ಸಾರಾಂಶ
ಇಂದು ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ । ಪೂರ್ವಭಾವಿ ಸಿದ್ಧತಾ ಸಭೆ
ಕನ್ನಡಪ್ರಭ ವಾರ್ತೆ ಕೊಪ್ಪಳಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಳಕಲ್‌ನ ಲಿಂಗೈಕ್ಯ ಶ್ರೀ ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ನಿಮಿತ್ತ ಆ. 1ರಂದು ಆಚರಿಸುವ ವ್ಯಸನಮುಕ್ತ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಯೋಜಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅಧಿಕಾರಿಗಳಿಗೆ ತಿಳಿಸಿದರು.
ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ಆಚರಿಸುವ ವ್ಯಸನಮುಕ್ತ ದಿನಾಚರಣೆಯ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಆ. 1ರಂದು ಜಿಲ್ಲಾಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಸಮಾರಂಭ ಆಯೋಜಿಸಿ, ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾಸ್ಪತ್ರೆಯಿಂದ ಜಿಲ್ಲಾಡಳಿತ ಭವನದವರೆಗೆ ಜಾಗೃತಿ ಜಾಥಾ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ಸೇವನೆ, ಅದರಿಂದಾಗುವ ಹಾನಿ ಕುರಿತು ತಜ್ಞ ಹಾಗೂ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಆಯೋಜಿಸಬೇಕು. ಕಾರ್ಯಕ್ರಮ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮುಖ್ಯವಾಗಿ ಮಕ್ಕಳಲ್ಲಿ, ಯುವಜನರಲ್ಲಿ ಜಾಗೃತಿ ಮೂಡಿಸಬೇಕಿರುವುದರಿಂದ ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು ಎಂದು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಾಂತಸ್ವಾಮೀಜಿಗಳ ಭಾವಚಿತ್ರ ಅನಾವರಣ ಮಾಡಿ ಗೌರವ ವಂದನೆ ಅರ್ಪಿಸಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರತಿಜ್ಞಾ ವಿಧಿ ಕೈಗೊಳ್ಳುವ ಮೂಲಕ ಮದ್ಯಪಾನ, ಮಾದಕದ್ರವ್ಯ ಮತ್ತು ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ದಿನಾಚರಣೆಯ ಹಿನ್ನೆಲೆ ಪ್ರತಿ ತಾಲೂಕುಗಳಲ್ಲಿ ಸಹ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ ಬೋಧಿಸಿ ಮದ್ಯಪಾನ, ಮಾದಕದ್ಯವ್ಯ ಮತ್ತು ತಂಬಾಕು ಸೇವೆನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಹ ಅರಿವು ಮೂಡಿಸಬೇಕು. ಈ ಸಂಬಂಧ ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಮತ್ತು ಬಿಇಒ ಮೂಲಕ ಎಲ್ಲ ಶಾಲೆಗಳ ಮುಖ್ಯಾಧ್ಯಾಪಕರಿಗೆ ವಿಷಯ ತಿಳಿಸಿ ಕ್ರಮ ವಹಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಮಹಾಂತ ಶಿವಯೋಗಿಗಳು ವ್ಯಸನಮುಕ್ತ ಆಂದೋಲನದ ಹರಿಕಾರರಾಗಿದ್ದರು. ಶ್ರೀಗಳ ಜನ್ಮದಿನವನ್ನು ರಾಜ್ಯ ಸರ್ಕಾರವು ಪ್ರತಿ ವರ್ಷ ವ್ಯಸನ ಮುಕ್ತ ದಿನ ಎಂದು ಆಚರಣೆ ಮಾಡುತ್ತಿದ್ದು , ಈ ದಿನಾಚರಣೆ ಮೂಲಕ ಸಹ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಬೇಕಿದೆ ಎಂದರು.ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎಸ್.ಗೋನಾಳ ಮಾತನಾಡಿದರು. ಸಭೆಯಲ್ಲಿ ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ, ಕುಷ್ಟಗಿ ತಹಶೀಲ್ದಾರ ಶೃತಿ, ಗಂಗಾವತಿ ತಹಶೀಲ್ದಾರ ಯು.ನಾಗರಾಜ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಪಿ.ಬಿ. ಹಿರೇಗೌಡರ, ಕುಕನೂರು ಗ್ರೇಡ್-2 ತಹಶೀಲ್ದಾರ ಮುರಳೀಧರರಾವ್, ಹಿರಿಯ ಪತ್ರಕರ್ತ ಎಂ. ಸಾದಿಕ ಅಲಿ, ಕೊಪ್ಪಳ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಗೌರವಾಧ್ಯಕ್ಷ ಡಾ. ಸಂಗಮೇಶ ಕಲಹಾಳ, ಪ್ರಧಾನ ಕಾರ್ಯದರ್ಶಿ ಶರಣಬಸನಗೌಡ ಪಾಟೀಲ್, ಮಹಿಳಾ ಘಟಕದ ಜಿಲಾಧ್ಯಕ್ಷ ಅರ್ಚನಾ ಸಸಿಮಠ, ಬಸವೇಶ್ವರ ಟ್ರಸ್ಟ್‌ನ ಸದಸ್ಯರಾದ ವೀರಭದ್ರಪ್ಪ ನಂದ್ಯಾಲ, ಎಂ.ಎಸ್. ನೀಲಕಂಠಪ್ಪ ಸೇರಿದಂತೆ ವಿವಿಧ ಇಲಾಖೆಗಳ ಇತರ ಅಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.