ಮಾಗಳ ಗ್ರಾಮದ ಬಳಿ ತುಂಗಾಭದ್ರ ನದಿಯಲ್ಲಿ ಒಂದು ದಡದಿಂದ ಇನ್ನೊಂದು ದಡಕ್ಕೆ ಸಂಚರಿಸಲು ನಾಡದೋಣಿ ಅನುಕೂಲವಾಗಿತ್ತು. ನಾಡ ದೋಣಿಗೆ ರಂಧ್ರ ಬಿದ್ದು ಸಂಚಾರ ನಿಲ್ಲಿಸಿ, ತಿಂಗಳು ಕಳೆಯುತ್ತಿದೆ.

ಹೂವಿನಹಡಗಲಿ: ತಾಲೂಕಿನ ಮಾಗಳದಿಂದ ಗದಗ ಜಿಲ್ಲೆಯ ವಿಠಲಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನಾಡದೋಣಿಯನ್ನು ದುರಸ್ತಿಗೊಳಿಸುವ ಕುರಿತು ಜಿಲ್ಲಾಧಿಕಾರಿಗೆ ತಹಸೀಲ್ದಾರ್‌ ಪತ್ರ ಬರೆದಿದ್ದಾರೆ.ಈ ಕುರಿತು ಕನ್ನಡಪ್ರಭ ಪತ್ರಿಕೆಯಲ್ಲಿ ಮಾಗಳದ ನಾಡದೋಣಿಗೆ ರಂಧ್ರ, ಮೂರು ಜಿಲ್ಲೆಗಳ ಸಂಪರ್ಕ ಕಡಿತ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದರ ಪರಿಣಾಮ ತಹಸೀಲ್ದಾರ್‌ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ತಾಲೂಕಿನ ಮಾಗಳ ಗ್ರಾಮದ ಬಳಿ ತುಂಗಾಭದ್ರ ನದಿಯಲ್ಲಿ ಒಂದು ದಡದಿಂದ ಇನ್ನೊಂದು ದಡಕ್ಕೆ ಸಂಚರಿಸಲು ನಾಡದೋಣಿ ಅನುಕೂಲವಾಗಿತ್ತು. ನಾಡ ದೋಣಿಗೆ ರಂಧ್ರ ಬಿದ್ದು ಸಂಚಾರ ನಿಲ್ಲಿಸಿ, ತಿಂಗಳು ಕಳೆಯುತ್ತಿದೆ. ನಾಡದೋಣಿ ಇನ್ನೂ ದುರಸ್ತಿಗೊಂಡಿಲ್ಲ. ಇದರಿಂದಾಗಿ ಜನರು ಪರದಾಡುವಂತಾಗಿದೆ. ಈ ನಾಡದೋಣಿ ಮಾಗಳ ಗ್ರಾಮದಿಂದ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ವಿಠಲಾಪುರ ಗ್ರಾಮದ ದಡಕ್ಕೆ ಜನರನ್ನು ಸಾಗಿಸುತ್ತಿತ್ತು. ದೋಣಿಯನ್ನ ನಂಬಿ ಪ್ರಯಾಣಿಸುತ್ತಿದ್ದ ಕೂಲಿ ಕಾರ್ಮಿಕರು, ಇತರ ಪ್ರಯಾಣಿಕರು ಮೈಲಾರ ಮತ್ತು ಮದಲಗಟ್ಟ ಗ್ರಾಮದಲ್ಲಿನ ಸೇತುವೆ ಮಾರ್ಗ ಮತ್ತು ಮಕರಬ್ಬಿ ಗ್ರಾಮದಿಂದ ಇಟ್ಟಿಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ, ಚಿಕ್ಕ ದೋಣಿಯಲ್ಲಿ ಪ್ರಯಾಣಿಸುವಂತಾಗಿದೆ, ಅನೇಕ ವರ್ಷಗಳಿಂದ ಈ ಭಾಗದಲ್ಲಿ ಸಂಚರಿಸುತ್ತಿದ್ದ ನಾಡದೋಣಿಯನ್ನು ಹರಪನಹಳ್ಳಿ, ಹಿರೇಹಡಗಲಿ, ಹೂವಿನಹಡಗಲಿ ಸೇರಿದಂತೆ ಹೊರಜಿಲ್ಲೆಗಳ ಲಕ್ಷ್ಮೇಶ್ವರ, ಬೆಳ್ಳಟ್ಟಿ, ಬಾಗೇವಾಡಿ, ಬಿದರಹಳ್ಳಿ, ಹೆಬ್ಬಾಳ, ತೊಳಲಿ ಗ್ರಾಮದ ಜನರುಬ ಆಶ್ರಯಿಸಿದ್ದರು. ಗದಗ, ಹಾವೇರಿ, ವಿಜಯನಗರ ಜಿಲ್ಲೆಗಳಿಗೆ ಕಡಿಮೆ ಅಂತರದಲ್ಲಿ ಸಂಪರ್ಕ ಕಲ್ಪಿಸುವ ಜಲ ಮಾರ್ಗವಾಗಿತ್ತು, ನಾಡದೋಣಿ ಸಂಚಾರ ನಿಲ್ಲಿಸಿ ತಿಂಗಳು ಕಳೆದಿತ್ತು ಕಾರಣ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯಿಂದ ದೋಣಿಯನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ವರದಿ ಮಾಡಿದ್ದಾರೆ.

ನಾಡದೋಣಿಯಿಂದ ಮಾಗಳ ಗ್ರಾಮದಿಂದ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ವಿಠಲಾಪುರ ಗ್ರಾಮದ ದಡಕ್ಕೆ ಜನರು ಸಂಚಾರಿಸುತ್ತಿದ್ದರು, ಇದರಿಂದಾಗಿ ಜಲಮಾರ್ಗದ ಬಳಕೆಗೆ ಉತ್ತೇಜನ ನೀಡಿದಂತಾಗುತ್ತದೆ. ತೀರಾ ಅನಿವಾರ್ಯವಾಗಿದೆ. ಕಾರಣ ಪ್ರಾಂತಿಯ ಕಾರ್ಯನಿರ್ವಾಣಾಧಿಕಾರಿಗಳು ಬಂದರು ಮತ್ತು ಒಳನಾಡು ಜಲಸಾರಿಗೆ ಅಧಿಕಾರಿಗಳಿಂದ ತಕ್ಷಣ ಹೊಸ ನಾಡದೋಣಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಒದಗಿಸಿ ಕೊಡಬೇಕೆಂದು ಬರೆದಿದ್ದಾರೆ.