ಉತ್ತರ ಪ್ರದೇಶ ಮಾದರಿಯಲ್ಲಿ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳಿ

| Published : Apr 21 2024, 02:16 AM IST

ಉತ್ತರ ಪ್ರದೇಶ ಮಾದರಿಯಲ್ಲಿ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿನಿಯನ್ನು ಕಾಲೇಜು ಆವರಣದಲ್ಲಿಯೇ ಜಿಹಾದಿ ಮನಸ್ಥಿತಿಯ ವ್ಯಕ್ತಿ ಹತ್ಯೆಗೈದಿದ್ದು ನಿಜಕ್ಕೂ ಆತಂಕದ ಸಂಗತಿ. ಇಂತಹ ದುಷ್ಕೃತ್ಯ ಎಸಗುವವರ ಮೇಲೆ ತೀವ್ರ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷ ಗಂಗಾಧರ ಹೆಗಡೆ ಹುಣಸೇಮಕ್ಕಿ ಹೇಳಿದರು.

ಶಿರಸಿ: ಹುಬ್ಬಳ್ಳಿಯ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಯ ಬರ್ಬರ ಹತ್ಯೆ ಖಂಡಿಸಿ ಶಿರಸಿಯಲ್ಲಿ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ರ‍್ಯಾಲಿ ನಡೆಸಿ, ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ನಗರದ ಬಸ್‌ ಸ್ಟ್ಯಾಂಡ್ ವೃತ್ತದಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷ ಗಂಗಾಧರ ಹೆಗಡೆ ಹುಣಸೇಮಕ್ಕಿ, ವಿದ್ಯಾರ್ಥಿನಿಯನ್ನು ಕಾಲೇಜು ಆವರಣದಲ್ಲಿಯೇ ಜಿಹಾದಿ ಮನಸ್ಥಿತಿಯ ವ್ಯಕ್ತಿ ಹತ್ಯೆಗೈದಿದ್ದು ನಿಜಕ್ಕೂ ಆತಂಕದ ಸಂಗತಿ. ಇಂತಹ ದುಷ್ಕೃತ್ಯ ಎಸಗುವವರ ಮೇಲೆ ತೀವ್ರ ಕ್ರಮ ಕೈಗೊಳ್ಳಬೇಕು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮಾದರಿಯಲ್ಲಿ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಆರೋಗ್ಯ ಭಾರತೀಯ ಜಿಲ್ಲಾ ಸಂಯೋಜಕ ನಾಗೇಶ ಪತ್ತಾರ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮತಬ್ಯಾಂಕ್ ಉಳಿವಿಗೋಸ್ಕರ ಸಮಾಜವನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಕಳೆದ ಎರಡು ದಶಕಗಳಿಂದ ಕರ್ನಾಟಕದಲ್ಲಿ ಇಂತಹ ದುಷ್ಕೃತ್ಯ ಅವ್ಯಾಹತವಾಗಿ ನಡೆಯುತ್ತಿದ್ದರೂ ಯಾವ ಸರ್ಕಾರವೂ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿಲ್ಲ. ಇದು ತಪ್ಪಿತಸ್ಥರ ಮಾನಸಿಕ ಬಲ ಹೆಚ್ಚಿಸುತ್ತಿದೆ. ಯಾವ ಸರ್ಕಾರವೂ ನಮ್ಮ ರಕ್ಷಣೆ ಮಾಡಲಾರದು. ಆತ್ಮರಕ್ಷಣೆಗೋಸ್ಕರ ಪ್ರತಿ ಹಿಂದೂವಿನ ಮನೆಯಲ್ಲಿ ಆಯುಧ ಇರಲೇಬೇಕು. ಹಿಂದೂ ಸಮಾಜ ಹೇಡಿಯಲ್ಲ. ಒಂದು ವೇಳೆ ಸರ್ಕಾರ ಶಿಕ್ಷೆ ನೀಡುವಲ್ಲಿ ವಿಫಲವಾದಲ್ಲಿ, ತಪ್ಪಿತಸ್ಥರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಪ್ರಮುಖರಾದ ನಂದನ ಸಾಗರ ಮಾತನಾಡಿ, ಕರ್ನಾಟಕದ ಗೃಹ ಮಂತ್ರಿಯ ಹೇಳಿಕೆಯನ್ನು ನಾವೆಲ್ಲ ಖಂಡಿಸುತ್ತೇವೆ. ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಹೀಗಾಗಿದ್ದರೆ ನೀವು ಇದೇ ಪ್ರತಿಕ್ರಿಯೆ ನೀಡುತ್ತಿದ್ದೀರೆ? ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯ ಪ್ರತಿಫಲವನ್ನು ಕಾಂಗ್ರೆಸ್ ಉಣ್ಣುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ನಗರ ಬಿಜೆಪಿ ಘಟಕಾಧ್ಯಕ್ಷ ಆನಂದ ಸಾಲೇರ್ ಮಾತನಾಡಿ, ನಮ್ಮ ಹಿಂದೂ ಸಮಾಜದ ಹೆಣ್ಣುಮಕ್ಕಳ ಜೀವಕ್ಕೆ ಭದ್ರತೆಯಿಲ್ಲದ ಪರಿಸ್ಥಿತಿ ಇಂದು ಉಂಟಾಗಿರುವುದು ನಿಜಕ್ಕೂ ಖೇದಕರ. ಹಿಂದು ಸಮಾಜ ಇಂತಹ ದುಷ್ಕೃತ್ಯಕ್ಕೆ ತಕ್ಕ ಉತ್ತರ ನೀಡಲಿದೆ ಎಂದರು.

ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಹರೀಶ ಕರ್ಕಿ ಮಾತನಾಡಿ, ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆಯಿಲ್ಲ. ಇದು ತಾಲೀಬಾನ್ ಸರ್ಕಾರವಾಗಿದೆ. ಗೃಹಸಚಿವರು, ಮುಖ್ಯಮಂತ್ರಿ ಹೇಳಿಕೆಗಳು ನಾಚೆಗೇಡಿನ ಸಂಗತಿ. ಅಲ್ಪಸಂಖ್ಯಾತರ ಓಲೈಕ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ದರ್ಶನ ಹೆಗಡೆ ಮಾತನಾಡಿ, ಕಾನೂನು ಸುವ್ಯವಸ್ಥೆ ಹಾಳಾಗಿದೆ. ಮುಖ್ಯಮಂತ್ರಿ ಕೂಡಲೇ ಎಚ್ಚೆತ್ತು ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಬೇಕು ಹಾಗೂ ತಪ್ಪಿತಸ್ಥನಿಗೆ ಕಠಿಣ ಕ್ರಮ ಕೈಗೊಂಡು ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ, ಬಿಜೆಪಿ ಪ್ರಮುಖರಾದ ವೀಣಾ ಶೆಟ್ಟಿ, ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ಮಾತನಾಡಿದರು. 300 ಅಧಿಕ ಪ್ರತಿಭಟನಾಕಾರರು ರ‍್ಯಾಲಿ ಮೂಲಕ ನಗರದ ಬಸ್‌ಸ್ಟ್ಯಾಂಡ್ ವೃತ್ತದಿಂದ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಘೋಷಣೆಗಳನ್ನು ಕೂಗುತ್ತಾ ಮನವಿ ಸಲ್ಲಿಸಿದರು. ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ಸತೀಶ್ ನಾಯ್ಕ, ಹಿಂದೂ ಸಂಘಟನೆಗಳ ಪ್ರಮುಖರು, ಎಬಿವಿಪಿ ಜಿಲ್ಲಾ ಸಂಚಾಲಕ ಕುಮಾರ್ ಗೌಡ, ನಗರ ಕಾರ್ಯದರ್ಶಿ ಪ್ರಸನ್ನ, ಸುಪ್ರೀತಾ, ಐಶ್ವರ್ಯಾ ಇದ್ದರು.