ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಿ

| Published : Jul 02 2024, 01:35 AM IST

ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್‌ ಕಂಪನಿಗಳು ಸಾಲಗಾರರ ಮೇಲೆ ನಿರಂತರವಾಗಿ ನಡೆಸುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ತಿಪಟೂರು: ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್‌ ಕಂಪನಿಗಳು ಸಾಲಗಾರರ ಮೇಲೆ ನಿರಂತರವಾಗಿ ನಡೆಸುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಮಾತನಾಡಿ, ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದಿದ್ದ ಕೆಲವು ದಲಿತ ಕುಟುಂಬಗಳ ಮೇಲೆ ಕೆಲವು ಫೈನಾನ್ಸ್ ಕಂಪನಿಗಳು ದೌರ್ಜನ್ಯ ನಡೆಸಿರುವ ಮಾಹಿತಿ ಇದೆ. ದಿನನಿತ್ಯ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ದರಿಂದ ಜಿಲ್ಲಾಡಳಿತ, ಸರ್ಕಾರ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಮೈಕ್ರೋ ಫೈನಾನ್ಸ್‌ ಲೈಸೆನ್ಸ್ ರದ್ದುಪಡಿಸಬೇಕು. ಇವರಿಂದ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ₹25 ಲಕ್ಷ ಪರಿಹಾರ ಕೊಡಿಸಬೇಕು. ಸಾಲ ಮನ್ನಾ ಮಾಡಬೇಕು. ಹೆಚ್ಚು ಬಡ್ಡಿ ಕಟ್ಟಲಾಗದೆ ಒಕ್ಕಲೆದ್ದಿರುವ ಜನರಿಗೆ ಸೂಕ್ತ ರಕ್ಷಣೆ ನೀಡಬೇಕು. ಫೈನಾನ್ಸ್ ಮಾಲೀಕರ ವಿರುದ್ಧ ಕ್ರೀಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರಾಂತ ರೈತ ಸಂಘದ ಚನ್ನಬಸವಣ್ಣ ಮಾತನಾಡಿ, ಫೈನಾನ್ಸ್ ಕಂಪನಿಗಳು ಜನಸಾಮಾನ್ಯರಿಗೆ, ದೀನ ದಲಿತರಿಗೆ ಆರ್ಥಿಕ ನೆರವು ನೀಡುತ್ತೇವೆಂದು ಕೂಲಿ ಕಾರ್ಮಿಕರು, ನೇಕಾರರು, ರೈತರು, ಮಹಿಳೆಯರ ಮುಗ್ಧ ಮನಸ್ಸುಗಳನ್ನು ನಂಬಿಸಿ ಹಣ ಹೆಚ್ಚಿನ ಬಡ್ಡಿಗೆ ಕೊಟ್ಟು ನಂತರ ಹಣ ವಸೂಲಿಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದರು. ನಗರದ ಶ್ರೀ ಕೆಂಪಮ್ಮದೇವಿ ದೇವಸ್ಥಾನದ ಆವರಣದಿಂದ ಉಪವಿಭಾಗಾಧಿಕಾರಿಗಳ ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ನೀಡಲಾಯಿತು. ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಮುರುಳೀಧರ್ ಸೇರಿದಂತೆ ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲೂಕುಗಳ ದಸಂಸ ಮುಖಂಡರು. ಮಹಿಳೆಯರು ಇದ್ದರು.