ಸಾರಾಂಶ
ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು, ಹಣಕಾಸಿನ ನೆರವು ಕುರಿತು ಕಾರ್ಯಕ್ರಮದಲ್ಲಿ ಡಾ. ಕೆ. ಸಾಕ್ರಟೀಸ್
ಕನ್ನಡಪ್ರಭ ವಾರ್ತೆ ಶಿವಮೊಗ್ಗಕೃಷಿ ಬಿಟ್ಟರೆ ಅತಿ ಹೆಚ್ಚು ಉದ್ಯೋಗ ನೀಡುತ್ತಿರುವುದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯವಾಗಿದ್ದು, ಈ ವಲಯದಲ್ಲಿರುವ ಸವಲತ್ತುಗಳನ್ನು ಕೈಗಾರಿಕೋದ್ಯಮಿಗಳು ಬಳಕೆ ಮಾಡಿಕೊಳ್ಳಬೇಕೆಂದು ಎಂಎಸ್ ಎಂಇ ಜಂಟಿ ನಿರ್ದೇಶಕ ಡಾ. ಕೆ. ಸಾಕ್ರಟೀಸ್ ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕಾಸಿಯಾ ಇವರ ಸಂಯುಕ್ತಾಶ್ರಯದಲ್ಲಿ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿರುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಅರಿವು, ರಫ್ತು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇದೊಂದು ಅತ್ಯಂತ ಪ್ರಸ್ತುತವಾದ ಕಾರ್ಯಕ್ರಮವಾಗಿದೆ. ಎಂಎಸ್‌ಎಂಇ ಸುಮಾರು 11 ಕೋಟಿ ಉದ್ಯೋಗವನ್ನು ನೀಡಿದ್ದು, ಪರೋಕ್ಷ ವಾಗಿ 6 ಕೋಟಿ ಜನರಿಗೆ ಉದ್ಯೋಗ ನೀಡಿದೆ. ಜಿಡಿಪಿಗೆ ಶೇ. 27ರಷ್ಟು ಕೊಡುಗೆಯನ್ನು ನೀಡುತ್ತಿದ್ದು, ಶೇ.25ರಷ್ಟು ರಫ್ತು ಇದರಿಂದ ಆಗುತ್ತಿದೆ ಎಂದರು.
ನಮ್ಮ ರಾಜ್ಯದಲ್ಲಿ ಎಂಎಸ್‌ಎಂಇಗೆ ಅಗತ್ಯವಾದ ಸಂಪನ್ಮೂಲ ಮತ್ತು ಪೂರಕ ವಾತಾವರಣವಿದ್ದು, ಉದ್ಯಮಶೀಲ ಸಂಸ್ಕೃತಿಯೂ ಇದೆ. ಜೊತೆಗೆ ಎಂಎಸ್ ಎಂಇ ಬೆಳೆಯುತ್ತಿದ್ದರೂ ಕೈಗಾರಿಕೆಗಳನ್ನು ನಡೆಸಲು ಹಲವು ಸಮಸ್ಯೆಗಳು ಇವೆ. ಮುಖ್ಯವಾಗಿ ಮಾರುಕಟ್ಟೆ ಮತ್ತು ಹಣಕಾಸು ಸಮಸ್ಯೆ ಇದ್ದು, ಇಂತಹ ಕಾರ್ಯಕ್ರಮದಲ್ಲಿ ಈ ಬಗ್ಗೆ ಹೆಚ್ಚಿನ ಚರ್ಚೆ ಆಗಬೇಕು. ಹಾಗೂ ಸರ್ಕಾರ ಸಹ ಇವುಗಳನ್ನು ಬಗೆಹರಿಸ ಲು ಪ್ರಯತ್ನಿಸುತ್ತಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗಾಗಿ ಎಂಎಸ್ ಎಂಇ ಸಚಿವಾಲಯ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು ಇದನ್ನು ಎಂಎಸ್ಎಂಇ ಗಳು ಬಳಸಿಕೊಳ್ಳಬೇಕೆಂದರು.ಕಾಸಿಯಾ ಅಧ್ಯಕ್ಷ ಸಿ. ಎ. ಶಶಿಧರ ಶೆಟ್ಟಿ ಮಾತನಾಡಿ, ರಾಜ್ಯದ ಕೈಗಾರಿಕೆಗಳಿಗೆ ಅತ್ಯಂತ ಹಳೆಯ ಇತಿಹಾಸವಿದ್ದು, ಮೊದಲಿಗೆ ಎಚ್ಎಂಟಿ, ಬಿಎಂಎಲ್ ಅಂತಹ ಪಬ್ಲಿಕ್ ಸೆಕ್ಟರ್ ಮೇಲೆ ಅವಲಂಬಿತವಾಗಿದ್ದವು. ಅವು ಕ್ಷೀಣಿಸುತ್ತಾ ಬಂದ ಹಾಗೆ ಸ್ವಾವಲಂಬಿ-ವೈವಿಧ್ಯ ಕೈಗಾರಿಕೆಗೆ ಒತ್ತು ಕೊಡಲಾರಂಭಿಸಿದವು ಎಂದರು.
ರಾಜ್ಯದ ಕೈಗಾರಿಕೆಗಳು ತಾಂತ್ರಿಕವಾಗಿ ಸುಸಜ್ಜಿತವಾಗಿದ್ದು ಜಗತ್ತಿಗೆ ಸ್ಪರ್ಧಾತ್ಮ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ. ಶಿವಮೊಗ್ಗದ ಫೌಂಡ್ರಿಗಳಿಂದಲೇ ಬೋಯಿಂಗ್, ಏರ್ ಬಸ್ ಗೆ ರಫ್ತು ಆಗುತ್ತಿದೆ. ಆದರೆ ರಾಜ್ಯದ ಶೇ. 94 ಕೈಗಾರಿಕೆಗಳು ಖಾಸಗಿ ಕೈಗಾರಿಕಾ ವಸಾಹತು ವಿನಲ್ಲಿದ್ದು, ಸರ್ಕಾರದ ಕೆಐಎಡಿಬಿ, ಕೆಎಸ್ಎಸ್ಐಸಡಿಸಿ ಗಳಿಂದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕೆಲಸ ಆಗುತ್ತಿದೆ ಎಂದು ಹೇಳಿದರು.ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಎನ್.ಗೋಪಿನಾಥ್ ಮಾತನಾಡಿ, ಕೈಗಾರಿಕೆಗಳ ಉತ್ತೇಜನಕ್ಕೆ ಸಂಬಂಧಿಸಿದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶ. ವಿದ್ಯಾರ್ಥಿಗಳಿಗೆ ಉದ್ಯಮಶೀಲತೆ ಬಗ್ಗೆ ಅನ್ವಯಿಕ ಪಾಠಗಳು ಆಗಬೇಕು. ಮುಂದಿನ ದಿನಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನೂ ಒಳಗೊಂಡು ಇಂತಹ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡುವ ಯೋಚನೆ ಇದೆ.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್.ಆರ್, ವಿಟಿಸಿಸಿ ಜಂಟಿ ನಿರ್ದೇಶಕ ಸಿ.ಎಸ್.ಬಾಬುನಾಗೇಶ್, ಕಾಸಿಯಾ ಜಂಟಿ ಕಾರ್ಯದರ್ಶಿ ಗ್ರಾಮೀನ ಅರುನ್ ಪಡಿಯಾರ್ ಎನ್, ಖಜಾಂಚಿ ಮಲ್ಲೇಶಗೌಡ, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ರಮೇಶ್ ಹೆಗಡೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹಕಾರ್ಯದರ್ಶಿ ವಿಜಯಕುಮಾರ್ ಇತರೆ ಉದ್ಯಮಿಗಳು ಹಾಜರಿದ್ದರು. ಕಾಸಿಯಾ ಉಪಾಧ್ಯಕ್ಷ ರಾಜಗೋಪಾಲ್ ಕಾರ್ಯಕ್ರಮ ನಿರ್ವಹಿಸಿದರು.;Resize=(128,128))
;Resize=(128,128))
;Resize=(128,128))