ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಯಾವ ವಿದ್ಯಾರ್ಥಿಯೂ ಅನುತ್ತೀರ್ಣರಾಗದ ಹಾಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಶಾಲಾ ಮುಖ್ಯೋಪಾಧ್ಯಾಯರಿಗೆ ಹಾಗೂ ಶಿಕ್ಷಕರಿಗೆ ಸೂಚಿಸಿದರು.ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡ ಶಿಕ್ಷಣ ಬಲವರ್ಧನೆ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯೋಪಾಧ್ಯಾಯರು ಲೀಡರ್ ಆಗಿ ಕೆಲಸ ಮಾಡಬೇಕು. ವಿಶೇಷವಾಗಿ ಕಲಿಕೆಯಿಂದ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಗಮನ ಹರಿಸುವ ಮೂಲಕ ಸಾಮರ್ಥ್ಯಕ್ಕೆ ಅನುಗುಣವಾಗಿ ಶಾಲೆಯಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ತಿಳಿಸಿದರು.
ಯಾವುದೇ ವಿದ್ಯಾರ್ಥಿ ಗೈರು ಹಾಜರಾಗದಂತೆ ನೋಡಿಕೊಂಡು 7 ದಿನಗಳಿಗಿಂತ ಹೆಚ್ಚಿಗೆ ಗೈರು ಹಾಜರಾದಲ್ಲಿ ಗ್ರಾಮ ಪಂಚಾಯತಿಗೆ ಮಾಹಿತಿ ನೀಡಬೇಕು. ಶಾಲೆ ಬಿಟ್ಟು ಹೋದ ಮಕ್ಕಳ ಮನಸ್ಸನ್ನು ಪರಿವರ್ತನೆ ಮಾಡಿ ಶಾಲೆಗೆ ಬರುವಂತೆ ಮಾಡಿದಾಗ ಮಾತ್ರ ಅವರನ್ನು ಸಹ ಮುಖ್ಯ ವಾಹಿನಿಗೆ ತರಲು ಸಾದ್ಯವಾಗುತ್ತದೆ. ಶಾಲೆ ಬಿಟ್ಟ ಮಕ್ಕಳ ಪ್ರತಿಯೊಂದು ಮಾಹಿತಿ ಅಂದರೆ ಶಾಲೆ ಬಿಡಲು ಕಾರಣ, ಶಾಲೆಗೆ ಏಕೆ ಬರುತ್ತಿಲ್ಲ ಎಂಬ ಮಾಹಿತಿ ನೀಡಬೇಕು ಎಂದರು.ಚಾಲೆಂಜ್ ಆಗಿ ಸ್ವೀಕರಿಸಿ:
ಕೆಲಸದಲ್ಲಿ ನೆಪ ಹೇಳುವಂತಿಲ್ಲ. ಕಷ್ಟ ಆದರೂ ಬಿಡುವಂತಿಲ್ಲ. ನಮ್ಮ ಪರಿಶ್ರಮ ಮುಖ್ಯವಾಗಿದ್ದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಉತ್ತೀರ್ಣರನ್ನಾಗಿ ಆದರೂ ಮಾಡಬೇಕು. ಈ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಅಸಾಧ್ಯವಾದುದು ಯಾವುದು ಇಲ್ಲ. ಸಾಧಿಸಿ ತೋರಿಸುವ ಕೆಲಸವಾಗಲಿ. ಚಾಲೆಂಜ್ ರೂಪದಲ್ಲಿ ತೆಗೆದುಕೊಂಡು ಮಕ್ಕಳ ಕಲಿಕೆಯಲ್ಲಿ ಸುಧಾರಣೆ ತರಬೇಕು. ಮಕ್ಕಳ ಏಳ್ಗಿಗೆಗೆ ನಾಳೆಯಿಂದಲೇ ಹೊಸ ಅಧ್ಯಯನ ಪ್ರಾರಂಭಿಸಲು ತಿಳಿಸಿದರು.ವಿಷಯವಾರು ಕ್ರಿಯಾಯೋಜನೆ ರೂಪಿಸುವ ಮೂಲಕ ಮಕ್ಕಳ ಕಲಿಕೆಯಲ್ಲಿ ಸುಧಾರಣೆ ತರುವ ಕಾರ್ಯವಾಗಬೇಕು. ಅಂದಾಗ ಮಾತ್ರ ಶೇ.100ರಷ್ಟು ಫಲಿತಾಂಶ ಬರಲು ಸಾಧ್ಯವಾಗುತ್ತದೆ. ಶಾಲೆಗಳಲ್ಲಿ ಮುಖ್ಯವಾಗಿ ಶೌಚಾಲಯ, ಕಾಂಪೌಂಡ್, ಕುಡಿಯುವ ನೀರು ಕಡ್ಡಾಯವಾಗಿ ಇರಬೇಕು. ಪ್ರತಿ ಮಕ್ಕಳಿಗೆ ವೈಯಕ್ತಿಕ ದಿನಚರಿ ಮಾಡಲು ಸೂಚಿಸಿದರು.ಕಾರ್ಯಾಗಾರದಲ್ಲಿ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಣ ಬಲವರ್ಧನೆಗೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರು. ಬೆಳಗಾವಿ ಶಾಲಾ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಸಕ್ರಪ್ಪಗೌಡ ಬಿರಾದಾರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿವೇಕಾನಂದ, ಸರ್ವಶಿಕ್ಷಣ ಅಭಿಯಾನದ ಉಪಸಮನ್ವಯಾಧಿಕಾರಿ ಸಿ.ಆರ್.ಓಣಿ, ಶಿಕ್ಷಣಾಧಿಕಾರಿ ಎಚ್.ಜಿ.ಮಿರ್ಜಿ, ಜಿಲ್ಲಾ ಅಕ್ಷರದಾಸೋಹ ಅಧಿಕಾರ ಕೇಶವ ಪೆಟ್ಲೂರ ಸೇರಿದಂತೆ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
-----ಬಾಕ್ಸ್
ಕಲಿಕೆಯಲ್ಲಿ ಸುಧಾರಣೆ ಮಾಡಿಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ದತ್ತು ಪಡೆದುಕೊಂಡ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಪ್ರತಿ ತಿಂಗಳು ಪಾಲಕರ ಸಭೆ ನಡೆಸಲು ತಿಳಿಸಿದರು. ವಿದ್ಯಾರ್ಥಿಗಳಿಗೆ ಸರಕಾರ ನೀಡುವ ಸೌಲಭ್ಯಗಳು ಸದ್ಭಳಕೆಯಾಗುವಂತೆ ಮಾಡಲು ತಿಳಿಸಿದ ಅವರು, ಕಲಿಕೆಯಿಂದ ಮುಂದೆ ಇರುವ ವಿದ್ಯಾರ್ಥಿಗಳ ಜೊತೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಹೊಂದಾಣಿಕೆ ಮೂಲಕ ಕಲಿಕೆಯಲ್ಲಿ ಸುಧಾರಣೆ ಮಾಡಬೇಕು ಎಂದು ಡಿಸಿ ಸೂಚಿಸಿದರು.