ಸಾರಾಂಶ
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆಕನ್ನಡಪ್ರಭ ವಾರ್ತೆ ಕೊಪ್ಪಳ
ರಸ್ತೆ ಸುರಕ್ಷತೆಯ ಕುರಿತು ತೆಗೆದುಕೊಂಡ ನಿರ್ಣಯಗಳಿಗೆ ಕ್ರಮವಹಿಸಬೇಕು ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಸ್ತೆ ಸುರಕ್ಷತೆ ಕುರಿತು ಇರುವ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪಾಲನೆ ಮಾಡಬೇಕು ಇಲ್ಲದಿದ್ದರೆ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ. ಹಾಗಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ರಸ್ತೆಗಳಲ್ಲಿ ಬ್ಲ್ಯಾಕ್ ಸ್ಪಾಟ್‌ಗಳಿದ್ದರೆ ತಕ್ಷಣ ಸರಿಪಡಿಸಬೇಕೆಂದರು.ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏನಾದರೂ ಸಮಸ್ಯೆಗಳಾದರೆ ಜನರು ನಮಗೆ ಕೇಳುತ್ತಾರೆ. ರಸ್ತೆಗಳಲ್ಲಿ ಲೈಟಿಂಗ್. ಸಿಸಿಕ್ಯಾಮೆರಾ ಸೈನೇಜಗಳನ್ನು ಅವಶ್ಯಕತೆ ಇರುವಲ್ಲಿ ಹಾಕಬೇಕು ಮತ್ತು ನಿಗದಿಪಡಿಸಿದ ದಿನಾಂಕಗಳಂದು ರಸ್ತೆ ಸುರಕ್ಷತಾ ಕುರಿತು ಸಭೆ ನಡೆಯಬೇಕು. ಇಲ್ಲದಿದ್ದರೆ ತಮಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಸುರಕ್ಷತೆ ಕುರಿತು ಜನರಲ್ಲಿ ಅರಿವು ಮೂಡಿಸುವ ಜೊತೆಗೆ ರಸ್ತೆಗಳಲ್ಲಿ ಮಾಹಿತಿ ಫಲಕ ಮತ್ತು ಸೈನ್ ಬೋರ್ಡ್‌ಗಳನ್ನು ಅಳವಡಿಸಬೇಕು. ಹೆದ್ದಾರಿಗಳ ಮೇಲೆ ಅವಶ್ಯಕತೆಗಿಂತ ಹೆಚ್ಚಿನ ಭಾರದ ವಾಹನಗಳು ಸಂಚರಿಸುತ್ತವೆ ಇದರಿಂದ ರಸ್ತೆಗಳು ಹಾಳಾಗಿ ಹೋಗುತ್ತವೆ. ಅಗತ್ಯಕ್ಕಿಂತ ಹೆಚ್ಚಿನ ಭಾರ ಸಾಗಿಸುವ ವಾಹನಗಳ ಮೇಲೆ ಎಷ್ಟು ಕೇಸುಗಳನ್ನು ಹಾಕಲಾಗಿದೆ, ಮರಳಿನ ಟಿಪ್ಪರ್‌ಗಳ ಓಡಾಟದಿಂದಲೇ ಬಹಳಷ್ಟು ಗ್ರಾಮೀಣ ರಸ್ತೆಗಳು ಹಾಳಾಗುತ್ತವೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು.ಟ್ರಾಫಿಕ್ ಸಮಸ್ಯೆಗಳಾಗದಂತೆ ನಗರದಲ್ಲಿ ಪಾದಚಾರಿ ಮಾರ್ಗ ತೆರವುಗೊಳಿಸಿ ರಸ್ತೆ ಮೇಲೆ ವ್ಯಾಪಾರ ಮಾಡುವವರಿಗೆ ಒಂದು ಜಾಗ ನಿಗದಿಪಡಿಸಿ ಅಲ್ಲಿ ಅವರು ದಿನ ನಿತ್ಯದ ವ್ಯಾಪಾರ ಮಾಡಲು ವ್ಯವಸ್ಥೆ ಮಾಡಬೇಕು ಎಂದು ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು. ಅತಿ ವೇಗವಾಗಿ ವಾಹನ ಚಲಾವಣೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ ಪ್ರಕರಣಗಳನ್ನು ದಾಖಲಿಸಬೇಕು ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಮಾತನಾಡಿ, ಕೆಲವು ಕಡೆ ಟೋಲ್‌ಗೇಟ್‌ಗಳಲ್ಲಿ ದ್ವಿಚಕ್ರ ವಾಹನ ಓಡಾಡುವ ಮಾರ್ಗದಲ್ಲಿ ಸಿಸಿಟಿವಿ ಅಳವಡಿಸಿಲ್ಲ. ರಸ್ತೆಗಳಲ್ಲಿ ಎಷ್ಟು ಬ್ಲ್ಯಾಕ್ ಸ್ಪಾಟ್ ಗುರುತಿಸಿದ್ದಿರಿ. ಸಭೆಗೆ ಸುಮ್ಮನೆ ಬಂದು ಹೋಗುವ ಹಾಗೆ ಆಗಬಾರದು. ನಿಖರವಾಗಿ ಮಾಹಿತಿಯೊಂದಿಗೆ ಸಭೆಗೆ ಬರಬೇಕು. ಮುನಿರಾಬಾದ ಒಳಗಡೆ ಬಸ್ ಬರುತ್ತಿಲ್ಲ ಎಂದು ಶಾಲಾ ಮಕ್ಕಳು ಬಂದು ನಮಗೆ ದೂರು ನೀಡುತ್ತಿದ್ದಾರೆ. ಯಾಕೆ ಹೋಗುತ್ತಿಲ್ಲ. ಇದರಿಂದ ಶಾಲಾ-ಮಕ್ಕಳಿಗೆ ತೊಂದರೆಯಾಗುವುದಿಲ್ಲವೇ? ಚಾಲಕರಿಗೆ ಈ ಕುರಿತು ನಿರ್ದೆಶನ ನೀಡಿ ಕೇಳದಿದ್ದರೆ ಅವರ ಮೇಲೆ ಕ್ರಮ ಜರುಗಿಸಿ ಎಂದು ಸಾರಿಗೆ ಇಲಾಖೆ ಅಧಿಕಾರಿಗೆ ಹೇಳಿದರು.ಇದೇ ಸಂದರ್ಭದ ರಸ್ತೆ ಸುರಕ್ಷತಾ ಮಾಸಾಚರಣೆ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಪಿ. ಹೇಮಂತರಾಜ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸಪೇಟೆ ಸೈಟ್ ಎಂಜಿನಿಯರ್ ದಾನೇಶ್ವರ್, ಆರ್.ಟಿ.ಓ ಲಕ್ಷ್ಮೀಕಾಂತ ನಾಲವಾರ, ನಗರಸಭೆ ಆಯುಕ್ತ ಗಣಪತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ಅಧಿಕಾರಿ ರಾಜೇಂದ್ರ ಜಾಧವ್ ಸೇರಿದಂತೆ ಇತರರಿದ್ದರು.;Resize=(128,128))
;Resize=(128,128))