30ರಂದು ಟೇಕ್ವಾಂಡೋ ಗರ್ಲ್ ತೆರೆಗೆ: ರವೀಂದ್ರ ವೆಂಶಿ

| Published : Aug 25 2024, 01:46 AM IST

ಸಾರಾಂಶ

ಆಥ್ರೇಯ ಕ್ರಿಯೇಷನ್ಸ್ ಬ್ಯಾನರಿನಲ್ಲಿ, ಶಿವಮೊಗ್ಗದ ಡಾ. ಸುಮಿತ ಪ್ರವೀಣ್‌ ನಿರ್ಮಿಸಿರುವ, ರವೀಂದ್ರ ವೆಂವಿ ನಿರ್ದೇಶನದ ಟೇಕ್ವಾಂಡೋ ಗರ್ಲ್‌ ಚಿತ್ರವು ಆ.30ರಂದು ಬಿಡುಗಡೆಯಾಗಲಿದೆ. ಟೇಕ್ವಾಂಡೋ ಗರ್ಲ್ ಆಗಿ ಋತು ಸ್ಪರ್ಶ ಪ್ರಥಮ ಬಾರಿಗೆ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ರವೀಂದ್ರ ವೆಂಶಿ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಆಥ್ರೇಯ ಕ್ರಿಯೇಷನ್ಸ್ ಬ್ಯಾನರಿನಲ್ಲಿ, ಶಿವಮೊಗ್ಗದ ಡಾ. ಸುಮಿತ ಪ್ರವೀಣ್‌ ನಿರ್ಮಿಸಿರುವ, ರವೀಂದ್ರ ವೆಂವಿ ನಿರ್ದೇಶನದ ಟೇಕ್ವಾಂಡೋ ಗರ್ಲ್‌ ಚಿತ್ರವು ಆ.30ರಂದು ಬಿಡುಗಡೆಯಾಗಲಿದೆ. ಟೇಕ್ವಾಂಡೋ ಗರ್ಲ್ ಆಗಿ ಋತು ಸ್ಪರ್ಶ ಪ್ರಥಮ ಬಾರಿಗೆ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ರವೀಂದ್ರ ವೆಂಶಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣುಮಕ್ಕಳು ತಮಗೆ ತಾವೇ ಹೇಗೆ ರಕ್ಷಿಸಿಕೊಳ್ಳಬೇಕೆಂಬ ಮಹತ್ತರ ಸಂದೇಶವಿದು. ಸುಮಾರು 200 ಮಕ್ಕಳಿಗೆ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ಕಳಕಳಿ ಹೊಂದಿರುವ ಟೇಕ್ವಾಂಡೋ ಗರ್ಲ್‌ ಚಿತ್ರವನ್ನು ತಮ್ಮ ತಂಡವು ತೆರೆಗೆ ತಂದಿದೆ ಎಂದರು.

ಅಂತರ ರಾಷ್ಟ್ರೀಯ ಬ್ಲಾಕ್‌ ಬೆಲ್ಟ್‌ ಪ್ರತಿಭೆ:

ರಾಜ್ಯದ ಎಲ್ಲ ಶಾಲಾ ಮಕ್ಕಳಿಗೂ ತೋರಿಸಬೇಕೆಂಬುದು ಚಿತ್ರದ ನಿರ್ಮಾಪಕರ ಮನದಾಳದ ಆಸೆಯಾಗಿದೆ. ಮುಖ್ಯ ಪಾತ್ರದಲ್ಲಿರುವ ಋತು ಸ್ಪರ್ಶ ಸುಮಾರು 8 ವರ್ಷದಿಂದ ಟೇಕ್ವಾಂಡೋ ಸಮರ ಕಲೆಯನ್ನು ಕಲಿತು, 5 ಸಲ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ, ಬ್ಲಾಕ್ ಬೆಲ್ಟ್ ಪಡೆದಿರುವ ಬಾಲಪ್ರತಿಭೆ. ಅಂತರ ರಾಷ್ಟ್ರೀಯ ನೃತ್ಯಗಾರ್ತಿಯೂ ಆಗಿರುವ ಈ ಅಪ್ಪಟ ದೇಸಿ ಕಲಾ ಪ್ರತಿಭೆಯ ಮೊದಲ ಸಿನಿಮಾ ಇದಾಗಿದೆ ಎಂದು ಹೇಳಿದರು.

ವಿಯೆಟ್ನಾಂನಲ್ಲಿ ನಡೆಯುವ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಟೇಕ್ವಾಂಡೋ ಗರ್ಲ್‌ ಸಿನಿಮಾ ಆಯ್ಕೆಯಾಗಿದೆ. ಅತ್ಯುತ್ತಮ ಬಾಲ ಕಲಾವಿದೆ ಪ್ರಶಸ್ತಿಗೆ ಋತುಸ್ಪರ್ಶ ಆಯ್ಕೆಯಾಗಿದ್ದಾರೆ. ಈಗಾಗಲೇ ಕನ್ನಡದ ಬಾಲ ನಟಿಯಾಗಿ, ಕಾಂಗ್ರೋ, ಬಾಲ್ಯ ಅತ್ಯಮೂಲ್ಯ, ಗಂಗೆಗೌರಿ, ತಾರಕೇಶ್ವರ ಚಿತ್ರಗಳಲ್ಲಿ ಋತುಸ್ಪರ್ಶ ಅಭಿನಯಿಸಿದ್ದು, 30 ದಿನಗಳ ಕಾಲ ತಮ್ಮ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಮಾಸ್ಟರ್ ವಿಫರವಿ ಸಮರ ಕಲೆ ಹೇಳಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಚಿತ್ರದಲ್ಲಿ 2 ಹಾಡುಗಳಿದ್ದು, ಬೆಂಗಳೂರಿನ ರಾಜಾಜಿ ನಗರ, ಜಾಲಹಳ್ಳಿ, ಸಹಕಾರ ನಗರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಆ.30ರಂದು ರಾಜ್ಯಾದ್ಯಂತ ಚಿತ್ರ ಪ್ರದರ್ಶನಗೊಳ್ಳಳಿದೆ. 6ನೇ ತರಗತಿ ಓದುತ್ತಿರುವ ಋತು ಸ್ಪರ್ಶ ವಿಭಿನ್ನವಾಗಿ ಅಭಿನಯಿಸಿರುವ ಸಿನಿಮಾ ಇದಾಗಿದೆ. ಶಾಲಾ ಮಕ್ಕಳಿಗೆ ಅರ್ಧ ದರಕ್ಕೆ ಚಿತ್ರ ವೀಕ್ಷಿಸಲು ಅವಕಾಶ ಮಾಡಿಕೊಡುವ ಉದ್ದೇಶ ಚಿತ್ರತಂಡದ್ದಾಗಿದೆ. ರಾಜ್ಯ ಸರ್ಕಾರ, ಶಿಕ್ಷಣ ಸಚಿವರು ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು. ಬಾಲನಟಿ ಋತು ಸ್ಪರ್ಶ ಮಾತನಾಡಿ, 6ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಚಿತ್ರದಲ್ಲಿ ಅಭಿನಯಿಸಿದ್ದು ಸಂತಸ ತಂದಿದೆ. ಕೆಲ ಕಡೆ ಅಭಿನಯಿಸುವಾಗ ಸಾಕಷ್ಟು ಪೆಟ್ಟು ತಿಂದಿದ್ದೇನೆ. ಆದರೂ, ನಮ್ಮೆಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಚಿತ್ರ ಮಾಡಿದ್ದೇವೆಂಬ ಖುಷಿ ಇದೆ ಎಂದು ಹೇಳಿದರು.

ಈವೇಳೆ ನಿರ್ಮಾಪಕಿ ಡಾ. ಸುಮಿತ ಪ್ರವೀಣ್, ಸಹ‌ ನಿರ್ಮಾಪಕ‌ ಪ್ರವೀಣ, ಸಿ. ಬಾನು ಇದ್ದರು.