ಗ್ರಾಮಸ್ಥರ ಆರೋಗ್ಯ ಸುರಕ್ಷತೆಗೆ ಕ್ರಮ ಕೈಗೊಳ್ಳಿ

| Published : May 18 2024, 12:37 AM IST

ಸಾರಾಂಶ

ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಪಂ ವ್ಯಾಪ್ತಿಯ ಎರೆಹಳ್ಳಿಯಲ್ಲಿ ತಜ್ಞ ವೈದ್ಯಾಧಿಕಾರಿಗಳ ತಂಡ ರಚಿಸುವಂತೆ ಆಗ್ರಹಿಸಿ ಬಿಜೆಪಿ ಎಸ್ಪಿ ಮೋರ್ಚಾದ ನೇತೃತ್ವದಲ್ಲಿ ಗ್ರಾಮಸ್ಥರು ಜಿಪಂ ಉಪ ಕಾರ್ಯದರ್ಶಿ ಕೆ.ಜಯಲಕ್ಷ್ಮಮ್ಮ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ: ಚಿಕ್ಕಮಗಳೂರು

ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿಗಳ ತಂಡ ರಚಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕೆಂದು ಎರೆಹಳ್ಳಿ ಗ್ರಾಮಸ್ಥರು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಮನವಿ ಸಲ್ಲಿಸಿದರು.

ತಾಲೂಕಿನ ಇಂದಾವರ ಗ್ರಾಪಂ ವ್ಯಾಪ್ತಿಯ ಎರೆಹಳ್ಳಿಯಲ್ಲಿ ಸುಮಾರು 40 ಕ್ಕೂ ಹೆಚ್ಚು ಪರಿಶಿಷ್ಟ ವರ್ಗದ ಜನ ವಾಸಿಸುತ್ತಿದ್ದು, ಇತ್ತಿಚೆಗೆ ಓರ್ವ ಯುವಕ ಜ್ವರದಿಂದ ಮೃತಪಟ್ಟರೂ ಸಹಿತ ಗ್ರಾಪಂ ಪಿಡಿಒ ಹಾಗೂ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಜಿಪಂ ಉಪ ಕಾರ್ಯ ದರ್ಶಿ ಕೆ.ಜಯಲಕ್ಷ್ಮಮ್ಮ ಅವರಿಗೆ ಮನವಿಯಲ್ಲಿ ತಿಳಿಸಿದರು.

ಗ್ರಾಮಕ್ಕೆ ಸಂಬಂಧಿಸಿದ ಆರೋಗ್ಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್, ಗ್ರಾಮದಲ್ಲಿ ಸ್ವಚ್ಛತೆಯಿಲ್ಲದಿರುವ ಕಾರಣ ಪ್ರತಿ ಕುಟುಂಬದ ಮೂವರಿಗೆ ಡೆಂಗ್ಯೂ ಸೋಂಕು ತಗುಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಆತಂಕ ವ್ಯಕ್ತಪಡಿಸಿದರು.

ಸ್ವಚ್ಛತೆ ಕಾಪಾಡುವ ಸಂಬಂಧ ಗ್ರಾಪಂ ಪಿಡಿಒಗೆ ಎರೆಹಳ್ಳಿ ಗ್ರಾಮಸ್ಥರು ಹಲವಾರು ಬಾರಿ ಪತ್ರ ಮೂಲಕ ಒತ್ತಾಯಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಸೋಂಕಿನ ತೀವ್ರತೆ ಹೆಚ್ಚಳಗೊಂಡ ಪರಿಣಾಮ ಪುಟ್ಟ ಮಕ್ಕಳು ಅನಾರೋಗ್ಯ ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಎಂದರು.

ಡೆಂಗ್ಯೂ ಸೋಂಕು ಹರಡುವಿಕೆ ಕುರಿತು ಈಗಾಗಲೇ ಆರೋಗ್ಯ ಇಲಾಖೆಯ ಗಮನಕ್ಕೆ ತಂದರೂ ಸಹಿತ ಯಾವುದೇ ಕ್ರಮ ಕೈಗೊಂಡಿಲ್ಲ. ಮೇಲಾಧಿಕಾರಿಗಳ ನಿರ್ಲಕ್ಷ್ಯದಿಂದ ಸೋಂಕಿನ ತೀವ್ರತೆ ಇನ್ನಷ್ಟು ಹೆಚ್ಚಾಗಿ ಅನಾರೋಗ್ಯ ಪೀಡಿತ ಗ್ರಾಮವಾಗಿ ಪರಿಣಾಮಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹೀಗಾಗಿ ಗ್ರಾಮಸ್ಥರು ಶೀಘ್ರದಲ್ಲಿ ಗುಣಮುಖರಾಗಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿ ವೃಂದಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು. ಅಲ್ಲದೇ ಉಳಿದಂತಹ ಗ್ರಾಮಸ್ಥರಿಗೆ ಡೆಂಗ್ಯೂ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಜಿಪಂ ಅಥವಾ ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ರಾಜ್ಯ ಸರ್ಕಾರದ ವಿರುದ್ಧ ಗ್ರಾಮಸ್ಥರ ನೇತೃತ್ವದಲ್ಲಿ ಎಸ್ಸಿ ಮೋರ್ಚಾ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ಬಿಜೆಪಿ ಮುಖಂಡ ಕೆ.ಆರ್.ಅನಿಲ್‌ಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ವೈ.ಜಿ.ಸುರೇಶ್, ಮುಖಂಡ ಮಂಜುನಾಥ್, ಗ್ರಾಮಸ್ಥರಾದ ಜಯರಾಮ್, ಶೇಖರ್, ಕೇಶವ್, ಲೋಕೇಶ್, ನವೀನ್ ಹಾಜರಿದ್ದರು.