ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ ನೆರವೇರಿಸಲು ಜಿಲ್ಲೆಯ ಪಾವಗಡ ಪಟ್ಟಣಕ್ಕೆ ಜುಲೈ 21ರಂದು ಆಗಮಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ, ತುಮಕೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ ನೆರವೇರಿಸಲು ಜಿಲ್ಲೆಯ ಪಾವಗಡ ಪಟ್ಟಣಕ್ಕೆ ಜುಲೈ 21ರಂದು ಆಗಮಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಯಾವುದೇ ಲೋಪವಾಗದಂತೆ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಡಳಿತ ನ್ಯಾಯಿಕ ಸಭಾಂಗಣದಲ್ಲಿ ಶುಕ್ರವಾರ ಪೂರ್ವ ಭಾವಿ ಸಭೆ ನಡೆಸಿ ಮಾತನಾಡಿದ ಅವರು ಕಾರ್ಯಕ್ರಮದ ವೇದಿಕೆ ನಿರ್ಮಾಣ, ಆಸನ ವ್ಯವಸ್ಥೆ, ಧ್ವನಿ ಮತ್ತು ಬೆಳಕು, ಆಹ್ವಾನ ಪತ್ರಿಕೆ ವಿತರಣೆ, ಸಾರ್ವಜನಿಕರಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ, ಮುನ್ನೆಚ್ಚರಿಕಾ ಕ್ರಮವಾಗಿ ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನ ವ್ಯವಸ್ಥೆ ಒದಗಿಸುವ ಕಾರ್ಯದ ಹೊಣೆಗಾರಿಕೆಯನ್ನು ಸಂಬಂಧಿಸಿದ ಅಧಿಕಾರಿಗಳು ಪೂರ್ವ ಸಿದ್ದತೆಗಳನ್ನು ಕೈಗೊಳ್ಳಬೇಕು.
ವೇದಿಕೆ ಕಾರ್ಯಕ್ರಮದ ಸ್ಥಳದಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಜನಪರ ಯೋಜನೆಗಳ ಕುರಿತು ಮಳಿಗೆಗಳನ್ನು ತೆರೆದು ಜನರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು. ಮುಖ್ಯಮಂತ್ರಿಗಳ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿ ಬರಬೇಕು. ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಭೌತಿಕ ಸವಲತ್ತುಗಳನ್ನು ವಿತರಿಸಬೇಕು. ಸವಲತ್ತು ವಿತರಣೆಗೆ ಸಂಬಂಧಿಸಿದಂತೆ ಆಯ್ಕೆಯಾದ ಫಲಾನುಭವಿಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ತುಮಕೂರಿನಿಂದ ಪಾವಗಡದವರೆಗೆ ರಸ್ತೆ ಬದಿಯಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಹಾಗೂ ಗಣ್ಯರಿಗೆ ಭೋಜನ, ಕುಡಿಯುವ ನೀರು, ಮೊಬೈಲ್ ಶೌಚಾಲಯದ ವ್ಯವಸ್ಥೆಯನ್ನು ಮಾಡಬೇಕು ಎಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಧುಗಿರಿ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.