ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಕಸಬಾ ಹೋಬಳಿಯ ಮುಣಚನಹಳ್ಳಿ ವ್ಯಾಪ್ತಿಯ ಸರ್ವೆ ನಂಬರ್ 77/1ರಲ್ಲಿ 1.6 ಎಕರೆ ಹಾಗೂ 77/2 ರಲ್ಲಿ 2 ಎಕರೆ ಜಮೀನನ್ನು ತಹಸೀಲ್ದಾರ್ ನಕಲಿ ದಾಖಲಾತಿಗಳನ್ನು ಪರಿಶೀಲಿಸದೇ ಖಾತೆ ಮಾಡಿದ್ದಾರೆ ಎಂದು ನಗರಸಭಾ ಮಾಜಿ ಸದಸ್ಯ ಚಂಗುಮಣಿ ದೂರಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ತಹಸೀಲ್ದಾರ್ ಅವರು ಮೂಲ ಖಾತೆದಾರರಿಗೆ ಯಾವುದೇ ಮಾಹಿತಿ ನೀಡದ ಉಪ ವಿಭಾಗಧಿಕಾರಿಗಳ ಅದೇಶವನ್ನು ಧಿಕ್ಕರಿಸಿ, ಒಂದು ದಿನದಲ್ಲಿ ಖಾತೆಯನ್ನು ವರ್ಗಾವಣೆ ಮಾಡಿದ್ದಾರೆ. ಆದ್ದರಿಂದ ತಾವು ಕೂಡಲೇ ಖಾತೆಯನ್ನು ರದ್ದು ಮಾಡಿ, ತನಿಖೆಗೆ ಅದೇಶ ನೀಡಬೇಕೆಂದು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂಬಂಧ ಅಕ್ರಮ ದಾಖಲೆಗಳನ್ನು ಸೃಷ್ಟಿ ಮಾಡಿರುವವರ ವಿರುದ್ಧ ಹಾಗೂ ಇದನ್ನು ಪರಿಶೀಲನೆ ಮಾಡಿದೆ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ತಹಸೀಲ್ದಾರ್ ವಿರುದ್ಧ ಕ್ರಮವಾಗಬೇಕು. ಈ ಸರ್ವೇ ನಂಬರ್‌ನಲ್ಲಿ ಅಕ್ಕಪಕ್ಕದ ಜಮೀನಿನ ಮಾಲೀಕರಿಗೂ ಸಹ ನೋಟಿಸ್ ನೀಡಿಲ್ಲ. ಕಚೇರಿಯಲ್ಲಿಯೇ ಕುಳಿತು ಅಕ್ರಮವಾಗಿ ನಕಲಿ ದಾಖಲಾತಿ ಸೃಷ್ಟಿಸಿ ತಾಲೂಕು ಕಚೇರಿಗೆ ಖಾತೆಗೆ ಅರ್ಜಿ ಸಲ್ಲಿಸಿದ್ದರು ಎಂದು ಹೇಳಿದರು.ಈ ಆಸ್ತಿಯು ನಮ್ಮ ಪೂರ್ವಜರು ಭೂಮಿಯಾಗಿದ್ದು ನಾವೇ ವ್ಯವಸಾಯ ಮಾಡುತ್ತಿದ್ದೇವೆ. ಈ ಹಿಂದೆ ತಹಸೀಲ್ದಾರ್ ಆಗಿದ್ದ ಮಹೇಶ ಅವರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಅವರು ಕೊಳ್ಳೇಗಾಲ ಉಪ ವಿಭಾಗಾಧಿಕಾರಿಗಳಿಗೆ ವರ್ಗಾಯಿಸಿದ್ದರು. ಎಸಿ ಅವರು ಮೂಲ ದಾಖಲಾತಿಗಳ ಇಲ್ಲದಿರುವ ಬಗ್ಗೆ ಸ್ಪಷ್ಟನೆ ನೀಡಿ, ಖಾತೆ ಮಾಡಲು ನಿರಾಕರಣೆ ಮಾಡಿದ್ದರು. ಈ ಪ್ರಕರಣವನ್ನು ಸಿವಿಲ್ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆಯೂ ಅದೇಶ ನೀಡಿದ್ದರು ಎಂದರು.
ತಹಸೀಲ್ದಾರ್ ಆಗಿ ಬಂದ ಗಿರಿಜಾ ಅವರಿಗೆ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದು, ಯಾವುದೇ ಅದೇಶವನ್ನು ನೋಡದೇ, ತಹಸೀಲ್ದಾರ್, ಆರ್‌ಐ, ಗ್ರಾಮ ಆಡಳಿತಾಧಿಕಾರಿಗಳು ಶಾಮೀಲಾಗಿ ಅಕ್ರಮ ಖಾತೆ ಮಾಡಿದ್ದಾರೆ. ಅರ್ಜಿದಾರರು ಸಲ್ಲಿಸಿರುವ ಎಲ್ಲಾ ನಕಲಿ ದಾಖಲೆಗಳು, ಮರಣ ಪ್ರಮಾಣಪತ್ರ ಹಾಗೂ ಇತರೆ ದಾಖಲೆಗಳು ಪೋರ್ಜರಿಯಾಗಿದ್ದು, ಈ ಎಲ್ಲಾ ದಾಖಲೆಗಳನ್ನು ಮಾಹಿತಿ ಹಕ್ಕಿನಡಿಯಲ್ಲಿ ಪಡೆದುಕೊಂಡಿದ್ದೇನೆ. ಈ ಹಿನ್ನೆಲೆ ಕ್ರಮಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.ಮೂಲ ಖಾತೆದಾರರಾದ ಬಿ. ಸಂತೋಷ್ ಅವರಿಗೆ ನ್ಯಾಯ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಇದರ ವಿರುದ್ದ ವಾಲ್ಮೀಕಿ ನಾಯಕರ ಸಂಘದಿಂದ ಹೋರಾಟ ಮಾಡಬೇಕಾಗುತ್ತದೆ ಎಂದರು.
ವಾಲ್ಮೀಕಿ ಟ್ರಸ್ಟ್ ಅಧ್ಯಕ್ಷ ಮಹದೇವನಾಯಕ, ಕನ್ನಡ ಕಾವಲು ಪಡೆ ಅಧ್ಯಕ್ಷ ಪರಶಿವಮೂರ್ತಿ, ಸುರೇಶ್ ವಾಜಪೇಯಿ, ರವಿಕುಮಾರ್, ಮಹದೇವನಾಯಕ, ವೆಂಕಟರಾಮು ಮೊದಲಾದವರು ಇದ್ದರು.