ಕೋಮುಗಲಭೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಿ: ಯು.ನಿಸಾರ್ ಅಹಮದ್

| Published : Sep 19 2024, 01:56 AM IST

ಕೋಮುಗಲಭೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಿ: ಯು.ನಿಸಾರ್ ಅಹಮದ್
Share this Article
  • FB
  • TW
  • Linkdin
  • Email

ಸಾರಾಂಶ

ಪೋಲಿಸರ ಸಂಖ್ಯೆ ತುಂಬಾ ಕಡಿಮೆ ಇತ್ತು. ಹಾಗಾಗಿ ಗಲಭೆ ನಡೆದಾಗ ಪರಿಸ್ಥಿತಿ ಹತೋಟಿಗೆ ತರುವುದು ಕಷ್ಟವಾಯಿತು. ನಂತರ ಕಲ್ಲು ತೂರಾಟ ಬೆಂಕಿ ಹಚ್ಚುವಂತಹ ಘಟನೆಗಳು ನಡೆದು ಪರಿಸ್ಥಿತಿ ಕೈ ಮೀರಿತು ಎಂದು ಹಲವು ಮುಖಂಡರು ಅಧ್ಯಕ್ಷರಿಗೆ ಮಾಹಿತಿ ನೀಡಿದರು. ಕಿಡಿಗೇಡಿಗಳು ಮಾಡಿರುವ ಕೃತ್ಯಕ್ಕೆ ಪೊಲೀಸರು ತಡರಾತ್ರಿ ಸಮಯದಲ್ಲಿ ಬಾಗಿಲುಗಳನ್ನು ಒದ್ದು ಮನೆಯಲ್ಲಿ ಮಲಗಿದ್ದ ಅಮಾಯಕರನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗಣೇಶನ ಮೆರವಣಿಗೆ ವೇಳೆ ನಡೆದ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮದ್ ಬುಧವಾರ ಪಟ್ಟಣಕ್ಕೆ ಭೇಟಿ ಕೊಟ್ಟು ಸಮುದಾಯದ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.ನಂತರ ತಾಲೂಕು ಆಡಳಿತ ಸೌಧದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡರು. ಬಳಿಕ ಹಾನಿಯಾದ ಸ್ಥಳ ಪರಿಶೀಲನೆ ನಡೆಸಿ ಸಂತ್ರಸ್ತ ಅಂಗಡಿ ಮಾಲೀಕರಿಗೆ ಸಾಂತ್ವನ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸಮಾಲೋಚನಾ ಸಭೆಯಲ್ಲಿ ಕೋಮು ಗಲಭೆ ಸೃಷ್ಟಿಯಾಗಲು ಕಾರಣವೇನೆಂದು ಸಮುದಾಯದ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದರು. ಗಣೇಶ ಮೆರವಣಿಗೆ ನಡೆಯುತ್ತಿದ್ದ ವೇಳೆ ಪೊಲೀಸರು ಮುಂಜಾಗ್ರತೆ ವಹಿಸಿ ಸೂಕ್ತ ಭದ್ರತೆ ನೀಡಿದ್ದರೆ ಗಲಭೆ ತಡೆಯಬಹುದಿತ್ತು. ಡ್ರಗ್ಸ್, ಗಾಂಜಾ ಹಾಗೂ ಮದ್ಯಸೇವನೆ ಮಾಡಿದ್ದ ಕಿಡಿಗೇಡಿ ಯುವಕರನ್ನು ಎರಡು ಸಮುದಾಯದ ಹಿರಿಯರು ನಿಯಂತ್ರಿಸಲು ಮುಂದಾಗದಿರುವುದು ಕೂಡ ಗಲಭೆಗೆ ಕಾರಣವಾಗಿದೆ ಎಂದು ಮುಸ್ಲಿಂ ಮುಖಂಡರು ವಿವರಿಸಿದರು.ಪೋಲಿಸರ ಸಂಖ್ಯೆ ತುಂಬಾ ಕಡಿಮೆ ಇತ್ತು. ಹಾಗಾಗಿ ಗಲಭೆ ನಡೆದಾಗ ಪರಿಸ್ಥಿತಿ ಹತೋಟಿಗೆ ತರುವುದು ಕಷ್ಟವಾಯಿತು. ನಂತರ ಕಲ್ಲು ತೂರಾಟ ಬೆಂಕಿ ಹಚ್ಚುವಂತಹ ಘಟನೆಗಳು ನಡೆದು ಪರಿಸ್ಥಿತಿ ಕೈ ಮೀರಿತು ಎಂದು ಹಲವು ಮುಖಂಡರು ಅಧ್ಯಕ್ಷರಿಗೆ ಮಾಹಿತಿ ನೀಡಿದರು. ಕಿಡಿಗೇಡಿಗಳು ಮಾಡಿರುವ ಕೃತ್ಯಕ್ಕೆ ಪೊಲೀಸರು ತಡರಾತ್ರಿ ಸಮಯದಲ್ಲಿ ಬಾಗಿಲುಗಳನ್ನು ಒದ್ದು ಮನೆಯಲ್ಲಿ ಮಲಗಿದ್ದ ಅಮಾಯಕರನ್ನು ಬಂಧಿಸಿದ್ದಾರೆ. ಮುಸ್ಲಿಮರ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ಬೆಂಕಿ ಹಚ್ಚಿರುವುದರ ಹಿಂದೆ ಬೇರೆಯವರ ಕೈವಾಡವಿದೆ ಎಂದರು.ಪಟ್ಟಣದ ಮಂಡ್ಯ ಸರ್ಕಲ್, ಬ್ಯಾಂಕ್ ಆಫ್ ಬರೋಡ, ತಾಲೂಕು ಆಡಳಿತ ಸೌಧ ಸೇರಿ ಹಾನಿಯಾಗಿರುವ ಸ್ಥಳಗಳ ಆಸುಪಾಸಿನಲ್ಲಿರುವ ಎಲ್ಲಾ ಸಿಸಿ ಟಿವಿ ಪೂಟೇಜ್‌ಗಳನ್ನು ಪರಿಶೀಲಿಸಿದರೆ ನಿಜವಾದ ಕಿಡಿಗೇಡಿಗಳು ಯಾರೆಂಬುದು ಗೊತ್ತಾಗುತ್ತದೆ ಎಂದು ಆಯೋಗದ ಅಧ್ಯಕ್ಷರಿಗೆ ಮುಸ್ಲಿಂ ಮುಖಂಡರು ಮಾಹಿತಿ ನೀಡಿದರು.ಹಾನಿ ಸ್ಥಳಕ್ಕೆ ಭೇಟಿ:ನಂತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮ್ಮದ್ ನೇತೃತ್ವದ ಸಮಿತಿ ಗಲಭೆಯಿಂದ ಹಾನಿಗೊಳಗಾಗಿರುವ ಸಾಧನ ಟೆಕ್ಸ್‌ಟೈಲ್ಸ್, ಮೈಸೂರು ರಸ್ತೆಯ ಗುಜರಿ ಅಂಗಡಿ, ಬಜಾಜ್ ಷೂ ರೊಂ, ಗ್ಯಾರೇಜ್, ಪಂಚರ್‌ಶಾಪ್, ಪೋಲಿಸ್ ಠಾಣೆ ಮುಂಭಾಗದ ಪಾತ್ರೆ ಅಂಗಡಿ, ಬ್ಯಾಂಗಲ್ಸ್ ಸ್ಟೋರ್, ಚಪ್ಪಲಿ ಅಂಗಡಿ ಸೇರಿದಂತೆ ಹಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂಗಡಿ ಮಾಲೀಕರಿಗೆ ಸಾಂತ್ವನ ಹೇಳಿದರು.ಆಯೋಗದ ಕಾರ್ಯದರ್ಶಿ ಅಂಜುಮ್ ರೋಹಿ, ಆಪ್ತ ಕಾರ್ಯದರ್ಶಿ ಮುಜೀಬುಲ್ಲಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಧುಶ್ರೀ, ಪುರಸಭೆ ಅಧ್ಯಕ್ಷ ಅಲಿ ಅನ್ಸ್‌ರ್ ಪಾಷ, ಮಾಜಿ ಅಧ್ಯಕ್ಷ ಮಕ್ಬೂಲ್ ಅಹಮ್ಮದ್, ಮಾಜಿ ಉಪಾಧ್ಯಕ್ಷ ಜಾಫರ್, ಮುಖಂಡರಾದ ಶೇಖ್ ಅಹಮ್ಮದ್, ಮುರ್ತುಜ, ಎಸ್.ಕೆ.ಖಾಸೀಂ, ಮುತೀಬ್, ಅತೀಖ್, ರಿಜ್ವಾನ್. ಇಲಿಯಾಜ್ ಪಾಷ್, ಮೌಲಾನ ಆಸೀಫ್ ಸೇರಿದಂತೆ ಹಲವರು ಇದ್ದರು.ಅಧಿಕಾರಿಗಳ ಜೊತೆ ಸಭೆ: ಸ್ಥಳೀಯ ಮುಸ್ಲಿಂ ಮುಖಂಡರಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮ್ಮದ್ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳ ಸಭೆ ನಡೆಸಿ ಗಲಭೆಗೆ ಕಾರಣ ಮತ್ತು ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಧುಶ್ರೀ, ಜಿಲ್ಲಾ ವಕ್ಫ್ ಅಧಿಕಾರಿ ಮುಹಮ್ಮದ್ ಮುಸ್ತಾಕ್, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಸೀಲ್ದಾರ್ ಜಿ.ಆದರ್ಶ, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಸಭೆಯಲ್ಲಿದ್ದರು.

ಕಿಡಿಗೇಡಿಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮಕೈಗೊಳ್ಳಿ:

ನಾಗಮಂಗಲ: ಶಾಂತಿಯುತವಾಗಿದ್ದ ನಾಗಮಂಗಲದಲ್ಲಿ ಎಲ್ಲ ಸಮುದಾಯದ ಜನರು ಸಹಬಾಳ್ವೆಯಿಂದ ಜೀವನ ನಡೆಸಬೇಕು. ಮತ್ತೆ ಕೋಮುಗಲಭೆ ಘಟನೆ ಮರುಕಳಿಸದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮ್ಮದ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಮು ಸೌಹಾರ್ದತೆಗೆ ಭಂಗ ಉಂಟುಮಾಡಿ ಗಲಭೆಗೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಬಂಧಿತರಲ್ಲಿ ಅಮಾಯಕರಿದ್ದರೆ ಅಂತಹವರನ್ನು ಬಿಡುಗಡೆಗೊಳಿಸಬೇಕು. ಘಟನೆಗೆ ಎರಡು ಗುಂಪಿನ ಯುವಕರಲ್ಲಿನ ಡ್ರಗ್ಸ್, ಗಾಂಜಾ ಮತ್ತು ಮದ್ಯ ಸೇವನೆಯೇ ಕಾರಣ ಎಂಬ ಮಾತುಗಳೂ ಸಾರ್ವಜನಿಕರಿಂದ ಕೇಳಿಬಂದಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದರು.

ಗಲಭೆಯಿಂದ ಹಾನಿಗೊಳಗಾಗಿರುವ ಎಲ್ಲಾ ಸಂತ್ರಸ್ತರಿಗೆ ಸರ್ಕಾರದ ಸೂಕ್ತ ಪರಿಹಾರ ಸಿಗಬೇಕೆಂಬುದೇ ನಮ್ಮ ಮುಖ್ಯ ಉದ್ದೇಶ. ಹಾಗಾಗಿ ಘಟನೆಗೆ ಕಾರಣ ಮತ್ತು ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ನೀಡಲಾಗುವುದು ಎಂದು ತಿಳಿಸಿದರು.