ಸಾರಾಂಶ
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಬೆಳೆವಾರು ತಾಲೂಕುವಾರು ಬಿತ್ತನೆ ಪ್ರಗತಿಯ ಅನುಸಾರ ಕೃಷಿ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಿಯಾಯಿತಿಯಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನು ಇರುವ ಬಗ್ಗೆ ರೈತರಿಗೆ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ, ಗ್ರಾಮ ಪಂಚಾಯತ್‌ಗಳಲ್ಲಿ ಫಲಕಗಳನ್ನು ಹಾಕಲು ಕ್ರಮ ವಹಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮುಂಗಾರು ಪೂರ್ವ ಮಳೆಗಳು ಈಗಾಗಲೇ ಆರಂಭವಾಗಿವೆ. ಮೇ ಒಂದರಿಂದ ಮೇ 22ರವರೆಗೆ ವಿವಿಧ ತಾಲೂಕುಗಳು ಸೇರಿದಂತೆ ವಿಜಯನಗರ ಜಿಲ್ಲೆಯಲ್ಲಿ ವಾಡಿಕೆ ಮಳೆ 39 ಮಿ.ಮೀ. ಇದ್ದು, ವಾಸ್ತವಿಕವಾಗಿ 75 ಮಿಮೀ ಉತ್ತಮ ಮಳೆಯಾಗಿದೆ. ಮುಂಗಾರು ಮಳೆಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಜನ ಜಾನುವಾರು ಸುರಕ್ಷತೆ ದೃಷ್ಟಿಯಿಂದ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.ಕುಡಿಯುವ ನೀರು ಸರಬರಾಜು ಸ್ಥಿತಿಗತಿ:
ಕೂಡ್ಲಿಗಿ ತಾಲೂಕಿನಲ್ಲಿ 17, ಕೊಟ್ಟೂರು ತಾಲೂಕಿನಲ್ಲಿ 7, ಹರಪನಹಳ್ಳಿ ತಾಲೂಕಿನಲ್ಲಿ 29, ಹೊಸಪೇಟೆ ತಾಲೂಕಿನಲ್ಲಿ 8, ಹಡಗಲಿ ತಾಲೂಕಿನಲ್ಲಿ 12 ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 18 ಸೇರಿ ಒಟ್ಟು 91 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿನ ಒಟ್ಟು 196 ಹಳ್ಳಿಗಳಲ್ಲಿ ಖಾಸಗಿ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ. ಮಳೆ ಕೊರತೆ ಮುಂದುವರಿದಲ್ಲಿ ಮುಂಬರುವ ತಿಂಗಳಲ್ಲಿ ಕುಡಿಯುವ ನೀರಿಗೆ ತೊಂದೆಯಾಗಬಹುದೆಂದು ಹೊಸಪೇಟೆ ತಾಲೂಕಿನಲ್ಲಿ 30, ಹಡಗಲಿಯಲ್ಲಿ 50, ಹಗರಿಬೊಮ್ಮನಹಳ್ಳಿಯಲ್ಲಿ 43, ಹರಪನಹಳ್ಳಿಯಲ್ಲಿ 128, ಕೊಟ್ಟೂರಿನಲ್ಲಿ 21 ಹಾಗೂ ಕೂಡ್ಲಿಗಿಯಲ್ಲಿ 61 ಗ್ರಾಮಗಳು ಸೇರಿ ಒಟ್ಟು 333 ಗ್ರಾಮಗಳಲ್ಲಿ ಮತ್ತು ಹೊಸಪೇಟೆಯ 15 ವಾರ್ಡ್ ಮತ್ತು ಹರಪನಹಳ್ಳಿಯ 27 ವಾರ್ಡ್‌ಗಳು ಸೇರಿ ಒಟ್ಟು 46 ವಾರ್ಡ್‌ಗಳು ಗುರುತಿಸಲಾಗಿದೆ ಎಂದರು.ಕುಡಿಯುವ ನೀರು ಕೊರತೆ ಆಗಬಹುದಾದ ಗ್ರಾಮಗಳು ಮತ್ತು ವಾರ್ಡ್‌ಗಳಲ್ಲಿ ಒಪ್ಪಂದಕ್ಕಾಗಿ ಹೆಚ್ಚಿನ ಇಳುವರಿ ನೀಡುವ 602 ಬೋರ್‌ವೆಲ್‌ಗಳನ್ನು ಈಗಾಗಲೇ ಗುರುತಿಸಿದ್ದು, ಈ ಪೈಕಿ ಈಗಾಗಲೇ 485 ಬೋರ್‌ವೆಲ್‌ಗಳೊಂದಿಗೆ ಮುಂಗಡ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಬೆಳೆವಾರು ತಾಲೂಕುವಾರು ಬಿತ್ತನೆ ಪ್ರಗತಿಯು ನಿಗದಿಪಡಿಸಿದ ಗುರಿಯನುಸಾರ ಆಗಬೇಕು. ಈ ನಿಟ್ಟಿನಲ್ಲಿ ವಿಶೇಷವಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಬೇಕು. 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಿಯಾಯಿತಿಯಲ್ಲಿ ಬಿತ್ತನ ಬೀಜ ಹಾಗೂ ಗೊಬ್ಬರ ದಾಸ್ತಾನು ಇರುವ ಬಗ್ಗೆ ರೈತರಿಗೆ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ, ಗ್ರಾಪಂಗಳಲ್ಲಿ ಫಲಕಗಳನ್ನು ಹಾಕಲು ಕ್ರಮ ವಹಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಉತ್ತಮ ರೀತಿಯಲ್ಲಿ ಮಳೆ ಸುರಿದಿದೆ. ಜಿಲ್ಲೆಯ ಎಲ್ಲ ತಾಲೂಕಿನ ಗ್ರಾಮಗಳಲ್ಲಿ ಯಾವುದೇ ಕಡೆಗಳಲ್ಲಿ ನೀರು ನಿಲ್ಲದಂತೆ ತಗ್ಗು ಪ್ರದೇಶವನ್ನು ಸಮತಟ್ಟುಗೊಳಿಸಬೇಕು. ನೀರು ನಿಲ್ಲದೇ ಸರಾಗವಾಗಿ ಹರಿದುಹೋಗುವಂತೆ ಗಟಾರು ದುರಸ್ತಿಗೆ ಗಮನ ಹರಿಸಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಪಂ ಸಿಇಒ ಸದಾಶಿವ ಪ್ರಭು ಬಿ. ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಅನುರಾಧ ಜಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.