ಬಕ್ರೀದ್ ಹಬ್ಬದ ವೇಳೆ ಶಾಂತಿ ಪಾಲನೆಗೆ ಕ್ರಮವಹಿಸಿ: ಸಾವಿತ್ರಿ ಬಿ. ಕಡಿ

| Published : Jun 15 2024, 01:06 AM IST

ಸಾರಾಂಶ

ಜೂನ್ 17ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ವೇಳೆಯಲ್ಲಿ ಪ್ರಾಣಿವಧೆ, ಜಾನುವಾರು ಸಾಗಣೆ ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳು ಕಾಯ್ದೆಯನ್ವಯ ಅಗತ್ಯ ಕ್ರಮ ವಹಿಸಬೇಕು.

-ಶಾಂತಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೂಚನೆಕನ್ನಡಪ್ರಭ ವಾರ್ತೆ ಕೊಪ್ಪಳ

ಜೂನ್ 17ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ವೇಳೆಯಲ್ಲಿ ಪ್ರಾಣಿವಧೆ, ಜಾನುವಾರು ಸಾಗಣೆ ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳು ಕಾಯ್ದೆಯನ್ವಯ ಅಗತ್ಯ ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಸೂಚಿಸಿದರು.

ಬಕ್ರೀದ್ ಹಬ್ಬದ ಪ್ರಯುಕ್ತ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಅಗತ್ಯ ಸ್ಥಳಗಳಲ್ಲಿ ಚೆಕ್‌ಪೋಸ್ಟ್ ತೆರೆಯಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್ ಹಾಗೂ ಪಶು ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯು ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ಅಧಿಕೃತ ವಧಾಗಾರ ಕೊಪ್ಪಳ ನಗರಪ್ರದೇಶದಲ್ಲಿ ಮಾತ್ರವಿದ್ದು, ಅಲ್ಲಿಯೇ ನಿರ್ದಿಷ್ಟ ಪ್ರಾಣಿವಧೆ ನಡೆಸಬೇಕು. ಗ್ರಾಮ ಹಾಗೂ ತಾಲೂಕು ಕೇಂದ್ರಗಳಲ್ಲಿ ಸೂಚಿತ ಸ್ಥಳಗಳಲ್ಲಿ ಮಾತ್ರ ಪ್ರಾಣಿವಧೆ ನಡೆಸಬೇಕು. ನಿಯಮ ಬಾಹಿರವಾಗಿ ಹಾಗೂ ಅನಧಿಕೃತ ಪ್ರಾಣಿಗಳನ್ನು ಬಲಿ ಕೊಡುವಂತಿಲ್ಲ. ಅದರಂತೆ ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಪರಸ್ಪರ ಸೌಹಾರ್ದತೆಯಿಂದ ಹಬ್ಬ ಆಚರಿಸಲು ಅನುಕೂಲವಾಗುವಂತೆ ಅಧಿಕಾರಿಗಳು ಹಾಗೂ ಸಮುದಾಯದವರು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ -2020 ರನ್ವಯ ಅಕ್ರಮವಾಗಿ ಪ್ರಾಣಿಗಳ ಸಾಗಾಣಿಕೆ ನಿಯಮ ಬಾಹಿರವಾಗಿದ್ದು, ಎಲ್ಲ ವಯಸ್ಸಿನ ಆಕಳು, ಆಕಳು ಕರು, ಹೋರಿ, ಎತ್ತು ಅಲ್ಲದೆ 13 ವರ್ಷದೊಳಗಿನ ಎಮ್ಮೆ, ಕೋಣ, ಒಂಟೆಗಳನ್ನು ಹತ್ಯೆ ಮಾಡುವಂತಿಲ್ಲ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಅತ್ಯವಶ್ಯಕತೆ ಇದ್ದು, ಈ ಕುರಿತು ಸಂಬಂಧಿಸಿದ ತಂಡಗಳು ಸೂಕ್ತ ನಿಗಾ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಬಕ್ರೀದ್ ಹಬ್ಬದ ಹಿನ್ನೆಲೆ ಎಲ್ಲ ತಾಲೂಕುಗಳಲ್ಲಿ ವಿವಿಧ ಸಮುದಾಯ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಬೇಕು ಎಂದು ಹೇಳಿದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ ಪಿ.ಎಂ. ಮಲ್ಲಯ್ಯ ಮಾತನಾಡಿ, ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ-1960 ಪ್ರಕಾರ ಯಾವುದೇ ಪ್ರಾಣಿಯನ್ನು ಹೊಡೆಯುವುದು, ಒದೆಯುವುದು, ಸವಾರಿ ಮಾಡುವುದು, ಅತೀಭಾರ ಹೇರುವುದು, ಚಿತ್ರಹಿಂಸೆ ನೀಡುವುದು, ನಿಗದಿತ ಸಮಯಕ್ಕಿಂತ ಮೀರಿ ಬಂಧಿಸುವುದು, ಮಾಲೀಕನಾಗಿ ಅವಶ್ಯಕ ನೀರು, ಆಹಾರ, ನೆಲೆ ಸಕಾಲದಲ್ಲಿ ನೀಡದೇ ಇರುವುದು, ಪ್ರಾಣಿಗಳನ್ನು ಗಾಯಗೊಳಿಸುವುದು, ಕೊಲ್ಲುವುದು, ಪ್ರಾಣಿಗಳ ಕಾದಾಟ ಮಾಡಿಸುವುದು ಇತರೆ ಪ್ರಾಣಿ ಹಿಂಸೆ ಕೃತ್ಯಗಳನ್ನು ನಿಷೇಧಿಸಲಾಗಿದೆ. ಇಂತಹ ಕೃತ್ಯದಲ್ಲಿ ಭಾಗಿಯಾದಲ್ಲಿ ದಂಡ ಸಹಿತ 3 ತಿಂಗಳವರೆಗೆ ಕಾರಾಗೃಹ ವಾಸದ ಸಜೆ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಹೇಮಂತ್‌ಕುಮಾರ್, ಕೊಪ್ಪಳ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಡಿವೈಎಸ್‌ಪಿ ಮುತ್ತಣ್ಣ ಸವರಗೋಳ್, ಕನಕಗಿರಿ ತಹಸೀಲ್ದಾರ ವಿಶ್ವನಾಥ ಮುರುಡಿ ಸೇರಿದಂತೆ ಪಶು ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.