ಉದ್ಯೋಗವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ: ಡಾ. ಸಿ.ಜಿ. ಕುಶಾಲಪ್ಪ

| Published : Jan 13 2025, 12:48 AM IST

ಸಾರಾಂಶ

ಗರಗಂದೂರಿನ ಶ್ರೀಮತಿ ಡಿ. ಚೆನ್ನಮ್ಮ ಎಜುಕೇಷನ್‌ ಸೊಸೈಟಿಯ ವಜ್ರಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮಡಿಕೇರಿ ನಗರಸಭೆ ಮಾಜಿ ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರವಾಸೋದ್ಯಮ, ಸೇನಾ ನೇಮಕಾತಿ, ಕೃಷಿ ಸಂಬಂಧಿತ ಉದ್ಯೋಗಗಳೂ ಸೇರಿದಂತೆ ವಿದ್ಯಾವಂತರಿಗೆ ಸಾಕಷ್ಟು ಉದ್ಯೋಗವಕಾಶಗಳು ಸಮಾಜದಲ್ಲಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಸಿ.ಜಿ. ಕುಶಾಲಪ್ಪ ಕರೆ ನೀಡಿದ್ದಾರೆ.

ಮಾದಾಪುರ ಬಳಿಯ ಗರಗಂದೂರಿನ ಶ್ರೀಮತಿ ಡಿ. ಚೆನ್ನಮ್ಮ ಎಜುಕೇಷನ್ ಸೊಸೈಟಿಯ ವಜ್ರಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ತೀತೀರ ರೋಷನ್ ಅಪ್ಪಚ್ಚು ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲಿಯೂ ದುಶ್ಚಟಗಳಿಗೆ ಬಲಿಯಾಗಬೇಡಿ, ಒಮ್ಮೆ ದುಶ್ಚಟಕ್ಕೆ ಈಡಾದರೆ ಮತ್ತೆ ಅದರಿಂದ ಹೊರಬರಲಾಗದೇ ಜೀವನದಲ್ಲಿ ಉದ್ದೇಶಿತ ಸಾಧನೆಯ ಗುರಿಯತ್ತ ಸಾಗುವುದು ಕಷ್ಟಸಾಧ್ಯವಾಗಲಿದೆ ಎಂದರು.

ರೋಟರಿ ಜಿಲ್ಲೆ 3181 ನ ಮಾಜಿ ಗವರ್ನರ್ ಎಚ್.ಆರ್. ಕೇಶವ್ ಮಾತನಾಡಿ, ಮಕ್ಕಳಿಗೆ ಕಷ್ಟಗಳ ಅನುಭವ ಆಗದೇ ಹೋದರೆ, ಅವರಲ್ಲಿನ ಸುಪ್ತ ಪ್ರತಿಭೆ ಹೊರಹೊಮ್ಮುವುದಿಲ್ಲ ಎಂದರು.

ಮಡಿಕೇರಿ ನಗರಸಭೆಯ ಮಾಜಿ ಪೌರಾಯುಕ್ತೆ ಬಿ.ಬಿ. ಪುಪ್ಪಾವತಿ, ವಜ್ರದೀವಿಗೆ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿ, ಪ್ರಾಮಾಣಿಕತೆ ಕಡಮೆಯಾದಾಗಲೆಲ್ಲ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಹೀಗಾಗಿ ಜೀವನದಲ್ಲಿ ಪ್ರಾಮಾಣಿಕರಾಗಿ ಬದುಕಿ ಎಂದರು.

ಶ್ರೀಮತಿ ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿ ಅಧ್ಯಕ್ಷ ಕರ್ನಲ್ ಬಿ.ಜಿ.ವಿ. ಕುಮಾರ್ ಮಾತನಾಡಿ, 60 ವರ್ಷಗಳ ಹಿಂದೆ ಮಾದಾಪುರದ ಪುಟ್ಟ ಕಟ್ಟಡದಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಹತ್ತಾರು ಗ್ರಾಮಗಳ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವ ಮೂಲಕ ಸುಶಿಕ್ಷಿತ ಸಮಾಜದ ನಿರ್ಮಾಣಕ್ಕೆ ಕಾರಣವಾಗಿದೆ. ಹಿಂದಿನ ಆಡಳಿತ ಮಂಡಳಿಯ ದೂರದೃಷ್ಟಿಯ ತೀರ್ಮಾನಗಳೂ ಈ ಸಂಸ್ಥೆಯನ್ನು ಪ್ರಬಲವಾಗಿ ಬೆಳೆಸಿದೆ ಎಂದರಲ್ಲದೇ, ಇದೇ ಶೈಕ್ಷಣಿಕ ಸಾಲಿನಿಂದ ಸಂಸ್ಥೆಯಲ್ಲಿ ಆಂಗ್ಲಮಾಧ್ಯಮ ಶಾಲೆಯನ್ನು ಪ್ರಾರಂಭಿಸುತ್ತಿರುವುದಾಗಿ ಘೋಷಿಸಿದರು.

ಕಾಲೇಜಿನ ಪ್ರಾಂಶುಪಾಲ ಚೆಯ್ಯಂಡ ಸಿ. ಮಂದಪ್ಪ ವಾರ್ಷಿಕ ವರದಿ ವಾಚಿಸಿ, ಸಂಸ್ಥೆ ಸಾಗಿ ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು. ಪ್ರೌಢಶಾಲೆಯ ಮುಖ್ಯಶಿಕ್ಷಕಿ ಕೆ.ಯು. ರೀಟಾ ಮತ್ತು ಉಪನ್ಯಾಸಕಿ ಪ್ರಮೀಳಾ ವೆಂಕಟೇಶ್ ನಿರೂಪಿಸಿದರು. ಸಂಸ್ಥೆಯ ಆಡಳಿತ ಮಂಡಳಿ ಪೋಷಕರಾದ ಎಂ.ಜಿ.ಬೋಪಣ್ಣ, ಕಾರ್ಯದರ್ಶಿ ಎಂ.ಬಿ.ಬೋಪಣ್ಣ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಇದ್ದರು.

ವಿದ್ಯಾರ್ಥಿಗಳಿಂದ ಪಥಸಂಚಲನ, ಸಾಮೂಹಿಕ ಅಂಗಸಾಧನೆ ಗಮನ ಸೆಳೆದವು.

ಸಂಸ್ಥೆಯ ನಿವೃತ್ತ ಬೋಧಕರಾದ ಎಂ.ಎಸ್. ಸುಬ್ರಹ್ಮಣ್ಯ, ಪಿ. ಸೋಮಯ್ಯ, ಸೋಮಶೇಖರ್, ಬಿ.ಸಿ. ಶಂಕರಯ್ಯ, ಬೋಧಕೇತರ ವರ್ಗದ ಸಿಬ್ಬಂದಿ ಎಸ್.ಸಿ. ಮಾಲತಿ, ಸಿ.ಆರ್. ಅಶೋಕ್ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಂಸ್ಥೆಯ ವಿದ್ಯಾರ್ಥಿನಿ ಅದವ್ಯಳನ್ನು ಸನ್ಮಾನಿಸಲಾಯಿತು.

ಸ್ನೇಹಸಮ್ಮಿಲನ:

ಶ್ರೀಮತಿ ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿಯ ಹಳೇ ವಿದ್ಯಾಥಿ೯ಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸಂಭ್ರಮ ಸಡಗರದೊಂದಿಗೆ ಜರುಗಿತು. ಹಳೆ ವಿದ್ಯಾರ್ಥಿ ಎಂ.ಜಿ.ಬೋಪಣ್ಣ ಉದ್ಘಾಟಿಸಿದರು. ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಬಿ.ಎ.ನಾಣಿಯಪ್ಪ, ಹಳೇ ವಿದ್ಯಾರ್ಥಿ ವಕೀಲ ಕೆ.ಎಸ್. ರತನ್ ತಮ್ಮಯ್ಯ, ಲೆಕ್ಕ ಪರಿಶೋಧಕ ಪಿ.ಡಬ್ಲ್ಯು. ಫ್ರಾನ್ಸಿಸ್ ಮಾತನಾಡಿದರು.

ಕಾಫಿ ಬೆಳೆಗಾರ ಸಿ.ಪಿ. ಮುದ್ದಪ್ಪ, ಅರಣ್ಯ ಇಲಾಖೆಯ ಹಿರಿಯ ಸಹಾಯಕಿ ವಿಜಯಲಕ್ಷ್ಮೀ, ಕಾಫಿ ಬೆಳೆಗಾರ ಎಚ್.ಎಸ್. ಉತ್ತಯ್ಯ, ಉದ್ಯಮಿ ಬಿ.ವಿ. ವೆಂಕಪ್ಪ, ಸಂಸ್ಥೆಯಲ್ಲಿ ಕಳೆದ ದಿನಗಳನ್ನು ಅವಲೋಕಿಸಿದರು. ಸಂಸ್ಥೆಯ ಅಧ್ಯಕ್ಷ ಕರ್ನಲ್ ಬಿ.ಜಿ.ವಿ. ಕುಮಾರ್, ಎಸ್.ಸಿ.ಮಾಲತಿ, ಗಣೇಶ್ ಎಚ್.ಎಸ್., ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಪ್ರೌಡಶಾಲಾ ಮುಖ್ಯಶಿಕ್ಷಕಿ ಕೆ.ಯು. ರೀಟಾ ವೇದಿಕೆಯಲ್ಲಿದ್ದರು.

ಸಂಸ್ಥೆಯ ಹಳೆ ವಿದ್ಯಾರ್ಥಿ, ಪತ್ರಕರ್ತ ಅನಿಲ್ ಎಚ್.ಟಿ. ನಿರೂಪಿಸಿದರು. ಉಪನ್ಯಾಸಕಿ ಕೆ.ಎಸ್. ಅಶ್ವಿನಿ ಕ್ರೀಡಾಸ್ಪರ್ಧೆಗಳ ವಿಜೇತರನ್ನು ಘೋಷಿಸಿದರು.

ಭೋಜನ ಶಾಲೆ ಉದ್ಘಾಟನೆ: ವಜ್ರಮಹೋತ್ಸವ ಸಂದರ್ಭ 25 ಲಕ್ಷ ರು. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾದ ಭೋಜನ ಶಾಲೆಯನ್ನು ಗಣ್ಯರು ಉದ್ಘಾಟಿಸಿದರು.

ದಾರಿತಪ್ಪಿಸುವ ಅವಕಾಶಗಳನ್ನು ತಿರಸ್ಕರಿಸಿ: ಡಾ. ಮಂಥರ್ ಗೌಡ

ವಿದ್ಯಾರ್ಥಿ ಜೀವನದಲ್ಲಿ ದಾರಿತಪ್ಪಲು ಸಾಕಷ್ಟು ಅವಕಾಶಗಳು ಇರುತ್ತದೆ. ಆದರೆ ಇಂಥ ಅವಕಾಶಗಳು ಎದುರಾದಾಗ ಅವುಗಳನ್ನು ತಿರಸ್ಕರಿಸಿ, ಜೀವನಕ್ಕೆ ಪ್ರಯೋಜನವಾಗುವಂಥ ಆದರ್ಶದ ಹಾದಿಯಲ್ಲಿ ಸಾಗಬೇಕೆಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕಿವಿಮಾತು ಹೇಳಿದರು. ಶ್ರೀಮತಿ ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿಯ ವಜ್ರಮಹೋತ್ಸವ ಸಂದರ್ಭದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.