ಸಾರಾಂಶ
ಹಲವು ವರ್ಷಗಳ ಹಿಂದಿನಿಂದಲೂ ತಹಶೀಲ್ ಕಚೇರಿಗೆ ರೈತರಿಂದ ತಮ್ಮ ಭೂಮಿ ಸಕ್ರಮಿಕರಣಕ್ಕೆ ೧೬೭೫ ಅರ್ಜಿ ಸಲ್ಲಿಕೆಯಾಗಿದ್ದು, ಇವುಗಳ ಸಕ್ರಮಕ್ಕೆ ಕ್ರಮ ಕೈಗೊಳ್ಳಬೇಕು.
ಕನ್ನಡಪ್ರಭ ವಾರ್ತೆ ಕನಕಗಿರಿ
ಹಲವು ವರ್ಷಗಳ ಹಿಂದಿನಿಂದಲೂ ತಹಶೀಲ್ ಕಚೇರಿಗೆ ರೈತರಿಂದ ತಮ್ಮ ಭೂಮಿ ಸಕ್ರಮಿಕರಣಕ್ಕೆ ೧೬೭೫ ಅರ್ಜಿ ಸಲ್ಲಿಕೆಯಾಗಿದ್ದು, ಇವುಗಳ ಸಕ್ರಮಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಶಿವರಾಜ ತಂಗಡಗಿ ತಹಶೀಲ್ದಾರ ವಿಶ್ವನಾಥ ಮುರುಡಿಗೆ ಸೂಚಿಸಿದರು.ಸೋಮವಾರ ಇಲ್ಲಿನ ತಹಶೀಲ್ ಕಚೇರಿಯಲ್ಲಿ ನಡೆದ ನೂತನ ಬಗರ್ ಹುಕುಂ ಸಕ್ರಮಿಕರಣ ಸಮಿತಿಗೆ ಆಯ್ಕೆಯಾದ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಭೂಮಿಯ ಸಕ್ರಮಕ್ಕೆ ರೈತರು ಸಲ್ಲಿಸಿರುವ ಅರ್ಜಿಗಳ ಪರಿಶೀಲನೆ ಮಾಡಿ ಕೂಲಂಕಶವಾಗಿ ಅರಿತು ಅರ್ಹತೆ ಹೊಂದಿದ ರೈತರಿಗೆ ಮಾತ್ರ ಸಕ್ರಮಿಕರಣಗೊಳಿಸಬೇಕು. ಈಗಾಗಲೇ ಅರ್ಹತೆ ಹೊಂದಿದ ೩೦ ರೈತರಿಗೆ ಭೂಮಿ ನೀಡಲಾಗಿದೆ. ಅದರಂತೆ ಬಾಕಿ ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡಿ ರೈತರ ಜಮೀನನ್ನು ಸಕ್ರಮಿಕರಣಗೊಳಿಸುವಂತೆ ತಿಳಿಸಿದರು.
ನಂತರ ನೂತನ ಸದಸ್ಯ ರಾಮಣ್ಣ ಆಗೋಲಿ ಮಾತನಾಡಿ, ಸಾವಿರಾರು ರೈತರು ತಮ್ಮ ಭೂಮಿಯನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರದ ನಿಯಮದಂತೆ ಭೂಮಿಯನ್ನು ಸಕ್ರಮಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಿದೆ. ಹತ್ತಾರು ವರ್ಷಗಳಿಂದ ಕಚೇರಿಗೆ ಅಲೆಯುತ್ತಿರುವ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡೋಣ ಎಂದು ತಿಳಿಸಿದರು.ನೂತನವಾಗಿ ಆಯ್ಕೆಯಾದ ಕೊಮಾರೆಪ್ಪ ನರಿ ಹಾಗೂ ಗೌರಮ್ಮ ರಾಮಾ ನಾಯ್ಕ್ ಅವರನ್ನು ತಾಲೂಕು ಆಡಳಿತ ಸನ್ಮಾನಿಸಿತು.
ಗ್ರೇಡ್-೨ ತಹಶೀಲ್ದಾರ ವಿ.ಎಚ್ ಹೊರಪೇಟೆ, ಜಿಪಂ ಮಾಜಿ ಸದಸ್ಯ ವಿರೇಶ ಸಮಗಂಡಿ, ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ ಪಾಟೀಲ್, ಎಪಿಎಂಸಿ ಮಾಜಿ ಅಧ್ಯಕ್ಷ ಗಂಗಾಧರಸ್ವಾಮಿ, ಪ್ರಮುಖರಾದ ಶರಣೇಗೌಡ ಹುಲಸನಹಟ್ಟಿ, ರವಿ ಪಾಟೀಲ್, ಪಂಪಾಪತಿ ತರ್ಲಕಟ್ಟಿ, ಮುಕ್ತುಂಸಾಬ ಚಳಮರದ, ಮಂಜುನಾಥ ಯಾದವ, ಬಸವನಗೌಡ ಲಾಯದುಣಸಿ, ನೀಲಕಂಠ ಬಡಿಗೇರ ಇತರರಿದ್ದರು.