ಕಾನೂನು ಬಾಹಿರವಾಗಿ ಸಾಗಾಣೆ ವಾಹನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಬಹುತೇಕ ಸರ್ಕಾರ ಹಾಗೂ ಸಾರಿಗೆ ಇಲಾಖೆಯಿಂದ ಯಾವುದೇ ರೀತಿ ಅನುಮತಿ ಪಡೆದಿಲ್ಲ. ಇದರಿಂದ ಖಾಸಗಿ ವಾಹನ ಚಾಲಕರ ದುಡಿಮೆಗೆ ಅನ್ಯಾಯವಾಗುತ್ತಿದೆ.

ಹುಬ್ಬಳ್ಳಿ:

ಅನಧಿಕೃತವಾಗಿ ನಡೆಯುತ್ತಿರುವ ಓಲಾ, ಉಬರ್‌ ಹಾಗೂ ಗೂಡ್ಸ್‌ ಪೋರ್ಟಲ್‌ನಂತಹ ಆನ್‌ಲೈನ್‌ ಸಂಸ್ಥೆಗಳ ವಿರುದ್ಧ ಹಾಗೂ ಇಂತಹ ಸಂಸ್ಥೆಗಳಿಗೆ ಸಹಕಾರ ನೀಡುತ್ತಿರುವ ಸಾರಿಗೆ ಅಧಿಕಾರಿಗಳ ಧೋರಣೆ ಖಂಡಿಸಿ ಸೋಮವಾರ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಕಿತ್ತೂರು ಚೆನ್ನಮ್ಮ ಸರ್ಕಲ್‌ನಲ್ಲಿ ಸಮಾವೇಶಗೊಂಡ ಆಟೋ ಚಾಲಕರು, ಸರ್ಕಾರ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ನೂರಾರು ಆಟೋದೊಂದಿಗೆ ಆರ್‌ಟಿಒ ಕಚೇರಿ ವರೆಗೆ ಬೃಹತ್‌ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಈ ವೇಳೆ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ಕಾನೂನು ಬಾಹಿರವಾಗಿ ಸಾಗಾಣೆ ವಾಹನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಬಹುತೇಕ ಸರ್ಕಾರ ಹಾಗೂ ಸಾರಿಗೆ ಇಲಾಖೆಯಿಂದ ಯಾವುದೇ ರೀತಿ ಅನುಮತಿ ಪಡೆದಿಲ್ಲ. ಇದರಿಂದ ಖಾಸಗಿ ವಾಹನ ಚಾಲಕರ ದುಡಿಮೆಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ವಾಹನ ಚಾಲಕರಿಗೆ ಆರ್ಥಿಕವಾಗಿ ಆಗುತ್ತಿರುವ ಸಮಸ್ಯೆ ಬಗೆಹರಿಸುಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವು ಸಾರಿಗೆ ಇಲಾಖೆಯ ಅಧಿಕಾರಿಗಳೇ ಇಂತಹ ಕಾನೂನು ಬಾಹಿರ ಸಂಸ್ಥೆಗಳ ಪೋಷಕರಾಗಿದ್ದಾರೆ. ಸರ್ಕಾರದ ಧೋರಣೆಯಿಂದ ಚಾಲಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಯಲ್ಲಿ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದು ಸಹ ಆಟೋ ಚಾಲಕರಿಗೆ ಬಹಳಷ್ಟು ಸಮಸ್ಯೆಯಾಗಿದೆ. ಸರ್ಕಾರ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು. ನಂತರ ಸಾರಿಗೆ ಇಲಾಖೆ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಹಾಗೂ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೀವನ ಹುತ್ಕುರಿ, ಕೆ.ಎಂ. ಸಂತೋಷಕುಮಾರ ಸೇರಿದಂತೆ ನೂರಾರು ಆಟೋ ಚಾಲಕರು ಹಾಗೂ ಮಾಲೀಕರು ಭಾಗವಹಿಸಿದ್ದರು.