ಮಾಗಡಿ: ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿಯಾಗಿದ್ದು ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರಗಳು ವರದಾನ ಇದ್ದಂತೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ಹೇಳಿದರು

ಮಾಗಡಿ: ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿಯಾಗಿದ್ದು ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರಗಳು ವರದಾನ ಇದ್ದಂತೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ಹೇಳಿದರು.

ತಾಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರ್ತಿ ಪ್ರೌಢಶಾಲಾ ಆವರಣದಲ್ಲಿ ಎಂಎಸ್ ರಾಮಯ್ಯ ಆಸ್ಪತ್ರೆ ಮಹಾನಾಡು ಕಟ್ಟೆಮನೆ ಮತ್ತು ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣರು ಆರೋಗ್ಯದ ಕಾಳಜಿ ವಹಿಸುವುದಿಲ್ಲ, ಸಮಯ ಮತ್ತು ಹಣ ಖರ್ಚಾಗುತ್ತದೆ ಎಂದು ಕಾಯಿಲೆಗಳನ್ನು ಮೊದಲ ಹಂತದಲ್ಲೇ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಶಾಸಕ ಬಾಲಕೃಷ್ಣ ಪ್ರತಿ ಹೋಬಳಿಯಲ್ಲೂ ಕಾರ್ಯಕರ್ತರ ಸಹಕಾರದಿಂದ ಆರೋಗ್ಯ ಶಿಬಿರ ಏರ್ಪಡಿಸಿದ್ದು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಪ್ರತಿ ಮನೆಗೂ ತೆರಳಿ ಶಿಬಿರದ ಮಾಹಿತಿ ನೀಡಿ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಚಾರ ಮಾಡಬೇಕು ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಮಾತನಾಡಿ, ಶಾಸಕ ಬಾಲಕೃಷ್ಣ ಅಭಿವೃದ್ಧಿ ಜೊತೆಗೆ ಗ್ರಾಮೀಣ ಜನಗಳಿಗೆ ಉತ್ತಮ ಆರೋಗ್ಯ ಕೊಡುವ ನಿಟ್ಟಿನಲ್ಲಿ, ಪ್ರತಿಯೊಂದು ಕಾಯಿಲೆಗೂ ನುರಿತ ವೈದ್ಯರಿಂದ ತಪಾಸಣೆ ಮಾಡಿಸಿ ಅವರಿಗೆ ಶಸ್ತ್ರ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಹಿಳೆಯರಿಗೆ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್ ಪತ್ತೆಗಾಗಿ ವಿಶೇಷ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ಬಸ್ಸು ಬಂದು ತಪಾಸಣೆ ಮಾಡುತ್ತಿದ್ದಾರೆ. ನೀವು ಇದೇ ತಪಾಸಣೆಗೆ ಹೊರಗೆ ಹೋಗಬೇಕಾದಲ್ಲಿ ನಿಮಗೆ ದಿನವಿಡೀ ಕೆಲಸದ ಸಮಯ ಮತ್ತು ಹಣ ವ್ಯಯವಾಗುತ್ತದೆ. ಆದ್ದರಿಂದ ಗ್ರಾಮೀಣ ಮಹಿಳೆಯರು ಶಿಬಿರದಲ್ಲಿ ಪಾಲ್ಗೊಂಡು ನಿಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ತಿಳಿಸಿದರು.

ತಿಪ್ಪಸಂದ್ರ ಮತ್ತು ಕುದೂರು ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ವೆಂಕಟೇಶ್ ಮಾತನಾಡಿ, ಸರ್ಕಾರ ಉಚಿತವಾಗಿ ಶಿಕ್ಷಣ ಆರೋಗ್ಯ ನೀಡಿದರೆ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಳ್ಳುವ ಉಚಿತ ಶಿಬಿರಗಳ ಪ್ರಯೋಜನ ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಒಂದು ದಿನದ ಕೃಷಿ ಕೆಲಸಕ್ಕೆ ರಜೆ ಹಾಕಿ ಶಿಬಿರದ ಪ್ರಯೋಜನ ಪಡೆಯುವುದರಿಂದ ನಿಮಗೆ ಆಸ್ಪತ್ರೆಗಳಿಗೆ ಓಡಾಡುವ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ. ನಮ್ಮ ಮನೆ ಬಾಗಿಲಲ್ಲಿ ಆಯೋಜಿಸಿರುವ ಶಿಬಿರದ ಸದುಪಯೋಗ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.

ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಜನರು ವಿವಿಧ ಕಾಯಿಲೆಗಳ ತಪಾಸಣೆ ಮಾಡಿಸಲಾಯಿತು. ಟ್ರಸ್ಟ್ ವತಿಯಿಂದ ಪ್ರಯಾಣ, ಊಟ, ಔಷಧಿ, ಕನ್ನಡಕ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ನಾಗರಾಜು, ಚಿಕ್ಕಣ್ಣ, ಮಲ್ಲಿಕಾರ್ಜುನ್, ನರಸಿಂಹಯ್ಯ, ರಾಮಣ್ಣ, ರಾಮಕೃಷ್ಣಯ್ಯ, ಟಿಹೆಚ್‌ಒ ರಾಮಚಂದ್ರು, ಹೊನ್ನ ರಾಜಣ್ಣ, ಪಂಚಪಾಲ ಗೋವಿಂದರಾಜು, ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಎಂ.ಎಸ್. ರಾಮಯ್ಯ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.