ಸಾರಾಂಶ
ಪುರಸಭೆಯಲ್ಲಿ ದುಡ್ಡುಕೊಟ್ಟವರಿಗೆ ಮಾತ್ರ ನಮೂನೆ-3 ವಿತರಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಸುಖಾ ಸುಮ್ಮನೇ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಪುರಸಭೆ ಸದಸ್ಯರು ಆರೋಪಿಸಿದರು.
ಪುರಸಭೆ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಆಗ್ರಹ
ನಮೂನೆ-3 ವಿತರಣೆ ವಿಳಂಬ, ಮದ್ಯವರ್ತಿಗಳ ಹಾವಳಿ ತಡೆಯಲು ಒತ್ತಾಯಕನ್ನಡಪ್ರಭ ವಾರ್ತೆ ಕಂಪ್ಲಿಪುರಸಭೆಯಲ್ಲಿ ದುಡ್ಡುಕೊಟ್ಟವರಿಗೆ ಮಾತ್ರ ನಮೂನೆ-3 ವಿತರಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಸುಖಾ ಸುಮ್ಮನೇ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಪುರಸಭೆ ಸದಸ್ಯರು ಆರೋಪಿಸಿದರು. ಇಲ್ಲಿನ ಪುರಸಭೆ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ಕುರಿತು ಆರೋಪ ಕೇಳಿಬಂದಿತು.ಪುರಸಭೆ ಕಚೇರಿಯಲ್ಲಿ ನಮೂನೆ-3 ವಿತರಣೆ ವಿಳಂಬ, ಮದ್ಯವರ್ತಿಗಳ ಹಾವಳಿಯಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಈ ವಿಚಾರವನ್ನು ಪ್ರತಿ ಸಭೆಯಲ್ಲೂ ಪ್ರಸ್ತಾಪಸಲಾಗುತ್ತಿದ್ದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಿಗದಿತ ಸಮಯದ ಒಳಗಾಗಿ ನಮೂನೆ-3 ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು. ಈ ಕುರಿತು ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಪ್ರತಿಕ್ರಿಯಿಸಿ ಕಂದಾಯ ವಿಭಾಗವನ್ನು ಸಮರ್ಪಕ ನಿಭಾಯಿಸಲು ತಕ್ಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಡುವಿನ ಮಸೀದಿಯಿಂದ ಜೋಗಿಕಾಲುವೆತನಕ ರಸ್ತೆ ಅಗಲೀಕರಣ ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿದ್ದೂ, ಸ್ಥಳೀಯರಿಗೆ ತೀರ ಸಮಸ್ಯೆಯಾಗುತ್ತಿದೆ. ಕೂಡಲೇ ಕ್ರಮ ವಹಿಸಿ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವಲ್ಲಿ ಮುಂದಾಗಬೇಕು ಎಂದು ಸದಸ್ಯ ಜಿ.ಬಿ.ಕೋಟೇಶ್ ಒತ್ತಾಯಿಸಿದರು. ಮೊಹರಂ ಹಬ್ಬವಿದ್ದ ಕಾರಣ ಕಾಮಗಾರಿ ನಿಧಾನವಾಗಿದ್ದು, ಶುಕ್ರವಾರದಿಂದ ಕಾಮಗಾರಿ ಆರಂಭಿಸಲಾಗುವುದು ಎಂದು ಪುರಸಭಾಧ್ಯಕ್ಷರು ತಿಳಿಸಿದರು.ಪುರಸಭೆ ಸದಸ್ಯ ವಿ.ಎಲ್. ಬಾಬು ಮಾತನಾಡಿ, ಕಾನೂನು ಉಲ್ಲಂಘಿಸಿ ಯಾವುದೇ ಬಿಲ್ ಮಾಡಬಾರದು. ಒಂದು ವೇಳೆ ಮಾಡಿದ್ದಲ್ಲಿ ಮಾಹಿತಿ ಹಕ್ಕಿನಲ್ಲಿ ಪ್ರಶ್ನಿಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸಿ ಎಂದು ಪುರಸಭಾಧ್ಯಕ್ಷರು ಸಲಹೆ ನೀಡಿದರು.ಪುರಸಭೆ ಜಾಗದಲ್ಲಿನ ಬಿಎಸ್‌ವಿ ಶಾಲೆ ಕಟ್ಟಡವನ್ನು ಯಥಾಸ್ಥಿತಿಯಲ್ಲಿ ಬಿಟ್ಟು ತೆರಳಲು ಕಂಪ್ಲಿ ಎಜುಕೇಷನ್ ಸೊಸೈಟಿಯವರು ಏಳು ತಿಂಗಳ ಗಡುವು ತೆಗೆದುಕೊಂಡಿದ್ದು, ಅಷ್ಟರೊಳಗೆ ಹೈಕೋರ್ಟ್ನಲ್ಲಿ ಸ್ಟೇ ಆರ್ಡರ್‌ನ್ನು ವಾಪಸ್ಸು ತೆಗೆದುಕೊಳ್ಳುವುದಾಗಿ ಒಪ್ಪಿದ್ದರು. ಈ ವರೆಗೂ ಸ್ಟೇ ಆರ್ಡರ್ ವಾಪಸ್ಸು ಪಡೆಯದೆ ಮುಂದೂಡುತ್ತಿದ್ದಾರೆ. ಕೂಡಲೇ ಸ್ಟೇ ಆರ್ಡರ್ ವಾಪಸ್ಸು ಪಡೆಯಬೇಕು ಎಂದು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಸಭೆಯಲ್ಲಿ ತಿಳಿಸಿದರು.ಇದಕ್ಕೆ ಸೊಸೈಟಿ ಅಧ್ಯಕ್ಷ ಕಲ್ಗುಡಿ ವಿಶ್ವನಾಥ ಪ್ರತಿಕ್ರಿಯಿಸಿ ಮಾತನಾಡಿ, ಸೊಸೈಟಿ ಕಾರ್ಯದರ್ಶಿ ಊರಲ್ಲಿ ಇರದಿದ್ದರಿಂದ ವಾಪಸ್ಸು ಪಡೆದಿಲ್ಲ ಎನ್ನುವ ಉತ್ತರಕ್ಕೆ ಪುರಸಭಾಡಳಿತ ಆಕ್ರೋಶ ವ್ಯಕ್ತಪಡಿಸಿ ಅಧ್ಯಕ್ಷರೇ ವಾಪಸ್ಸು ಪಡೆಯುವಂತೆ ಒತ್ತಾಯಿಸಿದರು. ಈ ವಿಚಾರ ಕುರಿತು ದೀರ್ಘ ಕಾಲ ಚರ್ಚೆ ಜರುಗಿ ಕೊನೆಯಲ್ಲಿ 2025ರ ಆ.11ರಂದು ಸ್ಟೇ ಆರ್ಡರ್ ವಾಪಸ್ಸು ಪಡೆಯಬೇಕು. 2025ರ ಆಕ್ಟೋಬರ್ ತಿಂಗಳಲ್ಲಿ ಬಿಎಸ್‌ವಿ ಶಾಲೆ ಕಟ್ಟಡ ಬಿಟ್ಟು ತೆರಳಬೇಕು. ಉದಾಸೀನ ತೋರಿದಲ್ಲಿ ಕಠಿಣ ಕ್ರಮ ಅನುಸರಿಸಲಾಗುವುದು ಎಂದು ಪುರಸಭಾಧ್ಯಕ್ಷರು ಸೊಸೈಟಿಯವರಿಗೆ ತಿಳಿಸಿದರು.ಈ ಸಂದರ್ಭ ಪುರಸಭೆ ಉಪಾಧ್ಯಕ್ಷೆ ಜಿ.ಸುಶೀಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಲೆಕ್ಕಿಗ ರಮೇಶ ಬೆಳಂಕರ್ ಮತ್ತು ಸರ್ವ ಸದಸ್ಯರಿದ್ದರು.