ಸೌಲಭ್ಯ ತಲುಪಿಸದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ

| Published : Jun 21 2024, 01:03 AM IST / Updated: Jun 21 2024, 01:04 AM IST

ಸೌಲಭ್ಯ ತಲುಪಿಸದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿ ಸಂತೇಪೇಟೆ ಸರ್ಕಲ್‌ನಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅಧಿಕಾರಿಗಳ ಮೇಲೆ ದೂರಿನ ಸುರಿಮಳೆಗೈದರು.

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿ ಸಂತೇಪೇಟೆ ಸರ್ಕಲ್‌ನಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅಧಿಕಾರಿಗಳ ಮೇಲೆ ದೂರಿನ ಸುರಿಮಳೆಗೈದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ. ಎಚ್.ಡಿ.ರಂಗನಾಥ್ ಹಾಗೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಬಳಿ ಹುತ್ರಿದುರ್ಗ ಪಂಚಾಯತಿ ಜನತೆ ತಮ್ಮ ಸಮಸ್ಯೆಗಳ ಅಹವಾಲುಗಳನ್ನು ಸಲ್ಲಿಸುತ್ತಾ ನರೇಗಾ ಯೋಜನೆ, ಶೌಚಾಲಯ, ಪೌತಿ ಖಾತೆ, ಬಗರ್ ಹುಕುಂ, ಗ್ಯಾರಂಟಿ ಯೋಜನೆ, ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹರಿಗೆ ಸೌಲಭ್ಯ ನೀಡಲು ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ.

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಿರ್ಮಿಸಿಕೊಂಡ ವೈಯಕ್ತಿಕ ಶೌಚಾಲಯ, ನರೇಗಾ ಯೋಜನೆಯಡಿ ನಿರ್ಮಿಸಿರುವ ದನದ ಕೊಟ್ಟಿಗೆ ಬಾಕಿ ಬಿಲ್ ಪಾವತಿಸಲು ಕಳೆದ ೭ ವರ್ಷಗಳಿಂದಲೂ ಮನವಿ ಕೊಡುತ್ತಿದ್ದರೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕ್ರಮಕೈಗೊಂಡಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡರು. ಶಾಸಕ ಡಾ. ಎಚ್.ಡಿ.ರಂಗನಾಥ್ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಸೇರಿದಂತೆ ಯಾವುದೇ ಯೋಜನೆಗಳಡಿ ಜನರಿಗೆ ಸೌಲಭ್ಯ ತಲುಪಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಜನಸ್ಪಂದನ ಕಾರ್ಯಕ್ರಮದ ಮೂಲಕ ಆಡಳಿತವೇ ಜನರ ಬಳಿಗೆ ಬಂದು ಸಮಸ್ಯೆಗಳನ್ನು ಪರಿಹರಿಸಬೇಕೆಂಬ ಸರ್ಕಾರದ ಕನಸನ್ನು ಅಧಿಕಾರಿಗಳು ನನಸಾಗಿಸಬೇಕು. ಪ್ರತಿಯೊಬ್ಬರಿಗೂ ಸರ್ಕಾರಿ ಸೌಲಭ್ಯಗಳು ದೊರೆಯಬೇಕು. ಎಷ್ಟೋ ರೈತ ಕುಟುಂಬಗಳು ಇದುವರೆಗೂ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಕಂಡೇ ಇಲ್ಲ. ಅಂತಹವರನ್ನು ಹುಡುಕಿ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಕಂದಾಯ ಇಲಾಖೆಯಡಿ ಸವಲತ್ತನ್ನು ಒದಗಿಸುವಾಗ ಇದ್ದ ತಾಂತ್ರಿಕ ಸಮಸ್ಯೆಗಳನ್ನು ಸರಳೀಕರಣಗೊಳಿಸಿದ್ದರೂ ಅಧಿಕಾರಿಗಳಿಗೇಕಿಂತ ಬೇಜವಾಬ್ದಾರಿ. ಸಮರ್ಪಕವಾಗಿ ಜನರ ಸೇವೆ ಮಾಡದ ಅಧಿಕಾರಿಗಳು ತಾಲೂಕಿನಿಂದ ವರ್ಗಾವಣೆ ತೆಗೆದುಕೊಂಡು ಹೋಗಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೊಸ ಪಡಿತರ ಚೀಟಿಗಳಿಗಾಗಿ ಗ್ರಾಮಸ್ಥರಿಂದ ಮನವಿಗಳು ಬಂದಾಗ ಸ್ಪಂದಿಸಿದ ಶಾಸಕರು ಸರ್ಕಾರದಿಂದ ಜುಲೈ, ಆಗಸ್ಟ್‌ನಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸುವ ನಿರೀಕ್ಷೆ ಇದೆ. ನಿಗಧಿಪಡಿಸಿದ ಸಮಯದೊಳಗೆ ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕೆಂದು ಶಾಸಕರು ಜನರಿಗೆ ಸಮಾಧಾನ ಮಾಡಿದರು. ಸಾಮಾಜಿಕ ಭದ್ರತಾ ಯೋಜನೆಯಡಿ ಕಳೆದೈದು ತಿಂಗಳಿನಿಂದ ಮನಸ್ವಿನಿ, ಮೈತ್ರಿ, ವೃದ್ಧಾಪ್ಯ ವೇತನದ ಮೊತ್ತ ಖಾತೆಗೆ ಜಮೆಯಾಗುತ್ತಿಲ್ಲ. ಕ್ರಮಕೈಗೊಳ್ಳಲು ಅನೇಕ ಬಾರಿ ಅಧಿಕಾರಿಗಳಿಗೆ ಬೇಡಿಕೊಂಡರೂ ಪ್ರಯೋಜನವಾಗಿಲ್ಲವೆಂದು ವೃದ್ಧರೊಬ್ಬರು ಸೇರಿ ಮಹಿಳೆಯರು ದೂರು ನೀಡಿದಾಗ ಮಾತನಾಡಿದ ಶಾಸಕರು, ವಯೋವೃದ್ಧರ ಇಳಿ ವಯಸ್ಸಿನಲ್ಲಿ ನೆರವಾಗಲೆಂದು ಸರ್ಕಾರ ವೃದ್ಧಾಪ್ಯ ವೇತನ ನೀಡುತ್ತಿದೆ. ಎರಡು ದಿನಗಳೊಳಗೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಿ ತಮಗೆ ಮಾಹಿತಿ ನೀಡಬೇಕು ಎಂದು ತಹಶೀಲ್ದಾರ್ ವಿಶ್ವನಾಥ್ ಅವರಿಗೆ ನಿರ್ದೇಶಿಸಿದರು. ಕುಣಿಗಲ್ ತಾಲೂಕಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಶಾಲೆಯೊಂದನ್ನು ತೆರೆಯಬೇಕೆಂಬ ಮಹದಾಸೆ ಇದೆ. ಈ ಭಾಗದ ರೈತರ ನೀರಾವರಿ ಅನುಕೂಲಕ್ಕಾಗಿ ಲಿಂಕ್ ಕೆನಾಲ್ ಯೋಜನೆ ಅತ್ಯವಶ್ಯವಾಗಿದೆ. ಈ ಯೋಜನೆಗಾಗಿ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿ 1 ಸಾವಿರ ಕೋಟಿ ರೂ.ಗಳ ಹಣವನ್ನು ತಂದಿದ್ದರೂ, ಕಾರ್ಯಗತಗೊಳಿಸಲು ಆಡಚಣೆಯಾಗುತ್ತಿದೆ. ಯೋಜನೆ ಕೈಗೊಳ್ಳಲು ನಮ್ಮ ಮುಂದಿರುವ ಆಕ್ಷೇಪಣೆಗಳ ಬಗ್ಗೆ ಚರ್ಚಿಸಲು ಇಂದು ಸಂಜೆ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದೆಂದು ತಿಳಿಸಿದರು. ಶೌಚಾಲಯದ ಸೌಲಭ್ಯವನ್ನು ಪಂಚಾಯಿತಿಯಿಂದ ನೀಡುತ್ತಿಲ್ಲ. ದನದ ಕೊಟ್ಟಿಗೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶದ ಅವಶ್ಯಕತೆ ಇಲ್ಲದಿದ್ದರೂ ಬಿಲ್ ಪಾವತಿಯನ್ನು ಮುಂದೂಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿಗೆ ಉತ್ತಿರಿಸಿದ ಶಾಸಕರು ಅಧಿಕಾರಿಗಳು ಫಲಾನುಭವಿಗಳಿಗೆ ದಿಕ್ಕು ತಪ್ಪಿಸದೆ ಹುತ್ರಿದುರ್ಗ ಪಂಚಾಯತಿ ವ್ಯಾಪ್ತಿಯ ನರೇಗಾ ಯೋಜನೆಯಡಿ ನಿರ್ಮಿಸಿದ ದನದ ಕೊಟ್ಟಿಗೆ ಹಾಗೂ ಸ್ಚಚ್ಛ ಭಾರತ್ ಮಿಷನ್ ಯೋಜನೆಯಡಿ ನಿರ್ಮಿಸಿದ ಶೌಚಾಲಯ ಕಾಮಗಾರಿಗಳ ಬಾಕಿ ಬಿಲ್ಲನ್ನು ಫಲಾನುಭವಿಗಳಿಗೆ ಪಾವತಿ ಮಾಡಲು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ನರೇಗಾ ಯೋಜನೆಯಡಿ ಶೇ.100ರಷ್ಟು ಮಾನವ ದಿನಗಳನ್ನು ಸೃಜಿಸಬೇಕು. ಮನೆ-ಮನೆಗೆ ಭೇಟಿ ನೀಡಿ ಉದ್ಯೋಗ ಚೀಟಿ ಪಡೆಯುವ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಮಾನವ ದಿನ ಸೃಜನೆಯಲ್ಲಿ ಪಂಚಾಯತಿ ನಿಗಧಿತ ಗುರಿ ಸಾಧಿಸಿಲ್ಲ. ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಯಲ್ಲದೆ, ಅಂಗನವಾಡಿ, ಶಾಲಾ ಆವರಣ ಗೋಡೆ ನಿರ್ಮಾಣದಂತಹ ಸಮುದಾಯಾಧಾರಿತ ಕಾಮಗಾರಿಗೆ ಆದ್ಯತೆ ನೀಡಬೇಕು. ಪಂಚಾಯತಿ ವ್ಯಾಪ್ತಿಯ ಜನರ ಬೇಡಿಕೆಗನುಗುಣವಾಗಿ ವೈಯಕ್ತಿಕ ಶೌಚಾಲಯದ ಅವಶ್ಯಕತೆ ಇರುವ ಬಗ್ಗೆ ಸರ್ವೆ ನಡೆಸಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಹಸೀಲ್ದಾರ್‌ರು ವಾರಕ್ಕೆರಡು ದಿನ ಸಮಯ ನಿಗಧಿಪಡಿಸಿ ಜನಸಂಪರ್ಕಕ್ಕೆ ಲಭ್ಯವಿದ್ದು, ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು. ಪ್ರತಿ ವಾರ ಒಂದೊಂದು ಹೋಬಳಿಯಲ್ಲಿ ಪೌತಿ ಖಾತೆ ಆಂದೋಲನ ಏರ್ಪಡಿಸಬೇಕು. ಮಂಜೂರಾಗಿರುವ ಸ್ಮಶಾನ ಭೂಮಿಯ ಸರ್ವೇ ಕಾರ್ಯಕ್ಕೆ ವೇಗ ನೀಡಬೇಕು ಎಂದು ನಿರ್ದೇಶಿಸಿದರು.ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ತಹಶೀಲ್ದಾರ್ ವಿಶ್ವನಾಥ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್, ಕೃಷಿ ಉಪನಿರ್ದೇಶಕ ಅಶೋಕ್ ಗ್ರಾಮ ಪಂಚಾಯತಿ ಅಧ್ಯಕ್ಷೆ ಕೃಷ್ಣವೇಣಿ ಹಾಗೂ ಉಪಾಧ್ಯಕ್ಷ ಕೆ.ಕೆ. ಕೆಂಪಣ್ಣ, ಸೇರಿದಂತೆ ಮತ್ತಿತರರಿದ್ದರು. ಹುತ್ರಿದುರ್ಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳಾದ ಜಯಶ್ರೀ, ರೂಪ, ಡಿ. ಇಂಚರ, ಜಿ. ಇಂಚರ, ಲಾವಣ್ಯ ಮತ್ತು ತಂಡ ಪ್ರಾರ್ಥನಾ ಗೀತೆ ಹಾಡಿದರು.42 ಅರ್ಜಿ ಸ್ವೀಕಾರ: ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಅರ್ಜಿ ಸ್ವೀಕರಿಸಲು ಇಲಾಖಾವಾರು ಅರ್ಜಿ ಸ್ವೀಕಾರ ಕೇಂದ್ರಗಳನ್ನು ತೆರೆಯಲಾಗಿತ್ತು. ಅರ್ಜಿ ಸ್ವೀಕಾರ ಕೇಂದ್ರದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 33 ಅರ್ಜಿ, ತಾಲೂಕು ಪಂಚಾಯತಿ-೩, ಬೆಸ್ಕಾಂ-2, ಪುರಸಭೆ-2, ಸಮಾಜ ಕಲ್ಯಾಣ ಇಲಾಖೆ-1, ಗಣಿ ಮತ್ತು ಭೂ ವಿಜ್ಞಾನ ಇಲಾಖೆ-1 ಸೇರಿ ಒಟ್ಟು 42 ಅಹವಾಲುಗಳು ಸ್ವೀಕೃತವಾಗಿವೆ.