ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಶನ್ 25ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಬೇಡಿಕೆಗಳ ಈಡೇರಿಕೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೋರಾಟ, ಮನವಿ, ಸಭೆ, ಪ್ರತಿಭಟನೆಗಳನ್ನು ನಡೆಸಲಾಗಿದೆ. ಆದರೂ ಸರ್ಕಾರದ ಗಮನ ಸಂಪೂರ್ಣವಾಗಿ ಟೈಲರ್‌ಗಳ ಸಮಸ್ಯೆಗಳತ್ತ ಹರಿದಿಲ್ಲ. ಈ ಕಾರ್ಯಕ್ರಮಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಆಹ್ವಾನಿಸಿದ್ದರೂ, ಒಬ್ಬರೂ ಆಗಮಿಸದಿರುವುದು ಸರ್ಕಾರದ ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಅಸಂಘಟಿತ ವಲಯದಲ್ಲಿರುವ ಟೈಲರ್‌ಗಳ ಜೀವನ ಭದ್ರತೆ, ಸಾಮಾಜಿಕ ರಕ್ಷಣೆ ಹಾಗೂ ನ್ಯಾಯಯುತ ಸೌಲಭ್ಯಗಳಿಗಾಗಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ಕಳೆದ ಹಲವು ವರ್ಷಗಳಿಂದ ರಾಜ್ಯಾದ್ಯಂತ ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಆದರೂ ಸರ್ಕಾರದಿಂದ ಸಮರ್ಪಕ ಸ್ಪಂದನೆ ಸಿಗುತ್ತಿಲ್ಲ ಎಂದು ಸಂಘದ ರಾಜ್ಯ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಎಚ್. ಮಲ್ಲಿಕಾರ್ಜುನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ನಗರದಲ್ಲಿ ನಡೆದ ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಶನ್ 25ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಬೇಡಿಕೆಗಳ ಈಡೇರಿಕೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೋರಾಟ, ಮನವಿ, ಸಭೆ, ಪ್ರತಿಭಟನೆಗಳನ್ನು ನಡೆಸಲಾಗಿದೆ. ಆದರೂ ಸರ್ಕಾರದ ಗಮನ ಸಂಪೂರ್ಣವಾಗಿ ಟೈಲರ್‌ಗಳ ಸಮಸ್ಯೆಗಳತ್ತ ಹರಿದಿಲ್ಲ. ಈ ಕಾರ್ಯಕ್ರಮಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಆಹ್ವಾನಿಸಿದ್ದರೂ, ಒಬ್ಬರೂ ಆಗಮಿಸದಿರುವುದು ಸರ್ಕಾರದ ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆ ಎಂದು ಬೇಸರ ವ್ಯಕ್ತಪಡಿಸಿದರು.
ಟೈಲರ್‌ಗಳು ಸಮಾಜದ ಅವಿಭಾಜ್ಯ ಅಂಗವಾಗಿದ್ದರೂ, ಅವರಿಗೆ ಯಾವುದೇ ಭದ್ರತೆ ಇಲ್ಲ. ವಯಸ್ಸಾದ ಬಳಿಕ ದುಡಿಯಲು ಸಾಧ್ಯವಾಗದ ಸ್ಥಿತಿ ಬಂದರೂ ಪಿಂಚಣಿ ಇಲ್ಲ. ಆರೋಗ್ಯ ಸಮಸ್ಯೆ ಎದುರಾದರೂ ಸರ್ಕಾರದಿಂದ ಸೂಕ್ತ ನೆರವು ದೊರೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಂಘಟನೆಯೇ ನಮ್ಮ ಶಕ್ತಿ ಎಂದು ತಿಳಿಸಿದರು. ಸಂಘವನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಸದಸ್ಯರನ್ನು ಸಂಘಟಿಸಲಾಗುತ್ತಿದೆ ಎಂದರು.ಟೈಲರ್ ಜಿಲ್ಲಾ ಅಧ್ಯಕ್ಷ ಎಚ್.ಎಸ್. ವೆಂಕಟೇಶ್ ಮಾತನಾಡಿ, ಟೈಲರ್‌ಗಳು ದಿನನಿತ್ಯ ದುಡಿದು ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಸರ್ಕಾರದಿಂದ ನಿರೀಕ್ಷಿತ ಸೌಲಭ್ಯಗಳು ಸಿಗುತ್ತಿಲ್ಲ. ನಮ್ಮ ಸಂಘದ ಸದಸ್ಯರು ಮರಣ ಹೊಂದಿದರೆ ಅವರ ಕುಟುಂಬಕ್ಕೆ3 ಲಕ್ಷ ರು. ಪರಿಹಾರ, ಅಪಘಾತವಾದರೆ 50 ಸಾವಿರ ರು. ಸರಕಾರ ಕೊಡುತ್ತಿದೆ. 60 ವರ್ಷಗಳ ನಂತರ ಕೆಲಸ ಮಾಡಲು ಸಾಧ್ಯವಾಗದ ಟೈಲರ್‌ಗಳಿಗೆ ಸರ್ಕಾರದಿಂದ ಕಡ್ಡಾಯ ಪಿಂಚಣಿ ವ್ಯವಸ್ಥೆ ಜಾರಿಯಾಗಬೇಕು. ಕಾರ್ಮಿಕ ಕಾರ್ಡ್ ಹೊಂದಿರುವ ಎಲ್ಲ ಟೈಲರ್‌ಗಳಿಗೆ ಆರೋಗ್ಯ ವಿಮೆ, ಮಕ್ಕಳ ಶಿಕ್ಷಣಕ್ಕೆ ಸಹಾಯಧನ, ವಸತಿ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳಿಗೆ ಸರ್ಕಾರವನ್ನು ಬೇಡಿ ಬೇಡಿ ಸಾಕಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿನಲ್ಲಿ ಕ್ಷೇಮ ನಿಧಿ ಸ್ಥಾಪಿಸಿ, ಕಷ್ಟದಲ್ಲಿರುವ ಟೈಲರ್‌ಗಳಿಗೆ ಸಂಘದಿಂದಲೇ ಸಹಾಯ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಕಾರ್ಮಿಕ ಕಾರ್ಡ್ ಕೊಟ್ಟಿದ್ದು, ನಿರಂತರ ಶಾಶ್ವತ ಪರಿಹಾರ ಸಿಗಬೇಕು. ಅದಕ್ಕಾಗಿ ಕಾರ್ಮಿಕ ನಿಧಿ ಮನನ ಮಾಡೋಣ, ಎಲ್ಲರ ಸಹಕಾರ ಇದ್ದರೇ ಸಂಘಟನೆ ಗಟ್ಟಿಯಾಗಿ ಇರುತ್ತದೆ. ಈ ನಿಧಿಯಿಂದ ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಸಾಲ ಸೌಲಭ್ಯ ಕಲ್ಪಿಸುವ ಯೋಜನೆಯೂ ರೂಪಿಸಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಅರ್ಹ ಸದಸ್ಯರಿಗೆ ಕಾರ್ಮಿಕ ಕಾರ್ಡ್‌ಗಳನ್ನು ವಿತರಿಸಲಾಯಿತು. ಇದರಿಂದ ಟೈಲರ್‌ಗಳು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ರಾಜ್ಯ ಸಮಿತಿ ಸದಸ್ಯ ಸಂತೋಷ್ ಕುಮಾರ್, ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಎಂ. ನಾಗೇಂದ್ರ, ಗೌರವಾಧ್ಯಕ್ಷ ಬಾಬಣ್ಣ, ಪ್ರಧಾನ ಕಾರ್ಯದರ್ಶಿ ಯೂನಿಸ್ ಷರೀಪ್, ಖಜಾಂಚಿ ಡಿ.ಡಿ. ವೇಲಾಪುರಿ ಗೌಡ, ಉಪಾಧ್ಯಕ್ಷ ವಿಜಯ, ಕಾಟೀಹಳ್ಳಿ ವಲಯ ಸಮಿತಿ ಅಧ್ಯಕ್ಷ ಜಯಶಂಕರ್, ಹಾಸನಾಂಬ ವಲಯ ಸಮಿತಿ ಅಧ್ಯಕ್ಷ ವೀರರಾಘವನ್, ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ರಂಗಸ್ವಾಮಿ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.