ಕೆರೆಗಳ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

| Published : Feb 11 2025, 12:46 AM IST

ಕೆರೆಗಳ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿರುವ ಕೆರೆಗಳನ್ನು ಗುರುತಿಸಿ ಅವುಗಳ ವಾಸ್ತವ ಸ್ಥಿತಿಗತಿ, ಒತ್ತುವರಿ, ಒತ್ತುವರಿ ತೆರವು ಮಾಡಿದ ಕೆರೆಗಳು, ಆಕಾರ, ಚೆಕ್ಕುಬಂದಿ, ಸರ್ವೇ ನಂಬರ್, ಪ್ರದೇಶದ ವಿಸ್ತಾರ ಮತ್ತಿತರ ಪೂರಕ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಕೂಡಲೇ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.

ಅಧಿಕಾರಿಗಳಿಗೆ ಸೂಚನೆ । ಕೆರೆಗಳ ನಿರ್ವಹಣೆ, ರಕ್ಷಣೆ, ಅಭಿವೃದ್ಧಿ ಕಾರ್ಯಗಳ ಕುರಿತು ಸಭೆ, ಚರ್ಚೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿರುವ ಕೆರೆಗಳನ್ನು ಗುರುತಿಸಿ ಅವುಗಳ ವಾಸ್ತವ ಸ್ಥಿತಿಗತಿ, ಒತ್ತುವರಿ, ಒತ್ತುವರಿ ತೆರವು ಮಾಡಿದ ಕೆರೆಗಳು, ಆಕಾರ, ಚೆಕ್ಕುಬಂದಿ, ಸರ್ವೇ ನಂಬರ್, ಪ್ರದೇಶದ ವಿಸ್ತಾರ ಮತ್ತಿತರ ಪೂರಕ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಕೂಡಲೇ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೆರೆಗಳ ನಿರ್ವಹಣೆ, ರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಈ ಸಂಬಂಧ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು ವಿಸ್ತೃತ ಮಾಹಿತಿಯನ್ನು ನೀಡುವಂತೆ ಕೋರಿದ್ದು, ಕ್ಷೀಣಿಸುತ್ತಿರುವ ಅಂತರ್ಜಲವನ್ನು ಮರುಪೂರಣಗೊಳಿಸುವುದು, ಪರಿಸರಾತ್ಮಕ ಪ್ರಭಾವಗಳ ನಿರ್ಧರಣಾ ಅಧ್ಯಯನ ಸೇರಿದಂತೆ ಅವುಗಳ ವ್ಯವಸ್ಥಿತ ನಿರ್ವಹಣೆ ದೃಷ್ಟಿಯಿಂದ ಸಹಕಾರಿಯಾಗಲಿರುವ ಈ ಮಹತ್ವದ ಕಾರ್ಯಕ್ಕೆ ಸಂಬಂಧಿತ ಇಲಾಖಾಧಿಕಾರಿಗಳು ಕೆರೆಗಳ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಿದರು.

ಸ್ಥಳೀಯ ಮತ್ತು ಇತರೆ ಪ್ರಾಧಿಕಾರಿಗಳ ನೆರವಿನೊಂದಿಗೆ ಸಮನ್ವಯತೆ ಸಾಧಿಸಿಕೊಳ್ಳುವ ಮೂಲಕ ಕೆರೆ-ಕಟ್ಟೆಗಳನ್ನು ಸಂರಕ್ಷಿಸುವುದು, ಜೀರ್ಣೋದ್ಧಾರಗೊಳಿಸುವುದು. ಪುನರ್ರೂಪಿಸುವುದು ಮತ್ತು ಮೂಲಸ್ಥಿತಿಗೆ ತರುವಲ್ಲಿ ಸಹಕರಿಸಬೇಕು. ಇರುವ ಭೌಗೋಳಿಕ ಮಾಹಿತಿಯೊಂದಿಗೆ ಕೆರೆಗಳು ಮತ್ತು ಸುತ್ತಮುತ್ತಲ ಪ್ರದೇಶಗಳ ಪರಿಸರಾತ್ಮಕ ಯೋಜನೆ ಮತ್ತು ನಕ್ಷೆಯ ರಚನೆಯಂತೆ ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಿದರು.

ಕೆರೆಗಳ ಗಡಿ ಗುರುತಿಸುವುದು, ಒತ್ತುವರಿ ತೆರವುಗೊಳಿಸುವುದು, ರಕ್ಷಣೆ ಮತ್ತು ಅಭಿವೃದ್ಧಿ ಮುಂತಾದ ಮಾಹಿತಿ ನೀಡುವ ಅಧಿಕಾರಿಗಳು ಸರಿಯಾದ ನಿಖರವಾದ ಮಾಹಿತಿಯನ್ನು ನೀಡಬೇಕು. ಈಗಾಗಲೇ ಒತ್ತುವರಿಯನ್ನು ಗುರುತಿಸಿರುವ ಕೆರೆಗಳ ಒತ್ತುವರಿಯನ್ನು ತೆರೆವುಗೊಳಿಸಬೇಕು. ಅಗತ್ಯವಿದ್ದಲ್ಲಿ ಪೊಲೀಸ್‌ ಇಲಾಖೆಯ ಸಹಕಾರವನ್ನು ಪಡೆದುಕೊಳ್ಳಬೇಕು. ಅದಕ್ಕಾಗಿ ಕಾಲಮಿತಿಯನ್ನು ನಿಗದಿಪಡಿಸಿಕೊಳ್ಳುವಂತೆಯೂ ಸೂಚಿಸಿದರು.

ತಹಸೀಲ್ದಾರರು, ನಗರ ಯೋಜನಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯ ಕೆರೆಗಳನ್ನು ಗುರುತಿಸಬೇಕು. ಅವುಗಳ ಸರ್ವೇ ಕಾರ್ಯಕ್ಕೆ ಆದ್ಯತೆಯ ಮೇಲೆ ಕ್ರಮ ವಹಿಸಬೇಕು. ಒತ್ತುವರಿಯನ್ನು ಸ್ಥಳೀಯರ ಸಹಕಾರದೊಂದಿಗೆ ತೆರವುಗೊಳಿಸಬೇಕು. ಅದಕ್ಕಾಗಿ ಅಧಿಕಾರಿಗಳ ನಡುವೆ ಸಮನ್ವಯತೆ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.

ಅದಕ್ಕೂ ಮುನ್ನ ಇಲಾಖೆಗಳಲ್ಲಿರುವ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಸ್ಥಳ ಪರಿಶೀಲನೆ ನಡೆಸಬೇಕು. ಕೆರೆಗಳು ಅಥವಾ ಜಲಮೂಲಗಳ ಮೂಲ ಮಾಲಿಕತ್ವ ಯಾರಿಗೆ ಸೇರಿದ್ದಾಗಿದೆ ಎಂಬುದನ್ನು ನೋಡಿಕೊಂಡು ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕೆಂದ ಅವರು, ಸಂಬಂಧಿತ ಇಲಾಖಾಧಿಕಾರಿಗಳು ತಾಲೂಕು ಮಟ್ಟದಲ್ಲಿ ಸಭೆ ನಡೆಸಿ, ಸಮರ್ಪಕವಾದ ಮಾಹಿತಿಯನ್ನು ನೀಡುವಂತೆ ತಿಳಿಸಿದರು.

ಒತ್ತುವರಿ ತೆರವುಗೊಳಿಸಿದ ಪ್ರದೇಶದಲ್ಲಿ ಪುನಃ ಒತ್ತುವರಿ ಕಾರ್ಯ ನಡೆಸದಂತೆ ನೋಡಿಕೊಳ್ಳಬೇಕಲ್ಲದೇ ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗಿಡನೆಡಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ ಅವರು, ಜಿಲ್ಲೆಯ ಸೊರಬ, ಶಿಕಾರಿಪುರ ತಾಲೂಕುಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಕೆರೆಗಳಿದ್ದು, ಅಲ್ಲಿನ ಕೆರೆಗಳ ಮಾಹಿತಿಯನ್ನು ಸಂಗ್ರಹಿಸಿ, ಕೂಡಲೇ ಸಲ್ಲಿಸುವಂತೆ ಸೂಚಿಸಿದರು.

ಅರಣ್ಯ ಇಲಾಖೆಯ ವ್ಯಾಪ್ತಿಗೊಳಪಡುವ ಕೆರೆಗಳ ಮಾಹಿತಿಯನ್ನು ಸಂಬಂಧಿಸಿದ ಅರಣ್ಯಾಧಿಕಾರಿಗಳಿಂದಲೇ ಪಡೆದುಕೊಳ್ಳಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಮಹಾನಗರಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್‌ ಸೇರಿದಂತೆ ತಹಸೀಲ್ದಾರರು, ಸಣ್ಣ ನೀರಾವರಿ, ಸ್ಥಳೀಯ ಸಂಸ್ಥೆಗಳ ಅಭಿಯಂತರರು, ಅರಣ್ಯಾಧಿಕಾರಿಗಳು ಹಾಜರಿದ್ದರು.