ ಸಂಸ್ಕೃತಿಯ ಹಿನ್ನಡೆಗೆ ಕಾರಣವಾಗುತ್ತಿರುವುದನ್ನು ಮನಗಂಡು ಈ ಶಿಬಿರ ಆಯೋಜಿಸಲಾಗಿದ್ದು, ಕೊಡವ ಜಾನಪದ ಆಟ್''''''''''''''''ಗಳ ಪೈಕಿ ಪ್ರಾಥಮಿಕವಾಗಿ ಪುತ್ತರಿ ಕೋಲಾಟ್ ಕಲಿತರೆ ಇತರೆ ಆಟ್ ಕಲಿಯುವುದು ಸುಲಭ ಸಾಧ್ಯ. ಆದ್ದರಿಂದ ಮೊದಲು ಕೋಲಾಟ್ ಕಲಿಸಲಾಗಿದ್ದು, ಶಿಬಿರದಲ್ಲಿ ಭಾಗವಹಿಸಿದ್ದ ಕಲಿಕಾರ್ತಿಗಳು ಹಾಗೂ ಪೋಷಕರ ಸ್ಪಂದನೆ ಉತ್ತಮವಾಗಿದ್ದು ಇದನ್ನ ಮುಂದುವರಿಸಿಕೊಂಡು ಹೋಗುವುದರೊಂದಿಗೆ ಕೊಡವ ಸಂಸ್ಕೃತಿಯ ಉಳಿಕೆಗೆ ಎಲ್ಲಾರೂ ಕೈಜೋಡಿಸಬೇಕೆಂದರು. "ಉಮ್ಮತ್ತಾಟ್ ಹಾಗೂ ಕೋಲಾಟ್ ಶಿಬಿರದಲ್ಲಿ ಭಾಗವಹಿಸಿದ್ದ 26 ಶಿಬಿರಾರ್ಥಿಗಳು 5 ರಂದು ನಡೆಯುವ ನೆಮ್ಮಲೆ ಕೋಲ್ ಮಂದ್ ನಮ್ಮೆಯಲ್ಲಿ ಪ್ರಥಮ ಪ್ರದರ್ಶನ ನೀಡಲಿದ್ದಾರೆ. "ಸಮಾರಂಭದ ಆರಂಭದಲ್ಲಿ ಕೊಡವ ಸಮಾಜದ ನಿರ್ದೇಶಕಿ ಕರ್ನಂಡ ರೂಪ ದೇವಯ್ಯ ಪ್ರಾರ್ಥಿಸಿ, ಖಜಾಂಚಿ ಚಂಗುಲಂಡ ಸತೀಶ್ ಸ್ವಾಗತಿಸಿ ವಂದಿಸಿದರು. ಈ ಸಂದರ್ಭ ವೇದಿಕೆಯಲ್ಲಿ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ನಿರ್ದೇಶಕಿ ತೀತೀರ ಅನಿತ ಸುಬ್ಬಯ್ಯ, ನಿರ್ದೇಶಕ ಬಾದುಮಂಡ ವಿಷ್ಣು ಕಾರ್ಯಪ್ಪ, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಡ ರೇಶ್ಮ ಕಾರ್ಯಪ್ಪ, ಕೋಲಾಟ್ ಶಿಕ್ಷಕ ಆಲೆಮಾಡ ಭವನ್ ಬೋಪಣ್ಣ ಉಪಸ್ಥಿತರಿದ್ದರು.