ಸಾರಾಂಶ
ಕೊಟ್ಟೂರೇಶ್ವರ ಕೃಷಿ, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವಾರ್ಷಿಕ ಸಭೆಕನ್ನಡಪ್ರಭ ವಾರ್ತೆ ಕೊಟ್ಟೂರು
ರೈತರ ಕೃಷಿ ಚಟುವಟಿಕೆಗಾಗಿ ಹಲವು ಯೋಜನೆಗಳಡಿ ಸರ್ಕಾರ ಕಲ್ಪಿಸಿರುವ ಸಾಲ ಇತರ ಸೌಲಭ್ಯಗಳ ಸದುಪಯೋಗ ಪಡೆಯಬೇಕು. ಜತೆಗೆ ಸಕಾಲಕ್ಕೆ ಸಾಲ ಮರುಪಾವತಿ ಮಾಡಿ, ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕೂಡ್ಲಿಗಿ ತಾಲೂಕು ಶ್ರೀ ಕೊಟ್ಟೂರೇಶ್ವರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಹೇಳಿದರು.ಪಟ್ಟಣದ ಶ್ರೀ ಮಾರ್ಕಂಡೇಯ ದೇವಸ್ಥಾನದಲ್ಲಿ ಆಯೋಜಿಸಿದ್ದ ಬ್ಯಾಂಕ್‌ನ 62ನೇ ವಾರ್ಷಿಕ ಮಹಾಜನ ಸಭೆ ಅಧ್ಯಕ್ಷತೆ ವಹಿಸಿ ಅವರು ಗುರುವಾರ ಮಾತನಾಡಿದರು. ಬ್ಯಾಂಕ್ ಆರಂಭದಿಂದಲೂ ಎಲ್ಲ ವರ್ಗದ ರೈತರಿಗೆ ಕೃಷಿ ಹಾಗೂ ಕೃಷಿಯೇತರ ವಿಭಾಗದಲ್ಲಿ ಸಾಲ ಸೌಲಭ್ಯ ಕಲ್ಪಿಸುತ್ತಿದೆ. ಅದರಂತೆ ಬಹುತೇಕರು ಸಾಲ ಮರು ಪಾವತಿ ಮಾಡುತ್ತಿದ್ದಾರೆ. ಇದರಂತೆ ಎಲ್ಲರೂ ಪಾವತಿ ಮಾಡಿದಲ್ಲಿ ಬ್ಯಾಂಕ್ ಅಭಿವೃದ್ಧಿಯಾಗುತ್ತದೆ. ಅಲ್ಲದೇ ರೈತರಿಗೆ ಇನ್ನೂ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ. ಷೇರುದಾರರು ಹಾಗೂ ಬ್ಯಾಂಕ್ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು ನೀಡುತ್ತಿರುವ ಸಹಕಾರದಿಂದ ಬ್ಯಾಂಕ್ ಉತ್ತಮವಾಗಿ ಮುನ್ನಡೆಯುತ್ತಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿನ ಎಲ್ಲ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ಸುಸ್ತಿದಾರರು ಪ್ರಾಮಾಣಿಕವಾಗಿ ಸಾಲ ಮರು ಪಾವತಿ ಮಾಡಬೇಕು. ಆಗ ಮಾತ್ರ ಸಹಕಾರ ರಂಗದಲ್ಲಿ ಪ್ರಗತಿ ಕಾಣಲು ಸಾಧ್ಯವಾಗುತ್ತದೆ. ಕೊಟ್ಟೂರು ಪಿಎಲ್‌ಡಿ ಬ್ಯಾಂಕ್ ನಿರಂತರವಾಗಿ ರೈತರಿಗೆ ಉಪಯುಕ್ತ ಮಾಹಿತಿಯೊಂದಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಬ್ಯಾಂಕ್ ಅಭಿವೃದ್ಧಿಯಲ್ಲಿ ಷೇರುದಾರರ, ಆಡಳಿತ ಮಂಡಳಿಯವರು, ಸಿಬ್ಬಂದಿಯವರ ಶ್ರಮದ ಪಾತ್ರ ಮುಖ್ಯವಾಗಿರುತ್ತದೆ. ಸರ್ಕಾರದಿಂದ ಇಂದು ಅನೇಕ ಸೌಲಭ್ಯಗಳಿದ್ದು, ಅವುಗಳನ್ನು ಬ್ಯಾಂಕ್ ಮೂಲಕ ಎಲ್ಲರೂ ಪಡೆದುಕೊಳ್ಳಬೇಕು ಎಂದರು.ಬ್ಯಾಂಕ್ ಕಾರ್ಯದರ್ಶಿ ಎಂ. ಸಾಮ್ಯನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದಿನ ಸಭೆಗಳ ನಡವಳಿಕೆಗಳನ್ನು ಓದಿದರು. ಈ ಸಭೆಯಲ್ಲಿ ಆಡಿಟ್ ವರದಿ, ಪ್ರಸಕ್ತ ಸಾಲಿನ ಮುಂಗಡ ಅಂದಾಜು ಆಯ-ವ್ಯಯ ಮಂಡಿಸಿ ಸಭೆಯಲ್ಲಿ ಮಂಜೂರು ಪಡೆದರು. ಸಂಘದ ಇತರ ಚಟುವಟಿಕೆ ಹಾಗೂ ಇತರ ಕಾರ್ಯಗಳ ಕುರಿತು ಸಭೆಗೆ ಮಾಹಿತಿ ನೀಡಿ ನಿರ್ವಹಿಸಿದರು.
ನಿರ್ದೇಶಕರಾದ ಜಿ.ಆರ್. ಸಿದ್ದೇಶ, ಎಂ.ಎಸ್. ಪಂಕಜಾ ತಿಪ್ಪೇಸ್ವಾಮಿ, ಡಿ. ನಾಗೇಶ್, ಬಿ.ಡಿ. ಸೋಮಣ್ಣ, ಎ.ಆರ್. ಚಂದ್ರಶೇಖರಯ್ಯ, ಡಾ. ಜಿ.ಕೆ. ದಯಾನಂದ, ಎ. ಲೋಕರಾಜ, ಕೆ. ಸಿದ್ದಪ್ಪ, ಟಿ. ಬಸವೇಶ್ವರ, ಕೆ. ವಸಂತ, ಪಿ.ಎಚ್. ರಾಘವೇಂದ್ರ, ಆರ್.ಎಂ. ಸರ್ಮಮನ್ ಹುಸೇನ್, ಕೆ. ಮೂರ್ತಿ, ಕೂಡ್ಲಿಗಿ ಎಪಿಎಂಸಿ ಅಧ್ಯಕ್ಷ ಬೋಸಯ್ಯ, ಮುಖಂಡರಾದ ಟಿ.ಎಂ. ಸೋಮಯ್ಯ, ಎಂ.ಜಿ. ಸ್ವಾಮಿ ಇದ್ದರು.