ಸಾರಾಂಶ
ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಲು ಅಲೆಯುವುದನ್ನು ಹೋಗಲಾಡಿಸುವ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರ ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಸವಲತ್ತನ್ನು ನೀಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಜನರ ಮನೆ ಬಾಗಿಲಿಗೆ ಬಂದು ವಿವಿಧ ಇಲಾಖೆ ಅಧಿಕಾರಿಗಳ ತಂಡ ನಿಮ್ಮಗಳ ಸಮಸ್ಯೆ ಪರಿಹರಿಸುವ ಆಯೋಜಿಸಿರುವ ಜನತಾದರ್ಶನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಪಿ.ರವಿಕುಮಾರ್ ಎಂದರು.ತಾಲೂಕಿನ ಕೆರಗೋಡು 1 ಮತ್ತು 2 ನೇ ಹೋಬಳಿ ಕೀಲಾರ ಗ್ರಾಮದಲ್ಲಿ ನಡೆದ ಜನತಾದರ್ಶನ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಹಲವು ಯೋಜನೆಗಳ ಮೂಲಕ ಜನ ಸಾಮಾನ್ಯರಿಗೆ ವಿವಿಧ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಶಂಕರೇಗೌಡ ಬೀದಿಯ ಅಭಿವೃದ್ಧಿಗಾಗಿ 70 ಲಕ್ಷ ರು. ವೆಚ್ಚವನ್ನು ನೀಡಲಾಗಿದೆ. ಕಾವೇರಿ ನಿಗಮದಿಂದ 8 ಕೋಟಿ ರು. ವೆಚ್ಚದಲ್ಲಿ ಸುತ್ತಮುತ್ತಲಿನ ಕೆರೆಕಟ್ಟೆ ಹಾಗೂ ಪಿಕಪ್ ನಾಲೆಗಳ ಅಭಿವೃದ್ಧಿಗೊಳಿಸಲಾಗುವುದು ಎಂದರು.ಕೆರಗೋಡು ಹೋಬಳಿಯನ್ನು ಮುಂದಿನ 4 ವರ್ಷದಲ್ಲಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಜೊತೆಗೆ ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜನತಾದರ್ಶನ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಕಾನೂನಿನ ವ್ಯಾಪ್ತಿಯೊಳಗೆ ಪರಿಹರಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಲು ಅಲೆಯುವುದನ್ನು ಹೋಗಲಾಡಿಸುವ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರ ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಸವಲತ್ತನ್ನು ನೀಡಲಾಗುತ್ತಿದೆ ಎಂದರು.
ಜನ ಸಾಮಾನ್ಯರು ತಮ್ಮ ಸಮಸ್ಯೆಗಳ ದೂರು, ಅಹವಾಲುಗಳಿಗೆ ಲಿಖಿತ ಅರ್ಜಿ ನೀಡಬೇಕು. ಅರ್ಜಿ ಪರಿಶೀಲಿಸಿದ ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ ಕಂಪ್ಯೂಟರ್‌ನಲ್ಲಿ ದಾಖಲೀಕರಣ ಮಾಡಿ, ಕಾನೂನಿನ ವ್ಯಾಪ್ತಿಯೊಳಗಡೆ ಬಗೆಹರಿಸಲಾಗುವುದು. ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ, ಬಗೆಹರಿಸಲಾಗುವುದು ಎಂದರು.ರೈತರು ಮೃತಪಟ್ಟ ನಂತರ ವಾರಸುದಾರರು ಖಾತೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ತಾಲೂಕು ಕಚೇರಿಗೆ ಅಲೆಯಬಾರದು ಎಂಬ ನಿಟ್ಟಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಪೌತಿ ಖಾತೆ ಆಂದೋಲನವನ್ನು ಜಿಲ್ಲಾದ್ಯಂತ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ತಹಸೀಲ್ದಾರ್ ಬಿರಾದರ್, ಎ.ಎಸ್.ಪಿ ತಿಮ್ಮಯ್ಯ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.