ಶಿಕ್ಷಕರ ಬೆಂಬಲ: ಬಡತನ ಮೆಟ್ಟಿ 6 ಚಿನ್ನದ ಪದಕ ಗಳಿಸಿದ ಸಾಧಕಿ

| Published : Apr 29 2024, 01:35 AM IST

ಶಿಕ್ಷಕರ ಬೆಂಬಲ: ಬಡತನ ಮೆಟ್ಟಿ 6 ಚಿನ್ನದ ಪದಕ ಗಳಿಸಿದ ಸಾಧಕಿ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ವಿವಿ ಎಂಎಸ್‌ಡಬ್ಲ್ಯುನಲ್ಲಿ ರ್‍ಯಾಂಕ್‌ ಪಡೆದ ಗ್ರಾಮೀಣ ವಿದ್ಯಾರ್ಥಿನಿ ಸ್ಮಿತಾ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ನಂದೀಶ್‌ ಅವರಂತಹ ಗುರುಗಳು ಎಲ್ಲೆಡೆ ಲಭಿಸಿದರೆ, ಸ್ಮಿತಾಳಂತ ಅದೆಷ್ಟು ಬಡ ವಿದ್ಯಾರ್ಥಿಗಳ ಪ್ರತಿಭೆ ಅನಾವರಣವಾಗುತ್ತಿತ್ತು.....

ಇದು ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಬಜತ್ತೂರು ಎಂಬ ಗ್ರಾಮದಲ್ಲಿ ಹುಟ್ಟಿ ಬೆಳೆದು ಅಲ್ಲಿಯೇ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪಡೆದು, ಉಪ್ಪಿನಂಗಡಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣ ಸಾಧನೆಯೊಂದಿಗೆ ಪಡೆದ ಯುವತಿಯ ಮಾತು. ಪ್ರಸಕ್ತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂಎಸ್‌ಡಬ್ಲ್ಯು ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕ ಪಡೆದು ಉತ್ತೀರ್ಣಳಾದ ಸ್ಮಿತಾ ಅವರ ಸಾಧನೆಯ ಉದ್ಗಾರ ಇದು.

ನಾನು ತೀರಾ ಬಡ ಕುಟುಂಬದವಳು. ಕಲಿಯುವುದಕ್ಕೆ ಆಸಕ್ತಿ ಇತ್ತು. ಯಾವುದನ್ನು ಕಲಿಯಬೇಕೆನ್ನುವುದರ ಬಗ್ಗೆ ಅರಿವಿರಲಿಲ್ಲ. ನನ್ನ ಕಲಿಕಾಸಕ್ತಿಯನ್ನು ಗುರುತಿಸಿ, ಕಲಿಕೆಗೆ ದಿಕ್ಕುದೆಸೆಯನ್ನು ಒದಗಿಸಿ, ವಿದ್ಯಾರ್ಥಿವೇತನದ ಬಗ್ಗೆಯೂ ನಾನು ಗಮನ ಹರಿಸುವಂತೆ ಮಾಡಿ, ನನ್ನಂತಹ ಬಡ ವಿದ್ಯಾರ್ಥಿನಿಯೋರ್ವಳು ೬ ಚಿನ್ನದ ಪದಕದೊಂದಿಗೆ ಸ್ನಾತಕೋತರ ಪದವಿ ಪರೀಕ್ಷೆಯನ್ನು ಉತ್ತೀರ್ಣಳಾಗಿದ್ದೇನೆ ಎಂದರೆ ಅದಕ್ಕೆ ನನ್ನ ಪದವಿ ಶಿಕ್ಷಣದ ಪ್ರಾಧ್ಯಾಪಕ ನಂದೀಶ್ ವೈ.ಡಿ. ಅವರೇ ಕಾರಣ ಎಂದು ಸ್ಮಿತಾ ಹೇಳಿದರು.

ನಂದೀಶ್ ವೈ.ಡಿ. ಎಳೆಯ ವಯಸ್ಸಿನ ಪ್ರಾಧ್ಯಾಪಕ. ಉಪ್ಪಿನಂಗಡಿ ಸರ್ಕಾರಿ ಪದವಿ ಕಾಲೇಜಿಗೆ ಕರ್ತವ್ಯಕ್ಕೆ ಸೇರಿದಾಗಿನಿಂದ ಅವರ ಬರವಣಿಗೆಯ ಹವ್ಯಾಸಕ್ಕೆ ಪ್ರೇರಣೆಯಾದ ತಾಣವೆಂದರೆ ಉಪ್ಪಿನಂಗಡಿಯ ನೇತ್ರಾವತಿ ಕುಮಾರಧಾರಾ ನದಿ ಸಂಗಮ ತಟ. ಅಲ್ಲಿ ಅಕ್ಷರಗಳನ್ನು ಗೀಚುತ್ತಲೇ ಅವರು ಊರಿನ ಮಂದಿಗೆ ಪರಿಚಿತರಾದವರು.

ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿ ತಮ್ಮ ಕಾಲೇಜಿಗೆ ಆಗಮಿಸಿದ ಸ್ಮಿತಾಳ ಕಲಿಕಾಸಕ್ತಿಯನ್ನು ಕಂಡ ಅವರು, ಸಮಾಜ ವಿಜ್ಞಾನದತ್ತ ಗಮನ ಹರಿಸಲು ಸಲಹೆ ನೀಡಿದರು. ಮನೆಯಲ್ಲಿನ ಬಡತನ ಆಕೆಯ ಕಲಿಕೆಗೆ ಅಡಚಣೆಯಾಗಬಾರದೆಂದು ಯಾವೆಲ್ಲ ವಿದ್ಯಾರ್ಥಿವೇತನಗಳು ಇದೆಯೋ ಅದಕ್ಕೆಲ್ಲ ಅರ್ಜಿಸಲ್ಲಿಸಲು, ಪರೀಕ್ಷೆ ಬರೆಯಲು ಉತ್ತೇಜನ ನೀಡಿದರು. ಪ್ರಾಧ್ಯಾಪಕರಿಂದ ದೊರೆತ ಬೆಂಬಲವನ್ನು ಸದ್ಬಳಕೆ ಮಾಡಿಕೊಂಡ ಸ್ಮಿತಾ, ಬಿಎಸ್‌ಡಬ್ಲ್ಯು ಪರೀಕ್ಷೆಯಲ್ಲಿ ರ‍್ಯಾಂಕ್‌ ಗಳಿಸಿ ಊರಿಗೆ ಗೌರವ ತಂದಿತ್ತರು.

ಬಡ ವಿದ್ಯಾರ್ಥಿನಿಯನ್ನು ರ‍್ಯಾಂಕ್ ಗಳಿಸುವಂತೆ ಮಾಡುವಲ್ಲಿ ಯಶಸ್ಸು ಸಾಧಿಸಿದೆ ಎಂದು ತನ್ನ ಕರ್ತವ್ಯವನ್ನು ನಿಲ್ಲಿಸದ ನಂದೀಶ್, ಆಕೆಗೆ ಅಗತ್ಯ ಮಾರ್ಗದರ್ಶನ ನೀಡಿ ಆಕೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತರ ಪದವಿ ಪಡೆಯಲು ಪ್ರೇರಣೆ ನೀಡಿದರು. ಅಲ್ಲಿಯೂ ಅಗತ್ಯ ವಿದ್ಯಾರ್ಥಿವೇತನ ಲಭಿಸುವಂತಾಗಲು ಸಹಕರಿಸಿದರು. ಒಟ್ಟಾರೆ ಎಲ್ಲ ಬಗೆಯ ಸಹಕಾರವನ್ನು ಪಡೆದು ಆರು ಚಿನ್ನದ ಪದಕಗಳೊಂದಿಗೆ ಸ್ನಾತಕೋತರ ಪದವಿ ಪೂರ್ಣಗೊಳಿಸಿದ ಸ್ಮಿತಾಳ ಬಗ್ಗೆ ದೇಶಾದ್ಯಂತ ಪ್ರಮುಖ ಪತ್ರಿಕೆಗಳು ವರದಿ ಪ್ರಕಟಿಸಿದವು.

ಆ ವರದಿಯ ಸಂದರ್ಭದಲ್ಲಿ ಆಕೆ ನೀಡಿದ ಹೇಳಿಕೆಯೇ ಗುರುವಿನ ಸ್ಥಾನದಲ್ಲಿದ್ದ ನಂದೀಶ್ ವೈ.ಡಿ. ಅವರ ನೈಜ ಗುರು ತತ್ವವನ್ನು ಅನಾವರಣಗೊಳಿಸಿತು.

ಪ್ರತಿಭೆಗೂ ಇವರು ವೇದಿಕೆ:

ಅಂದ ಹಾಗೆ ನಂದೀಶ್ ಅವರು ತಮ್ಮ ಕಾಲೇಜು ವಿದ್ಯಾರ್ಥಿಗಳ ನಟನಾ ಸಾಮರ್ಥ್ಯವನ್ನು ಕೂಡ ಹೊರ ಜಗತ್ತಿಗೆ ಅನಾವರಣಗೊಳಿಸಿದ್ದು, ಜಿಲ್ಲಾಡಳಿತ ಕಲ್ಪಿಸಿದ ಸ್ಪರ್ಧೆಯಲ್ಲಿ ಉಪ್ಪಿನಂಗಡಿಯಂತಹ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಟಿಸಿದ ಕಿರು ಸಾಕ್ಷ್ಯ ಚಿತ್ರವೊಂದು ಸ್ಪರ್ಧಾ ಕಣದಲ್ಲಿ ಪ್ರಥಮ ಸ್ಥಾನ ಪಡೆಯಲು ಇವರ ನಿರ್ದೆಶನವೇ ಕಾರಣವಾಗಿತ್ತು.

ನನ್ನನ್ನು ಕಾಡಿದ ಬಡತನ ನನ್ನ ಕಲಿಕೆ ಅಡ್ಡಿಯಾಗಲಿಲ್ಲ. ನನ್ನನ್ನು ಕಾಡಿದ ಬಡತನ ನನ್ನ ಸಾಧನೆಗೆ ಅಡ್ಡಿಯಾಗಲಿಲ್ಲ. ನನ್ನ ಪಾಲಿಗೆ ದೇವರಂತೆ ನನಗೆ ಮಾರ್ಗದರ್ಶಕರಾಗಿ ಪ್ರೇರಕರಾಗಿ ಕಲಿಕೆಗೆ ದಿಕ್ಕು ದೆಸೆಯನ್ನು ನೀಡಿದ ಪ್ರ‍್ರಾಧ್ಯಾಪಕರಿಂದಲೇ ನನಗೆ ಈ ಎಲ್ಲ ಸಾಧನೆ ತೋರಲು ಸಾಧ್ಯವಾಯಿತು.। ಸ್ಮಿತಾ, ಸಾಧಕ ವಿದ್ಯಾರ್ಥಿನಿ