ಸಾರಾಂಶ
ವಿಎಚ್‌ಪಿ, ಬಜರಂಗದಳದಿಂದ ಆಗ್ರಹ । ಡಿಸಿಗೆ ಮನವಿ । ಜಾನುವಾರು ಹತ್ಯೆ ತಡೆವ ಕಾಯ್ದೆ ಜಾರಿ ಇದ್ದರೂ ಹಸುಗಳ ವಧೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಜಿಲ್ಲೆಯಲ್ಲಿ ಗೋಹತ್ಯೆ, ಬಲಿ ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020 ಜಾರಿಯಲ್ಲಿದೆ. ಇದರಂತೆ ‘ಗೋವಂಶ’ ಅಂದರೆ ಯಾವುದೇ ವಯಸ್ಸಿನ ದನ, ಹೋರಿ, ಕರುಗಳನ್ನು ಯಾವುದೇ ರೀತಿಯಲ್ಲಿ ಕೊಲ್ಲುವುದನ್ನು ನಿಷೇಧಿಸಲಾಗಿದೆ. ಆದರೂ 2025ರ ಜೂನ್ ಮೊದಲ ವಾರದಲ್ಲಿ ಬಹಳಷ್ಟು ಗೋವಂಶ ವಧೆ, ಬಲಿ ಕೊಡುವ ಸಂಭವ ಇರುವುದರಿಂದ ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಗೋವಂಶ ವಧೆ, ಬಲಿ ಕೊಡದಂತೆ ಕಾನೂನನ್ನು ಹಾಗೂ ಅದರ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಆಗುವಂತೆ ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಅದೇ ರೀತಿ ಹಿಂಸಾತ್ಮಕ ಗೋ ಸಾಗಾಟ ಆಗದಂತೆ ಇರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ (ಜಾನುವಾರು ಸಾಗಾಟ) ನಿಯಮಾವಳಿ 2021 ಜಾರಿಯಲ್ಲಿದ್ದು, ಅದನ್ನು ಕೂಡ ಕಟ್ಟುನಿಟ್ಟಾಗಿ ಜಾರಿ ಮಾಡಲು ಕ್ರಮಕೈಗೊಳ್ಳಬೇಕು. ಸದರಿ ಕಾಯಿದೆ ಮತ್ತು ನಿಯಮಾವಳಿ ಜಾರಿಗೆ ತರಲು ಆಯ ಕಟ್ಟಿನ ಸ್ಥಳಗಳಲ್ಲಿ 24 ಗಂಟೆ ನಾಕಾ ಬಂದಿ ಹಾಕಬೇಕು. ಈಗಾಗಲೇ ಅಕ್ರಮ ಕಸಾಯಿಖಾನೆ ಬಗ್ಗೆ ಪ್ರಕರಣ ದಾಖಲಾಗಿರುವ ಮತ್ತು ವಧೆ, ಬಲಿ ಆಗುವ ಸಂಭಾವ್ಯ ಸ್ಥಳಗಳನ್ನು ಪೊಲೀಸರು ನಿಗಾ ವಹಿಸಿ ಅಲ್ಲಿ ಅಪರಾಧ ಆಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸದರಿ ಕಾಯಿದೆ ಉಲ್ಲಂಘಿಸಿದ ಆರೋಪ ಇದ್ದು ಪ್ರಕರಣಗಳಲ್ಲಿ ಜಾಮೀನಿನಲ್ಲಿ ಹೊರಗಿರುವವರನ್ನು ಕರೆಸಿ ಎಚ್ಚರಿಕೆ ಕೊಡಬೇಕು. ಸದರಿ ಕಾಯ್ದೆ ಕಾರ್ಯಗತ ಗೊಳಿಸಲು ವಿಶೇಷ ಜಾಗೃತ ದಳ ರಚಿಸಬೇಕು. ವಧೆಗಾಗಿ ಎಂದು ತಿಳಿದು ಗೋವಂಶ ಮಾರಾಟ ಮಾಡುವುದು ಅಪರಾಧವಾಗಿದ್ದು ಅದಕ್ಕೆ 5 ವರ್ಷದ ವರೆಗೆ ಶಿಕ್ಷೆ ಇರುವ ಬಗ್ಗೆ ರೈತರಿಗೆ, ಹೈನುಗಾರರಿಗೆ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.ಬೀಟ್ ಪೋಲೀಸರ ಮೂಲಕ ಅಕ್ರಮ ಕಸಾಯಿಖಾನೆ ಗುರುತಿಸಿ ಅದನ್ನು ಬಂದ್ ಮಾಡಿಸಬೇಕು. ಖಾಲಿ ಜಾಗ, ಮೈದಾನ, ಪರಿತ್ಯಕ್ತ ಕಟ್ಟಡ ಮುಂತಾದೆಡೆ ವಧೆಗಾಗಿ, ಬಲಿಕೊಡಲಿಕ್ಕಾಗಿ ಗೋವಂಶ ಶೇಖರಿಸಿಡುವ ಸಂಭವ ಇದ್ದು ಜೂ.8 ರ ಮೊದಲು ಹಾಗೆ ಶೇಖರಿಸದಂತೆ ಸಾರ್ವಜನಿಕರಿಗೆ ಆದೇಶ ಹೊರಡಿಸಬೇಕು. ಶೇಖರಿಸಿದರೆ ಅವುಗಳನ್ನು ತಕ್ಷಣ ವಶಪಡಿಸಿ ಜೂ.8 ರ ನಂತರ ಅದರ ಮಾಲೀಕರೆಂದು ಯಾರಾದರೂ ಬಂದರೆ ರುಜುವಾತು ಪಡಿಸಿ ಅವರಿಗೆ ಅಥವಾ ಗೋಶಾಲೆಗೆ ಕಳುಹಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ ವಾಸುದೇವ್ ಜೆ.ಆರ್., ಪ್ರಮುಖರಾದ ರಮೇಶ್ ಬಾಬು, ಆನಂದ್ ರಾವ್, ಜಿತೇಂದ್ರ ಎಂ.ಎಸ್. ವಿನೋದಕುಮಾರ್ ಜೈನ್, ಬಜರಂಗ ದಳದ ಸುರೇಶ್ ಬಾಬು, ಇತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))