ಸಾರಾಂಶ
ಶಿರಹಟ್ಟಿ: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ತಹಸೀಲ್ದಾರ ಅನಿಲ ಬಡಿಗೇರ, ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ದಿಢೀರ್ ಭೇಟಿ ನೀಡಿ ಕ್ಯಾಂಟೀನ್‌ನ ಅಡುಗೆ ಮನೆ ಸೇರಿದಂತೆ ಎಲ್ಲೆಡೆಯೂ ಪರಿಶೀಲನೆ ನಡೆಸಿ ಸ್ವಚ್ಛತೆ ಕಾಪಾಡಿಕೊಂಡು ಉತ್ತಮ ಗುಣಮಟ್ಟದ ತಿಂಡಿ, ಊಟ ಸಾರ್ವಜನಿಕರಿಗೆ ನೀಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.ನಂತರ ತಹಸೀಲ್ದಾರ ಅನಿಲ ಬಡಿಗೇರ ಮಾತನಾಡಿ, ಇಂದಿರಾ ಕ್ಯಾಂಟೀನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಕನಸಿನ ಕೂಸು. ಇಂದಿರಾ ಕ್ಯಾಂಟೀನ್‌ನಿಂದ ಬಡವರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದಿಸೆಯಲ್ಲಿ ಯೋಜನೆ ಸರ್ಕಾರ ಜಾರಿಗೊಳಿಸಿದೆ ಎಂದರು.
ನಂತರ ಇಂದಿರಾ ಕ್ಯಾಂಟೀನ್‌ನಲ್ಲಿಯೇ ಉಪಹಾರ ಸೇವಿಸುವ ಮೂಲಕ ಆಹಾರದ ಗುಣಮಟ್ಟ ಪರಿಶೀಲಿಸಿ ಸಾರ್ವಜನಿಕರಿಂದ ಯಾವುದೇ ರೀತಿಯ ದೂರುಗಳು ಬಾರದಂತೆ ಉತ್ತಮ ಗುಣಮಟ್ಟದ ಸೇವೆ ನೀಡುವಂತೆ ತಾಕೀತು ಮಾಡಿದರು.ಕಳೆದ ೨೦೧೮ರಲ್ಲಿ ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು. ಕಡಿಮೆ ದರದಲ್ಲಿ ಊಟ,ತಿಂಡಿ ನೀಡುವ ಮಹತ್ವದ ಯೋಜನೆಯಾಗಿದೆ.ಸದ್ಯ ಕ್ಯಾಂಟೀನ್ ಒಳಾಂಗಣ ಪರಿಶೀಲನೆ ನಡೆಸಲಾಗಿದೆ. ಯಾವುದೇ ರೀತಿಯ ಕುಂದುಕೊರತೆಗಳಿದ್ದಲ್ಲಿ ತಿಳಿಸುವಂತೆ ಕ್ಯಾಂಟೀನ್ ವ್ಯವಸ್ಥಾಪಕರಿಗೆ ಸೂಚಿಸಿದರು.
ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಮಾತನಾಡಿ, ಕ್ಯಾಂಟೀನ್ ಅಕ್ಕಪಕ್ಕ ಸ್ವಲ್ಪಮಟ್ಟಿಗೆ ಕಸ ಬಿದ್ದಿದ್ದನ್ನು ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆಗಳಿಲ್ಲ. ಶೀಘ್ರವೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಕ್ಯಾಂಟೀನ್‌ಗೆ ಅವಶ್ಯವಿರುವ ಸೌಕರ್ಯ ಒದಗಿಸುವ ಭರವಸೆ ನೀಡಿದ ಅವರು, ಗುಣಮಟ್ಟದ ಆಹಾರ ನೀಡುವ ಜತೆಯಲ್ಲಿ ಶುದ್ಧ ಕುಡಿಯುನ ನೀರು ಕೊಡುವಂತೆಯೂ ತಿಳಿಸಿದರು.ಬಡವರ, ಮಧ್ಯಮ ವರ್ಗದವರಿಗೆ ಅನುಕೂಲವಾಗಲೆಂದು ರಿಯಾಯಿತಿ ದರದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಿರುವ ಪರಿಣಾಮ ಸಾಕಷ್ಟು ಜನ ಆಹಾರ ಸೇವಿಸಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.ಇಲ್ಲಿನ ಸಿಬ್ಬಂದಿ ಮೆನು ಪ್ರಕಾರ ಆಹಾರ ತಯಾರಿಸಿ (ಸಿದ್ದಪಡಿಸಿ) ಸಾರ್ವಜನಿಕರಿಗೆ ನೀಡಲು ಸೂಚನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್‌ನಲ್ಲಿ ಬಡವರಿಗೆ ಗುಣಮಟ್ಟದ ಆಹಾರ ನೀಡಲು ಮತ್ತು ಶುಚಿತ್ವ ಕಾಪಾಡಿಕೊಳ್ಳಲು ಬಜೆಟ್‌ನಲ್ಲಿ ಹಣ ಕೂಡ ಕಾಯ್ದಿರಿಸಿದ್ದಾರೆ.ಬಡವರಿಂದ ಹೆಚ್ಚಿನ ಹಣ ಪಡೆಯಬಾರದು. ಈ ವಿಷಯ ನಮ್ಮ ಗಮನಕ್ಕೆ ಬಂದರೆ ಮುಲಾಜಿಲ್ಲದೆ ಶಿಸ್ತು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.