ಸಾರಾಂಶ
ಕನ್ನಡಪ್ರಭ ವಾರ್ತೆ ಗುಡಿಬಂಡೆ
ರಾಜ್ಯ ಸರ್ಕಾರವು ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೆ ಸಹ ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರಲಾಗಿರುತ್ತದೆ. ಇದರಿಂದ ಅನಧಿಕೃತ ಸ್ವತ್ತು (ಬಿ-ಖಾತಾ)ಗಳ ಮಾಲೀಕರು ತಮ್ಮ ಸ್ವತಿನ ಕಂದಾಯವನ್ನು ಪಾವತಿಸಿ, ಇ-ಖಾತಾ ಪಡೆಯಬಹುದಾಗಿದೆ. ಈ ಅಭಿಯಾನವನ್ನು ಪಟ್ಟಣದ ವ್ಯಾಪ್ತಿಯ ಜನರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಪಪಂ ಮುಖ್ಯಾಧಿಕಾರಿ ಸಭಾ ಶಿರೀನ್ ತಿಳಿಸಿದರು.ಸ್ಥಳೀಯ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಇ ಖಾತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನ, ಮನೆ, ಸೇರಿದಂತೆ ಹಲವು ರೀತಿಯ ಆಸ್ತಿಗಳನ್ನು ಹೊಂದಿರುವವರು ದಾಖಲೆ ಸಮೇತ ನಗರಸಭೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಕೂಡಲೇ ಇ ಖಾತಾ ಮಾಡಿಕೊಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಇದನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು.
ಮೂರು ತಿಂಗಳ ಕಾಲ ಖಾತೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಖಾತೆ ಮಾಡಿಸಿಕೊಳ್ಳಲು ಯಾವುದೇ ಮಧ್ಯವರ್ತಿಗಳನ್ನು ನಂಬಬೇಡಿ ನಂಬಿದಲ್ಲಿ ಮೋಸ ಹೋಗುತ್ತೀರಿ ಖಾತೆ ಮಾಡಲು ನೇರವಾಗಿ ಸಾರ್ವಜನಿಕರೇ ಪಟ್ಟಣ ಪಂಚಾಯತಿ ಕಚೇರಿಗೆ ತೆರಳಿ ದಾಖಲೆಗಳನ್ನು ಸಲ್ಲಿಸಿ ಕೂಡಲೇ ನಿಮ್ಮ ಮನೆಗಳ ಹಾಗೂ ಖಾಲಿ ನಿವೇಶನಗಳನ್ನು ಖಾತೆಗಳನ್ನು ಮಾಡಿಕೊಡಲಾಗುತ್ತದೆ ಎಂದರು.ಇದೇ ಸಮಯದಲ್ಲಿ ಪ.ಪಂ ಅಧ್ಯಕ್ಷ ವಿಕಾಸ್ ಮಾತನಾಡಿ, ರಾಜ್ಯ ಸರ್ಕಾರ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇ ಖಾತಾ ಅಭಿಯಾನ ಆರಂಭಿಸಿದೆ. ನ್ಯಾಯಾಲದಲ್ಲಿರುವ ಆಸ್ತಿಗಳ ಖಾತೆ ಹೊರತು ಪಡಿಸಿ ಉಳಿದ ಯಾವುದೇ ರೀತಿಯ ನಿವೇಶನ, ಮನೆಗಳು ಇದ್ದರೂ ಅದಕ್ಕೆ ಸಂಬಂದಿಸಿದ ದಾಖಲೆಗಳನ್ನು ತೆಗೆದುಕೊಂಡು ಪಪಂ ಕಚೇರಿಗೆ ಭೇಟಿ ನೀಡಿ ತಮ್ಮ ಆಸ್ತಿಯನ್ನು ಖಾತೆ ಮಾಡಿಸಿಕೊಳ್ಳಬಹುದು. ಈ ಸಂಬಂಧ ಸಹಾಯವಾಣಿಯನ್ನು ಸಹ ತೆರೆಯಲಾಗಿದೆ. ಪಟ್ಟಣದ ವ್ಯಾಪ್ತಿಯ ಸಾರ್ವಜನಿಕರು ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಮಯ ವ್ಯರ್ಥ ಮಾಡದೇ ಕೂಡಲೇ ನಿಮ್ಮ ನಿಮ್ಮ ಆಸ್ತಿಗಳಿಗೆ ಎ ಖಾತ ಅಥವಾ ಬಿ ಖಾತ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಸ್ವತ್ತಿನ ಮಾಲೀಕರು ತಮ್ಮ ನಗರ ಸ್ಥಳೀಯ ಸಂಸ್ಥೆಗೆ ಭೇಟಿ ನೀಡಿ, ಸ್ವತ್ತಿನ ಮಾಲೀಕತ್ವದ ದಾಖಲೆಗಳಾದ ನೋಂದಾಯಿತ ಪತ್ರಗಳು, ಚಾಲ್ತಿ ಸಾಲಿನವರೆಗೆ ಕಂದಾಯ ಪಾವತಿ ರಶೀದಿ, ಋಣಭಾರ ಪ್ರಮಾಣ ಪತ್ರ, ಹಾಗೂ ಮಾಲೀಕರ ಪೋಟೊ, ಆಧಾರ ಕಾರ್ಡ್, ಸಲ್ಲಿಸಿ 07 ದಿನಗಳ ಒಳಗಾಗಿ ಇ-ಖಾತಾ ಪಡೆಯಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿರುತ್ತದೆ. ಈ ಸಮಯದಲ್ಲಿ ಪಪಂ ಸಿಬ್ಬಂದಿ ಬಾಲಪ್ಪ ಸೇರಿದಂತೆ ಹಲವರು ಇದ್ದರು.