ಸಾರಾಂಶ
ಜಗಳೂರು ಪಟ್ಟಣದ ಮುಖ್ಯ ರಸ್ತೆಯನ್ನು ವಿಸ್ತರಣೆ ಮಾಡುವಂತೆ ತಾಲೂಕು ವಕೀಲರ ಸಂಘ ಅಧ್ಯಕ್ಷ ಬಸವರಾಜ್ ನೇತೃತ್ವದಲ್ಲಿ ವಕೀಲರು ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
- ತಾಲೂಕು ವಕೀಲರ ಸಂಘದಿಂದ ಶಾಸಕ ದೇವೇಂದ್ರಪ್ಪಗೆ ಮನವಿ
- - -ಕನ್ನಡ ಪ್ರಭ ವಾರ್ತೆ ಜಗಳೂರು
ಪಟ್ಟಣದ ಮುಖ್ಯ ರಸ್ತೆಯನ್ನು ವಿಸ್ತರಣೆ ಮಾಡುವಂತೆ ತಾಲೂಕು ವಕೀಲರ ಸಂಘ ಅಧ್ಯಕ್ಷ ಬಸವರಾಜ್ ನೇತೃತ್ವದಲ್ಲಿ ವಕೀಲರು ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.ತಾಲೂಕು ಕೇಂದ್ರವಾಗಿರುವ ಜಗಳೂರು ಪಟ್ಟಣ ದಿನೇದಿನೇ ಅಭಿವೃದ್ಧಿ ಹೊಂದುತ್ತಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಪಟ್ಟಣದ ಮಧ್ಯ ಭಾಗದಲ್ಲಿ ಸಂಚರಿಸುತ್ತಿವೆ. ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯು ಪಟ್ಟಣದ ಮಧ್ಯಭಾಗದಲ್ಲಿ ಹಾದುಹೋಗಿದೆ. ಸರಕು ಹೊತ್ತ ಬೃಹತ್ ವಾಹನಗಳು ಹಾಗೂ ಅಸಂಖ್ಯಾತ ಬಸ್‌ಗಳು, ಕಾರುಗಳು, ದ್ವಿಚಕ್ರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಈ ರಸ್ತೆಯು ಸದಾ ವಾಹನಗಳ ದಟ್ಟಣೆಗಳಿಂದ ಕೂಡಿದೆ. ಪಾದಾಚಾರಿಗಳು ಓಡಾಡುವುದೇ ಕಷ್ಟ. ಈ ರಸ್ತೆಯಲ್ಲಿ ಅನೇಕ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯವಾಗಿವೆ ಎಂದರು.
ಹಲವು ದಶಕಗಳಿಂದ ವೈಜ್ಞಾನಿಕವಾಗಿ ರಸ್ತೆ ವಿಸ್ತರಣೆ ಮಾಡದೇ ಇರುವುದರಿಂದ ಚಳ್ಳಕೆರೆ ರಸ್ತೆಯ ಟೋಲ್‌ನಿಂದ ಜಗಳೂರು ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದವರೆಗೆ ಅತ್ಯಂತ ಕಿರಿದಾದ ರಸ್ತೆಯಿಂದ ವಾಹನಗಳು ಹಾಗೂ ಪಾದಾಚಾರಿಗಳು ತೆವಳಿಕೊಂಡೇ ಸಾಗಬೇಕಾಗಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಕೂಡಲೇ ಶಾಸಕರು ಪಟ್ಟಣದ ರಸ್ತೆ ವಿಸ್ತರಣೆ ಮಾಡಬೇಕೆಂದು ಮನವಿ ಸಲ್ಲಿಸಿದ್ದೇವೆ ಎಂದು ಮುಖಂಡರು ಹೇಳಿದರು.ಮನವಿ ಸ್ವೀಕರಿಸಿದ ಶಾಸಕ ದೇವೇಂದ್ರಪ್ಪ ಮಾತನಾಡಿ, ಪಟ್ಟಣದ ರಸ್ತೆ ಅಗಲೀಕರಣಕ್ಕಾಗಿ ಜನರು ಬಹಳ ದಿವಸಗಳಿಂದ ಬೇಡಿಕೆ ಇಟ್ಟಿದ್ದಾರೆ. ವಕೀಲರ ಮನವಿ ಪುರಸ್ಕರಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭ ವಕೀಲ ಸಂಘದ ಮಾಜಿ ಅಧ್ಯಕ್ಷ ಓಂಕಾರಪ್ಪ, ಬಸವರಾಜ್, ಡಿ.ಶ್ರೀನಿವಾಸ್, ಕಾರ್ಯದರ್ಶಿ ಪರಶುರಾಮ, ಉಪಾಧ್ಯಕ್ಷರಾದ ಪ್ರಕಾಶ್, ಸಣ್ಣ ಓಬಯ್ಯ, ರುದ್ರೇಶ್, ತಿಪ್ಪೇಸ್ವಾಮಿ ಇತರರು ಇದ್ದರು.- - - -10ಜೆ.ಜಿ.ಎಲ್.1:
ಜಗಳೂರು ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬುಧವಾರ ತಾಲೂಕು ವಕೀಲರ ಸಂಘದಿಂದ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.