ಮಹಾರಾಜ ಪಾರ್ಕ್‌ನಲ್ಲಿ ಸ್ವಚ್ಛತೆಗೆ ಕ್ರಮವಹಿಸಿ

| Published : May 16 2025, 02:31 AM IST

ಸಾರಾಂಶ

ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ನಗರದ ಮಹಾರಾಜ್ ಪಾರ್ಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಹಾಗೂ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಶೌಚಾಲಯ ಸ್ವಚ್ಛತೆಗೆ ಕ್ರಮವಹಿಸಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. . ಪಾರ್ಕ್‌ನಲ್ಲಿ ವಾಕ್ ಮಾಡುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿದ್ಯುತ್ ಸಂಪರ್ಕದ ಕೇಬಲ್‌ಗಳು ಮೇಲೆ ಕಾಣಿಸದಂತೆ ಮುಚ್ಚಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ನಗರದ ಮಹಾರಾಜ್ ಪಾರ್ಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಹಾಗೂ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಶೌಚಾಲಯ ಸ್ವಚ್ಛತೆಗೆ ಕ್ರಮವಹಿಸಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಪಾರ್ಕ್‌ನಲ್ಲಿ ಇರುವ ಹಳೆಯ ಶೌಚಾಲಯದ ಬೀಗ ತೆಗೆದು ಸ್ವಚ್ಛತೆಗೆ ತಕ್ಷಣ ಕ್ರಮವಹಿಸಿ ಸಾರ್ವಜನಿಕರ ಬಳಕೆಗೆ ಕಲ್ಪಿಸಿ ಎಂದು ತಿಳಿಸಿದರು. ಪಾರ್ಕ್‌ನಲ್ಲಿ ಇರುವ ಮತ್ಸ್ಯಾಲಯವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಾರ್ಕ್‌ನಲ್ಲಿ ಇರುವ ಯೋಗಾಕೇಂದ್ರದ ಬಳಿ ಒಂದು ಬದಿಯಲ್ಲಿ ಮಾತ್ರ ತಂತಿ ಬೇಲಿ ಅಳವಡಿಸಿದೆ. ಅದೇ ರೀತಿ ಇನ್ನೊಂದು ಬದಿಯಲ್ಲಿ ತಂತಿ ಬೇಲಿ ಹಾಕಿ ಒಂದು ಗೇಟ್ ಅಳವಡಿಸುವಂತೆ ತಿಳಿಸಿದರು. ಮಕ್ಕಳ ಆಟಿಕೆಗಳನ್ನು ಅಳವಡಿಸಿರುವ ಸ್ಥಳದಲ್ಲಿ ತಗ್ಗು ಇರುವ ಕಡೆ ಮಣ್ಣು ತುಂಬಿಸಿ ಸಮತಟ್ಟು ಮಾಡಿಸಲು ಕ್ರಮವಹಿಸುವಂತೆ ಸೂಚಿಸಿದರು. ಪಾರ್ಕ್‌ನಲ್ಲಿ ವಾಕ್ ಮಾಡುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿದ್ಯುತ್ ಸಂಪರ್ಕದ ಕೇಬಲ್‌ಗಳು ಮೇಲೆ ಕಾಣಿಸದಂತೆ ಮುಚ್ಚಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಕ್ಕಳ ಆಟಿಕೆಗಳನ್ನು ದೊಡ್ಡವರು ಬಳಸಿ ಹಾಳು ಮಾಡುತ್ತಾರೆ ಎಂದು ಸಾರ್ವಜನಿಕರು ದೂರಿದರು. ಇದರಲ್ಲಿ ಸಾರ್ವಜನಿಕರ ಜವಾಬ್ದಾರಿ ಕೂಡ ಇರುತ್ತದೆ. ಈ ನಿಟ್ಟಿನಲ್ಲಿ ಪಾರ್ಕ್‌ಗೆ ಬರುವ ಎಲ್ಲಾ ಸಾರ್ವಜನಿಕರು ಸೇರಿ ಒಂದು ಅಸೋಸಿಯೇಷನ್ ಮಾಡಿಕೊಂಡು ಅಂತಹವರಿಗೆ ತಿಳಿವಳಿಕೆ ನೀಡಿ ಎಂದು ಸಲಹೆ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಪಾರ್ಕ್‌ನಲ್ಲಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.ಪಾರ್ಕ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಜೊತೆಗೆ ಶೌಚಾಲಯ ಬಳಕೆ ನಂತರ ಅಗತ್ಯ ನೀರು ಹಾಕಿ ಸ್ವಚ್ಛತೆಗೆ ಸಹಕಾರ ನೀಡುವಂತೆ ಜನರಿಗೆ ಅರಿವು ಮೂಡಿಸಲು ಸೂಚಿಸಿದರು. ನಾಗರಿಕರು ಸ್ವಚ್ಛಂದವಾಗಿ ವಿಹಾರ ನಡೆಸಲು ಅವಕಾಶ ಕಲ್ಪಿಸಿ ಎಂದು ತಿಳಿಸಿದರು.

ಪಾರ್ಕ್‌ನಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸಿ.ಸಿ.ಟಿ.ವಿ. ಅಳವಡಿಸಿ ಜೊತೆಗೆ ಸೈನ್ ಬೋರ್ಡ್ ಅಳವಡಿಸಲು ಸೂಚಿಸಿದರು. ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಮಾಡಿ ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರು. ಪಾರ್ಕ್‌ಗೆ ಹೆಚ್ಚಿನ ಕುಡುಕರು ಬರುತ್ತಾರೆ ಎಂದು ದೂರುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಿ ಅಂತಹವರ ಬಗ್ಗೆ ನಿಗಾವಹಿಸಿ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿದರು.

ಕೆ.ಎಸ್.ಆರ್‌.ಟಿ.ಸಿ. ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಉಪ ಲೋಕಾಯುಕ್ತರು, ಬಸ್ ನಿಲ್ದಾಣದಲ್ಲಿರುವ ಅಂಗಡಿಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ಹಾಗೂ ಪದಾರ್ಥಗಳ ಗುಣಮಟ್ಟ ಮತ್ತು ನಿರ್ದಿಷ್ಟ ಪ್ರಮಾಣದ ಬಗ್ಗೆ ಗಮನಹರಿಸಿ ಎಂದರಲ್ಲದೆ, ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದರೆ ಅಂತಹ ಅಂಗಡಿ ಮಾಲೀಕರ ಪರವಾನಗಿಯನ್ನು ರದ್ದುಮಾಡಲು ಕ್ರಮವಹಿಸುವಂತೆ ಕೆ.ಎಸ್.ಆರ್.ಟಿ.ಸಿ. ವಿಭಾಗಾಧಿಕಾರಿ ದೀಪಕ್ ಅವರಿಗೆ ಸೂಚನೆ ನೀಡಿದರು.ಬಸ್ ನಿಲ್ದಾಣದಲ್ಲಿರುವ ಶೌಚಾಲಯಗಳ ಸ್ವಚ್ಚತೆಗೆ ಆದ್ಯತೆ ನೀಡಿ ಎಂದು ತಿಳಿಸಿದರು. ಪ್ರಯಾಣಿಕರು ಸಮಯ ತಿಳಿದುಕೊಳ್ಳಲು ಬಸ್ ನಿಲ್ದಾಣದಲ್ಲಿ ಗಡಿಯಾರ ಅಳವಡಿಸಿ ಎಂದು ತಿಳಿಸಿದರು. ಹಾಸನ ನಗರದಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಕ್ಷಣ ಬಳಕೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸತ್ಯಮಂಗಲ ಕೆರೆ ಅಂಗಳದಲ್ಲಿರುವ ತ್ಯಾಜ್ಯ ಹಾಗೂ ಹೂಳು ತೆಗೆಸಲು ಬೃಹತ್ ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರಲ್ಲದೆ, ಸ್ವಚ್ಛತೆಗೆ ನಿಗಾವಹಿಸಿ ಇಲ್ಲಿ ವಾಯು ವಿಹಾರಕ್ಕೆ ಆಗಮಿಸುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ವಾಕಿಂಗ್ ಪಾತ್, ಅಕ್ಕಪಕ್ಕದಲ್ಲಿ ಗಿಡಗಂಟೆಗಳನ್ನು ತೆಗೆದು ಹಾಕುವಂತೆ ಹಾಗೂ ಕೆಳಗೆ ಬಾಗಿ ತಲೆಗೆ ತಾಗುವಂತೆ ಇರುವ ಮರಗಳ ಕೊಂಬೆಗಳನ್ನು ಕಡಿಯಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.ನಂತರ ಹುಣಸಿನಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಪಲೋಕಾಯುಕ್ತರು ಕೆರೆಯ ಅಂಗಳದಲ್ಲಿ ಬಿದ್ದಿದ್ದ ಕಸವನ್ನು ನೋಡಿ ಮೊದಲು ಇದನ್ನು ತೆರವುಗೊಳಿಸಿ ಕೆರೆಯ ಅಕ್ಕಪಕ್ಕದಲ್ಲಿ ವಾಸವಿರುವ ಜನಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದರು. ಕೆರೆಯ ಅಚ್ಚುಕಟ್ಟು ಪ್ರದೇಶ ಹಾಗೂ ಅಭಿವೃದ್ಧಿ ಮಾಡಿರುವ ವಿವರಗಳನ್ನೊಳಗೊಂಡ ಫಲಕ ಹಾಕುವಂತೆ ಸೂಚಿಸಿದರಲ್ಲದೆ, ಇದುವರೆಗೆ ಕೆರೆಯ ಅಭಿವೃದ್ಧಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಹಾಗೂ ವೆಚ್ಚ ಮಾಡಿರುವ ವಿವರಗಳನ್ನು ಒದಗಿಸುವಂತೆ ಬೃಹತ್ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಸದರಿ ಕೆರೆಗೆ ಕಲುಷಿತ ನೀರು ಸೇರ್ಪಡೆ ಆಗದಂತೆ ತಡೆಯಲು ನಿಗಾ ವಹಿಸಲು ಸೂಚನೆ ನೀಡಿದರು. ಸದರಿ ಕೆರೆಗೆ ಬೌಂಡರಿ ಗುರುತಿಸಿ ಬೇಲಿ ನಿರ್ಮಾಣ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಸಾರ್ವಜನಿಕರು ಇಲ್ಲಿ ಕಸ ಹಾಕದಂತೆ ಅರಿವು ಮೂಡಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತದ ವಿಚಾರಣೆಗಳು ೭ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್, ಕರ್ನಾಟಕ ಲೋಕಾಯುಕ್ತದ ಕಾನೂನು ಅಭಿಪ್ರಾಯ ೨ ಸಹಾಯಕ ನಿಬಂಧಕರು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಶುಭವೀರ ಬಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಕೆ. ದಾಕ್ಷಾಯಿಣಿ, ಸಿವಿಲ್ ನ್ಯಾಯಾಧೀಶರು ಹಾಗೂ ಉಪಯೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ ಪಾಟೀಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಕರ್ನಾಟಕ ಲೋಕಾಯುಕ್ತದ ಹಾಸನ ವಿಭಾಗದ ಪೊಲೀಸ್ ಅಧಿಕ್ಷಕರಾದ ಸ್ನೇಹ ಪಿ.ವಿ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.