ಪ್ಲಾಸ್ಟಿಕ್ ಮುಕ್ತ ಮಹದೇಶ್ವರ ಬೆಟ್ಟಕ್ಕೆ ಕ್ರಮ ಕೈಗೊಳ್ಳಿ

| Published : May 22 2025, 12:49 AM IST

ಪ್ಲಾಸ್ಟಿಕ್ ಮುಕ್ತ ಮಹದೇಶ್ವರ ಬೆಟ್ಟಕ್ಕೆ ಕ್ರಮ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದಲ್ಲಿ ಮೈಸೂರಿನ ಪರಿಸರ ವಾರಿಯರ್ಸ್ ಗ್ರೂಪ್‌ನ ಪಿ.ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚೆಕ್‌ಪೋಸ್ಟ್‌ಗಳನ್ನು ತೆರೆದು, ಅರಿವು ಮೂಡಿಸುವ ಜೊತೆಗೆ ಕಠಿಣ ಕ್ರಮ ತೆಗೆದುಕೊಂಡು ಪ್ಲಾಸ್ಟಿಕ್ ಮುಕ್ತ ಮಲೆಮಹದೇಶ್ವರ ಬೆಟ್ಟ ಮಾಡಬೇಕೆಂದು ಮೈಸೂರಿನ ಪರಿಸರ ವಾರಿಯಾರ್ಸ್ ಗ್ರೂಪ್‌ನ ಪಿ.ಮಂಜುನಾಥ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ವಿವಿಧ ಸಂಘಟನೆಗಳೊಡಗೂಡಿ ಇದರ ಬಗ್ಗೆ ಹೋರಾಟ ಮಾಡುತ್ತ ಬಂದಿದ್ದರೂ ಈ ಬಗ್ಗೆ ಕಠಿಣ ಕ್ರಮ ಕೈಗೊಂಡಿಲ್ಲ. ವಡಕೆಹಳ್ಳದಲ್ಲಿ ಚೆಕ್‌ಪೋಸ್ಟ್ ತೆರೆದಿದ್ದರೂ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಇಲ್ಲಿಗೆ ಅಗತ್ಯ ಸಿಬ್ಬಂದಿ ನೇಮಿಸಬೇಕು. ಮತ್ತು ತಿಳಿವಳಿಕೆ ಜಾಗೃತಿ ಮೂಡಿಸಬೇಕು. ಪಾದಯಾತ್ರೆ ಮೂಲಕ ಬರುವಂತಹ ಭಕ್ತಾದಿಗಳಿಗೆ ನಿಗದಿತ ಸ್ಥಳಗಳಲ್ಲಿ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಬೇಕು ಎಂದರು.

ಮಲೆಮಹದೇಶ್ವರ ಬೆಟ್ಟದ ದೇವಸ್ಥಾನ ಮತ್ತು ಅರಣ್ಯ ಪ್ರದೇಶದ ಪಾವಿತ್ರತೆ, ಸ್ವಚ್ಛತೆ ಹಿತ ದೃಷ್ಟಿಯಿಂದ ಪರಿಸರ ಕ್ರಿಯಾ ಸಮಿತಿ ರಚನೆ ಮಾಡಿ ಈ ಸಮಿತಿಯಲ್ಲಿ ನಮಗೂ ವಿಶ್ವಾಸ ಸೇವೆ ಸಲ್ಲಿಸಲು ಅವಕಾಶ ನೀಡಬೇಕೆಂದು ಹೇಳಿದರು. ವಾಹನಗಳಲ್ಲಿ ಬರುವಂತಹ ಭಕ್ತಾದಿಗಳು ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಎಲ್ಲಂದರಲ್ಲಿ ಎಸೆಯುವುದರಿಂದ ಅರಣ್ಯ ಪ್ರದೇಶದ ಸ್ವಚ್ಛತೆಗೆ ಧಕ್ಕೆ ಉಂಟಾಗುವುದರಿಂದ ಅರಣ್ಯ ಪ್ರದೇಶ ಜಲಮೂಲಗಳನ್ನು ಸೇರಿ ಮಾಲಿನ್ಯ ಹೆಚ್ಚುವುದರಿಂದ ಬಂಡೀಪುರ ಪ್ಲಾಸ್ಟಿಕ್ ನಿಯಂತ್ರಣ ಚೆಕ್ ಪೋಸ್ಟ್ ಮಾದರಿಯನ್ನು ಮಲೆಮಹದೇಶ್ವರ ಬೆಟ್ಟದ ಕೌದಳ್ಳಿಯಲ್ಲಿ ಪ್ರಾರಂಭಿಸಬೇಕು ಎಂದರು.

ಮಲೆಮಹದೇಶ್ವರ ಬೆಟ್ಟದ ಕೊಳ್ಳೇಗಾಲ ಹನೂರು ಮುಂತಾದ ಕಡೆ ಬಸ್ ಸ್ಟ್ಯಾಂಡ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಬೆಟ್ಟಕ್ಕೆ ವಾಹನಗಳಲ್ಲಿ ಬರುವ ಭಕ್ತಾದಿಗಳು ಕಡ್ಡಾಯವಾಗಿ ಸ್ಟೀಲ್ ವಾಟರ್ ಬಾಟಲ್ ಬಳಸುವಂತೆ ಕಾನೂನು ನಿಯಮ ತರಬೇಕು ಎಂದು ಒತ್ತಾಯಿಸಿದರು. ನಾಗಮಲೆ ಕ್ಷೇತ್ರವು ಮಲೆಮಹದೇಶ್ವರ ಬೆಟ್ಟದಿಂದ ೧೫ ಕಿ.ಮೀ ದೂರ ದಟ್ಟ ಕಾಡಿನ ಮಧ್ಯೆ ನಿಸರ್ಗದ ರಮಣೀಯ ದೃಶ್ಯಗಳು ಪಾದಯಾತ್ರೆ ಮೂಲಕ ಭಕ್ತಾದಿಗಳು ಸಾಗುವಾಗ ಕಣ್ಮನ ಸೆಳೆಯುತ್ತದೆ. ಈ ಅರಣ್ಯ ಪ್ರದೇಶ ಮತ್ತು ವನ್ಯಜೀವಿಗಳ ಹಿತ ದೃಷ್ಟಿಯಿಂದ ಇಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿಸಬೇಕು. ಪರ್ಯಾಯ ಮಾರ್ಗವಾಗಿ ಹಳಿಯೂರು ಚೆಕ್ ಪೋಸ್ಟ್, ಇಂಡಿಗನತ್ತ ಗ್ರಾಮ ಮತ್ತು ತೆಂಕಣಿ ಮುಂತಾದ ಕಡೆ ಭಕ್ತಾದಿಗಳು ಗ್ರಾಮಸ್ಥರ ಕುಡಿಯುವ ನೀರಾ ಸೌಲಭ್ಯಕ್ಕಾಗಿ ಶುದ್ಧ ನೀರಿನ ಘಟಕ ವ್ಯವಸ್ಥೆ ಆಗಬೇಕು ಎಂದರು. ಗಂಧದಕಡ್ಡಿ, ಕರ್ಪೂರ, ಅರಿಶಿನ, ಕುಂಕುಮ, ಪೂಜಾ ಸಾಮಗ್ರಿಗಳು ಪ್ಲಾಸ್ಟಿಕ್ ರಹಿತವಾಗಿರಬೇಕು. ಪ್ರತಿಯೊಬ್ಬ ಭಕ್ತಾದಿಯು ಸ್ಟೀಲ್ ವಾಟರ್ ಬಾಟಲ್ ಬಳಸಬೇಕು. ಆಹಾರ ಪದಾರ್ಥಗಳಿಗಾಗಿ ಬಳಸುವ ಪ್ಲಾಸ್ಟಿಕ್ ವಸ್ತುಗಳನ್ನು ವಾಪಸ್ ತರಲು ಮುಂಗಡ ಕಟ್ಟಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು. ಪ್ರತಿಯೊಬ್ಬ ಭಕ್ತಾದಿಗಳು ಬಟ್ಟೆ ಬ್ಯಾಗ್ ಉಪಯೋಗಿಸಬೇಕು ಎಂದರು.ನೆರೆಹೊರೆಯ ರಾಜ್ಯಗಳಾದ ತಮಿಳುನಾಡು, ಕೇರಳ ಶಬರಿಮಲೆಗೆ ಹೋಗುವ ಲಕ್ಷಾಂತರ ಭಕ್ತಾದಿಗಳಿಗೆ ಉತ್ತಮ ಕುಡಿಯುವ ನೀರು ವ್ಯವಸ್ಥೆ ಮಾಡುವ ಮೂಲಕ ಶಬರಿಮಲೆ ದೇವಸ್ಥಾನ ಬೋರ್ಡ್ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ, ಆಂಧ್ರಪ್ರದೇಶ, ತಿರುಪತಿ ರೀತಿಯ ಮಾದರಿ ಜಾರಿಗೆ ತರಬೇಕು ಎಂದರು.ಈ ನಮ್ಮ ಬೇಡಿಕೆಗಳ ಬಗ್ಗೆ ಗಮನಹರಿಸಿ ಪ್ಲಾಸ್ಟಿಕ್ ಮುಕ್ತ ಮಲೆಮಹದೇಶ್ವರ ಬೆಟ್ಟ ಮಾಡದಿದ್ದರೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿ ಮುಂದೆ ಶಾಂತಿಯುತ ಉಪವಾಸ ಸತ್ಯಾಗ್ರಹ ಹಮ್ಮಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಸಿರು ಪಡೆಯ ಸತೀಶ್, ಕೆಆರ್‌ಎಸ್ ಪಕ್ಷದ ಗಿರೀಶ್, ಬೀರೇಶ್ ಇದ್ದರು.