ಸುಸ್ತಿಸಾಲ ಮುಕ್ತಾಯ ಅವಕಾಶ ಬಳಸಿಕೊಳ್ಳಿ: ಆರ್‌ಎಂಎಂ

| Published : Dec 28 2023, 01:45 AM IST / Updated: Dec 28 2023, 01:46 AM IST

ಸುಸ್ತಿಸಾಲ ಮುಕ್ತಾಯ ಅವಕಾಶ ಬಳಸಿಕೊಳ್ಳಿ: ಆರ್‌ಎಂಎಂ
Share this Article
  • FB
  • TW
  • Linkdin
  • Email

ಸಾರಾಂಶ

ಸುಸ್ತಿ ಸಾಲಗಳನ್ನು ಪರಸ್ಪರ ಒಪ್ಪಂದದ ಮೂಲಕ ಮುಕ್ತಾಯ ಮಾಡಿಕೊಳ್ಳಲು ರಿಸರ್ವ್ ಬ್ಯಾಂಕ್ ಒಂದು ಸುವರ್ಣ ಅವಕಾಶ ಕಲ್ಪಿಸಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥಗೌಡ ಹೇಳಿದ್ದಾರೆ.

- ರಾಜ್ಯದಲ್ಲಿ ದ್ವಿತೀಯ, ಬೆಂಗಳೂರು ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿರುವ ಬ್ಯಾಂಕ್‌

- ಜಿಲ್ಲೆಯ 1.3 ಲಕ್ಷ ರೈತರಿಗೆ ಸಾವಿರ ಕೋಟಿ ರು. ಬೆಳೆ ಸಾಲ ನೀಡಿ ದಾಖಲೆ ಸಾಧನೆ- - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸುಸ್ತಿ ಸಾಲಗಳನ್ನು ಪರಸ್ಪರ ಒಪ್ಪಂದದ ಮೂಲಕ ಮುಕ್ತಾಯ ಮಾಡಿಕೊಳ್ಳಲು ರಿಸರ್ವ್ ಬ್ಯಾಂಕ್ ಒಂದು ಸುವರ್ಣ ಅವಕಾಶ ಕಲ್ಪಿಸಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥಗೌಡ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಸ್ತಿ ಸಾಲಗಳನ್ನು ಪಡೆದುಕೊಂಡವರು ಅಸಲು ಕಟ್ಟಿದರೆ ಸಾಕು, ಬಡ್ಡಿಯನ್ನು ಮನ್ನಾ ಮಾಡಬಹುದು. ರಿಸರ್ವ್ ಬ್ಯಾಂಕ್‌ನ ಈ ಹೊಸ ಆದೇಶದಿಂದ ಮಾರ್ಚ್ 30ರವರೆಗೆ ಸುಸ್ತಿದಾರರು ಈ ಒಡಂಬಡಿಕೆಯ (ಒಟಿಎಸ್) ಪರಸ್ಪರ ಹೊಂದಾಣಿಕೆಯ ಅವಕಾಶವನ್ನು ಪಡೆದುಕೊಳ್ಳಬಹುದು ಎಂದರು.

ಠೇವಣಿ ಮಾಸಾಚರಣೆ:

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ 2022-23ನೇ ಸಾಲಿನಲ್ಲಿ ಒಟ್ಟು ₹17.26 ಕೋಟಿ ಲಾಭ ಗಳಿಸಿದ್ದು, ₹12.69 ಕೋಟಿ ನಿವ್ವಳ ಲಾಭದಲ್ಲಿದೆ. ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಾಗೂ ಬೆಂಗಳೂರು ವಿಭಾಗದಲ್ಲಿ ಮೊದಲನೇ ಸ್ಥಾನದಲ್ಲಿದೆ. ಜಿಲ್ಲೆಯ 1.3 ಲಕ್ಷ ರೈತರಿಗೆ ಸಾವಿರ ಕೋಟಿ ರು. ಬೆಳೆ ಸಾಲ ನೀಡಿರುವುದು ದಾಖಲೆ ಸಾಧನೆಯಾಗಿದೆ. 2023-24ರಲ್ಲಿ ₹1350 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ಕಾರಣಕ್ಕಾಗಿ ಈ ಡಿಸೆಂಬರ್ ತಿಂಗಳನ್ನು ಠೇವಣಿ ಮಾಸಾಚರಣೆಯನ್ನಾಗಿ ಆಚರಿಸುತ್ತಿದ್ದು, ₹100 ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಪ್ರಸಕ್ತ ಸಾಲಿನ ಅಂತ್ಯಕ್ಕೆ ₹1293.10 ಕೋಟಿ ಠೇವಣಿ ಸಂಗ್ರಹವಾಗಿದೆ. ಈಗ ರಾಜ್ಯ ಸರ್ಕಾರ ಆದೇಶದಂತೆ ಪಶು ಸಂಗೋಪನೆ ಮತ್ತು ಮೀನುಗಾರಿಕೆಗೆ ಶೂನ್ಯ ಬಡ್ಡಿ ದರದಲ್ಲಿ ₹5 ಲಕ್ಷದವರೆಗೆ ಸಾಲ, ಶೇ.3ರ ಬಡ್ಡಿ ದರದಲ್ಲಿ ಮಧ್ಯಮಾವಧಿ ಸಾಲ ವಿತರಣೆ ಮಾಡಲಾಗುವುದು. ಅಲ್ಲದೇ, ಗುಡ್ಡಗಾಡು ಪ್ರದೇಶದಲ್ಲಿ ರೈತರಿಗೆ ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆ ಪಿಕ್‌ಅಪ್‌ ವ್ಯಾನ್‌ ಖರೀದಿಗೆ ಶೇ.4ರಷ್ಟು ಬಡ್ಡಿ ದರಕ್ಕೆ ₹7 ಲಕ್ಷದವರಿಗೆ ಸಾಲವನ್ನು ನೀಡಲಾಗುವುದು. ಸರ್ಕಾರ ಸಂಘಗಳ ಮೂಲಕ ಗೋದಾಮು ನಿರ್ಮಿಸಲು ಶೇ.7ರಷ್ಟು ಬಡ್ಡಿಗೆ ₹20 ಲಕ್ಷವರೆಗೆ ಸಾಲ ನೀಡಲಾಗುವುದು. ಬ್ಯಾಂಕಿನಿಂದ ಪೆಟ್ರೋಲ್‌ ಬಂಕ್‌, ಟ್ರಾನ್ಸ್‌ಪೋರ್ಟ್‌ ಕಂಪನಿ, ಆಸ್ಪತ್ರೆ ನಿರ್ಮಾಣಕ್ಕೆ ಕೃಷಿಯೇತರ ಸಾಲವನ್ನು ನೀಡಲಾಗುವುದು ಎಂದು ವಿವರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಬ್ಯಾಂಕ್‌ ಉಪಾಧ್ಯಕ್ಷ ಎಚ್‌.ಎಸ್‌. ಷಡಕ್ಷರಿ, ನಿರ್ದೇಶಕರಾದ ಜಿ.ಎಂ. ಸುಧೀರ್‌, ಎಚ್‌.ಕೆ.ವೆಂಕಟೇಶ್‌, ಎಂ.ಎಂ. ಪರಮೇಶ್‌, ದುಗ್ಗಪ್ಪ ಗೌಡ, ದಶರಥ ಗೌಡ, ಸಿಇಒ ವಾಸುದೇವ್ ಮತ್ತಿತರರು ಇದ್ದರು.

- - - ಬಾಕ್ಸ್‌ ಜಿಲ್ಲಾದ್ಯಂತ ನೂತನ 10 ಶಾಖೆ ಆರಂಭ ಜಿಲ್ಲೆಯ ರೈತರ ಅನುಕೂಲಕ್ಕಾಗಿ 10 ನೂತನ ಶಾಖೆಗಳನ್ನು ಜಿಲ್ಲಾದ್ಯಂತ ತೆರೆಯಲು ನಿರ್ಧರಿಸಲಾಗಿದೆ. ಆಯನೂರು, ಹೊಳಲೂರು, ಬಾರಂದೂರು, ಕಲ್ಲಿಹಾಳ್, ಹೊಸನಗರ ಹಾಗೂ ಇತರೆ ತಾಲೂಕು ಹೋಬಳಿಮಟ್ಟದಲ್ಲಿ ಈ ಶಾಖೆಗಳನ್ನು ತೆರೆಯುವ ಬಗ್ಗೆ ಚಿಂತಿಸಿದೆ. ಇದಕ್ಕಾಗಿ ರಿಸರ್ವ್‌ ಬ್ಯಾಂಕ್‌ನ ಅನುಮತಿ ಕೋರಲಾಗಿದೆ. ಅನುಮತಿ ಸಿಕ್ಕ ಕೂಡಲೇ ನೂತನ ಶಾಖೆಗಳನ್ನು ಪ್ರಾರಂಭಿಸಲಾಗುವುದು. ಇದರ ಜೊತೆಗೆ ಬ್ಯಾಂಕ್ ಮೊಬೈಲ್ ಆಪ್ ಬಿಡುಗಡೆ ಮಾಡಿದ್ದು, ಈ ಆಪ್ ಮೂಲಕ ಬ್ಯಾಂಕಿನ ಗ್ರಾಹಕರು ಖಾತೆಗಳ ಬ್ಯಾಲೆನ್ಸ್‌, ಮಿನಿ ಪಾಸ್‌ ಬುಕ್‌, ಬ್ಯಾಂಕಿನ ಸಾಮಾನ್ಯ ಮಾಹಿತಿಗಳನ್ನು ಪಡೆಯಬಹುದು ಎಂದು ಆರ್‌ಎಂಎಂ ಹೇಳಿದರು.

- - - ಕೋಟ್‌ ಕಾಂಗ್ರೆಸ್‌ ಸರ್ಕಾರ ರೈತರ ಪರ ಕಾಳಜಿವುಳ್ಳ ಸರ್ಕಾರವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಬರಗಾಲ ಪರಿಸ್ಥಿತಿಯಲ್ಲೂ ಸುಸ್ತಿ ಸಾಲದ ಅಸಲು ಕಟ್ಟಿದ್ದರೆ ಬಡ್ಡಿ ಮನ್ನಾ ಮಾಡುವ ರೈತರ ಪರ ಕಾರ್ಯಕ್ರಮವನ್ನು ಮಾಡಿದ್ದಾರೆ

- ಆರ್‌.ಎಂ.ಮಂಜುನಾಥ್‌ ಗೌಡ, ಅಧ್ಯಕ್ಷ, ಡಿಸಿಸಿ ಬ್ಯಾಂಕ್‌, ಶಿವಮೊಗ್ಗ.

- - - -27ಎಸ್‌ಎಂಜಿಕೆಪಿ06:

ಶಿವಮೊಗ್ಗದ ಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಬುಧವಾರ 2024ರ ಕ್ಯಾಲೆಂಡರ್ ಹಾಗೂ ಡೈರಿಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥಗೌಡ ಬಿಡುಗಡೆಗೊಳಿಸಿದರು. ಉಪಾಧ್ಯಕ್ಷ ಎಚ್‌.ಎಸ್‌. ಷಡಕ್ಷರಿ, ನಿರ್ದೆಶಕರಾದ ಜಿ.ಎಂ.ಸುಧೀರ್‌, ಎಚ್‌.ಕೆ.ವೆಂಕಟೇಶ್‌, ಎಂ.ಎಂ.ಪರಮೇಶ್‌, ದುಗ್ಗಪ್ಪ ಗೌಡ, ದಶರಥ ಗೌಡ, ಸಿಇಓ ವಾಸುದೇವ್ ಮತ್ತಿತರರು ಇದ್ದಾರೆ.