ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸ್ತುತ ಬರ ಪರಿಸ್ಥಿತಿಯ ಸಮಯದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳ ಕಾಲ ಪ್ರತಿ ಎರಡನೇ ಮತ್ತು ನಾಲ್ಕನೇ ಸೋಮವಾರದಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಕಡ್ಡಾಯವಾಗಿ ಕುಡಿಯುವ ನೀರಿನ ಸಮಸ್ಯೆ ಕುರಿತ ವಸ್ತುಸ್ಥಿತಿಯ ಬಗ್ಗೆ ಸಭೆ ನಡೆಸುವಂತೆ ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.ಪ್ರತಿ ಎರಡನೇ ಮತ್ತು ನಾಲ್ಕನೇ ಮಂಗಳವಾರದಂದು ಕಡ್ಡಾಯವಾಗಿ ಪತ್ರಿಕಾಗೋಷ್ಠಿ ಕರೆದು ಜಿಲ್ಲೆಗಳಲ್ಲಿನ ಬರಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೈಗೊಂಡ ಕ್ರಮದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ರಾಜ್ಯದ ಎಲ್ಲಾ ಜಿಪಂ ಸಿಇಒಗೆ ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ.
ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲ ಜಿಲ್ಲಾ ಪಂಚಾಯತ್‌ಗಳಲ್ಲಿ ೨೪/೭ ಕಂಟ್ರೋಲ್ ರೂಮ್ ತೆರೆದು ಸಿಬ್ಬಂದಿಯನ್ನು ನಿಯೋಜಿಸುವುದು. ಎಲ್ಲ ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಕ್ಷಿಪ್ರ ಕಾರ್ಯಪಡೆ ರಚಿಸಿ ಬರಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚಿಸಿದ್ದಾರೆ.ಕೆರೆ-ಕಟ್ಟೆಗಳ ನೀರನ್ನು ಕೃಷಿಗೆ ಬಳಸಿದರೆ ಕ್ರಮ: ಡೀಸಿಮಂಡ್ಯ:ಪ್ರಸ್ತುತ ಮಳೆಯ ಅಭಾವವಿರುವ ಕಾರಣ ಜಲಾಶಯಗಳಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆ-ಕಟ್ಟೆಗಳಿಗೆ ಹರಿಸಿ ಸಂಗ್ರಹಿಸಲಾಗಿರುವ ನೀರನ್ನು ಜನ-ಜಾನುವಾರುಗಳ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸುವಂತೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.ಕೆರೆ-ಕಟ್ಟೆಗಳಲ್ಲಿ ಸಂಗ್ರಹವಾಗಿರುವ ನೀರನ್ನು ಸಾರ್ವಜನಿಕರು ಬೆಳೆಗಳಿಗೆ ಅನಧಿಕೃತವಾಗಿ ಪಂಪ್‌ಗಳು ಮತ್ತು ಡೀಸೆಲ್ ಮೋಟಾರ್‌ಗಳ ಮೂಲಕ ನೀರು ಹರಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಮಳೆಯ ಕೊರತೆಯಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಕೆರೆ-ಕಟ್ಟೆಗಳಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಬಳಸುವಂತೆ ಕಟ್ಟುನಿಟ್ಟಾಗಿ ತಿಳಿಸಲಾಗಿದೆ.ನೀರನ್ನು ಸಂಗ್ರಹಿಸಿರುವ ಉದ್ದೇಶದ ಬಗ್ಗೆ ಜನರಿಗೆ ಅರಿವು ಮೂಡಿಸುವುದು. ಕೆರೆ-ಕಟ್ಟೆಗಳ ನೀರನ್ನು ವ್ಯವಸಾಯದ ಹಾಗೂ ಇತರೆ ಉದ್ದೇಶಕ್ಕೆ ಹರಿಸುತ್ತಿರುವುದು ಕಂಡುಬಂದಲ್ಲಿ ನೀರು ಎತ್ತುವಳಿ ಮಾಡುವ ಉಪಕರಣವನ್ನು ವಶಪಡಿಸಿಕೊಂಡು ಕಾನೂನಾತ್ಮಕ ಕ್ರಮ ಜರುಗಿಸಬೇಕು. ಇಂತಹ ಸ್ಥಳಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸೂಚಿಸಿದರು.ಬರ ಪರಿಸ್ಥಿತಿಯ ಕಾರಣದಿಂದ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-೨೦೦೫ರ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.