ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಹೊಳೆನರಸೀಪುರದ ಪ್ರಿ ಮೆಟ್ರಿಕ್ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಮೇಲ್ವಿಚಾರಕರಾಗಿರುವ ಚಂದ್ರಿಕಾ ಮೇಲೆ ಶಿಸ್ತು ಕ್ರಮ ಜರುಗಿಸದಿದ್ದರೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಸೋಮಶೇಖರ್ ಎಚ್ಚರಿಸಿದರು.ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅಭ್ಯುದಯಕ್ಕಾಗಿ ಮೀಸಲಾಗಿರುವ ಇಲಾಖೆ ಸಮಾಜ ಕಲ್ಯಾಣ ಇಲಾಖೆಯಾಗಿದೆ. ಆದರೆ ನಿಲಯ ಪಾಲಕರಾದ ಚಂದ್ರಿಕಾರವರು ಕಳೆದ ಮೂರು ವರ್ಷಗಳಿಂದ ಹಾಸನ ಪ್ರಿ ಮೆಟ್ರಿಕ್ ಬಾಲಕಿಯರ ವಿದ್ಯಾರ್ಥಿನಿಲಯದ ಮೇಲ್ವಿಚಾರಕರಾಗಿದ್ದು, ಅವರು ರಾಜಕೀಯ ಒತ್ತಡವನ್ನು ಬಳಸಿ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿ ಕಟ್ಟೆ, ಕುಂಚೇವು ಮತ್ತು ಹೊಳೆನರಸೀಪುರದ ಪ್ರಿ ಮೆಟ್ರಿಕ್ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ತನ್ನ ಗಂಡನನ್ನೇ ಕಾವಲುಗಾರರನ್ನಾಗಿ ನೇಮಿಸಿಕೊಂಡಿರುತ್ತಾರೆ ಎಂದು ದೂರಿದರು.
ಈ ಬಗ್ಗೆ ವಿದ್ಯಾರ್ಥಿಗಳು ದೂರನ್ನು ನೀಡಿದ ಪರಿಣಾಮ ಆಯುಕ್ತರು ತನಿಖೆಯನ್ನು ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಈ ಹಿಂದಿನ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯಾಗಿದ್ದ ಲಕ್ಷ್ಮೀಗೌಡ ತನಿಖೆಯನ್ನು ಮಾಡಲು ಹೋದ ಸಂದರ್ಭದಲ್ಲಿ ಅವರಿಗೂ ಸಹ ಧಮ್ಕಿ ಹಾಕಿ ರಾಜಕೀಯ ಪ್ರಭಾವ ಬಳಸಿ ಅಲ್ಲಿಯೇ ಉಳಿದುಕೊಂಡಿರುವ ಚಂದ್ರಿಕಾರವರ ದುರ್ವರ್ತನೆಯಿಂದ ವಿದ್ಯಾರ್ಥಿಗಳು ನಲುಗಿ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಅಧಿಕಾರಿಗಳು ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣನವರಿಗೆ ಹೆದರಿ ಅವರನ್ನು ಮೂಲ ಜಾಗಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿರುವ ಕಾರಣ, ದಲಿತ ಸಂಘಟನೆಗಳ ಒಕ್ಕೂಟ ಚಂದ್ರಿಕಾರವರ ಮೇಲೆ ಕಾನೂನು ಕ್ರಮ ಜರುಗಿಸಿ ಅವರನ್ನು ಅಮಾನತು ಮಾಡಿ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹ ಮಾಡುತ್ತೇವೆ ಎಂದರು.
ಹಿರಿಯ ದಲಿತ ಮುಖಂಡ ಎಚ್.ಕೆ.ಸಂದೇಶ್, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್.ವಿಜಯಕುಮಾರ್, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಎಂ.ಜಿ. ಪೃಥ್ವಿ, ಕದಸಂಸ ಜಿಲ್ಲಾ ಸಂಚಾಲಕ ವಳಲಹಳ್ಳಿ ವೀರೇಶ್, ರವೀಶ್ ಇತರರು ಇದ್ದರು.ಫೋಟೋ: ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ದಲಿತ ಮುಖಂಡರು.