ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಶಾಸಕ

| Published : Feb 02 2024, 01:00 AM IST

ಸಾರಾಂಶ

ಕಾಂಗ್ರೆಸ್‌ ಸರ್ಕಾರದ ಜನಪರವಾಗಿರುವಂತಹ, ಬಡವರ ಬದುಕಿಗೆ ಆಸರೆಯಾಗಿರುವಂತಹ ಪಂಚ ಗ್ಯಾರಂಟಿ ಯೋಜನೆಗಳ ಸದುಪಯೋಗವನ್ನು ಪ್ರತಿಯೊಂದು ಅರ್ಹ ಕುಟುಂಬ ಪಡೆದುಕೊಳ್ಳಬೇಕು ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಂಪ್ರಭು ಪಾಟೀಲ್‌ ಜನತೆಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಜ್ಯ ಕಾಂಗ್ರೆಸ್‌ ಸರ್ಕಾರದ ಜನಪರವಾಗಿರುವಂತಹ, ಬಡವರ ಬದುಕಿಗೆ ಆಸರೆಯಾಗಿರುವಂತಹ ಪಂಚ ಗ್ಯಾರಂಟಿ ಯೋಜನೆಗಳ ಸದುಪಯೋಗವನ್ನು ಪ್ರತಿಯೊಂದು ಅರ್ಹ ಕುಟುಂಬ ಪಡೆದುಕೊಳ್ಳಬೇಕು ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಂಪ್ರಭು ಪಾಟೀಲ್‌ ಜನತೆಗೆ ಕರೆ ನೀಡಿದರು.

ಕಲಬುರಗಿ ತಾಲೂಕ ಆಡಳಿತ ವತಿಯಿಂದ ಶರಣಸಿರಸಗಿ ಗ್ರಾಮ ಪಂಚಾಯತಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಹೋಬಳಿ ಮಟ್ಟದ ಜಾಗೃತಿ ಸಮಾವೇಶವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಶಕ್ತಿ ಯೋಜನೆ, ಹಾಗೂ ಯುವನಿಧಿ ಯೋಜನೆಗಳ ಲಾಭ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಈ ಯೋಜನೆಗಳಿಂದಾಗಿ ರಾಜ್ಯದ ಪ್ರತಿ ಮನೆಗೂ ಸರಕಾರದ ಸಹಾಯ ದೊರಕಿದಂತಾಗಿದೆ. ಪ್ರತಿ ಫಲಾನುಭವಿಗೂ ಕನಿಷ್ಠ 8 ರಿಂದ 10 ಸಾವಿರ ರು. ಪ್ರತಿ ತಿಂಗಳು ಲಭ್ಯವಾಗುತ್ತಿರುವಂತಹ ಯೋಜನೆಗಳು ಇವಾಗಿವೆ. ಯಾರಾದರೂ ಅರ್ಹರು ಹೆಸರು ನೋಂದಣಿ ಮಾಡಿಸಿಕೊಳ್ಳದಿದ್ದರೂ ಪರವಾಗಿಲ್ಲ, ನಿಮ್ಮ ಹತ್ತಿರದ ಗಣಕ ಕೇಂದ್ರಳಿಗೆ ಹೋಗಿ ಮೊದಲು ಹೆಸರು ನೋಂದಣಿ ಮಾಡಿಸಿಕೊಳ್ಳಿ, ಪಂಚ ಗ್ಯಾರಂಟಿಗಳ ಲಾಭ ಹೊಂದಬೇಕು ಎಂದರು.

ನಂತರ ಯೋಜನೆಗಳಿಂದ ಹೊರಗುಳಿದ ಅರ್ಹ ಕುಟುಂಬಗಳು ತಾಂತ್ರಿಕ ದೋಷವಿದ್ದಲ್ಲಿ ಅಗತ್ಯ ದಾಖಲೆಗಳ ಕೊಟ್ಟು ತಾಂತ್ರಿಕ ಸಿಬ್ಬಂದಿಗಳಿಂದ ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಗ್ಯಾರಂಟಿ ಯೋಜನೆಗಳ ಸಂಭಂದ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಅಲ್ಲಂಪ್ರಭು ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮೀಣ ತಹಶೀಲ್ದಾರರಾದ ನಿಸಾರ್‌ ಅಹ್ಮದ್‌, ನಾಗಮ್ಮ ಕಟ್ಟೀಮನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಿಡಿಪಿಓ ಪ್ರೇಮಾ, ತಾಪಂ ಕಾರ್ಯನಿರ್ವಾಹರ ಅಧಿಕಾರಿಗಳು, ಗ್ಯಾರಂಟಿ ಯೋಜನೆ ಫಲನುಭವಿಗಳು ಕಾರ್ಯಕ್ರಮದಲ್ಲಿ ಭಾಗವಾಹಿಸಿದ್ದರು.