ಆರೋಗ್ಯ ಶಿಬಿರದ ಸದುಪಯೋಗ ಪಡೆಯಿರಿ

| Published : Feb 28 2025, 12:46 AM IST

ಸಾರಾಂಶ

ಬಂಧೀಖಾನೆಯಲ್ಲಿರುವ ಕೈದಿಗಳಿಗೆ ಹಲವು ಸಂಘಸಂಸ್ಥೆಗಳು ಉಚಿತವಾಗಿ ಏರ್ಪಡಿಸುವ ಆರೋಗ್ಯ ಶಿಬಿರದ ಸದುಪಯೋಗಪಡಿಸಿಕೊಳ್ಳಿ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಹೇಮಾವತಿಯವರು ತಿಳಿಸಿದರು. ಕ್ಯಾನ್ಸರ್‌ನಂತಹ ಕಾಯಿಲೆಗಳು ಸುಲಭವಾಗಿ ಗೊತ್ತಾಗುವುದಿಲ್ಲ ಅದು ಪತ್ತೆಯಾಗುವ ವೇಳೆಗೆ ನಾಲ್ಕನೇ ಐದನೆಯ ಹಂತ ತಲುಪಿ ಗುಣಮುಖರಾಗದೆ ರೋಗದೊಂದಿಗೆ ಸೆಣಸಾಡುವ ಮೂಲಕ ಯಾತನೆಯನ್ನು ಅನುಭವಿಸಬೇಕಾಗುವುದು. ಆದುದರಿಂದ ಉತ್ತಮ ಅಭ್ಯಾಸಗಳೊಂದಿಗೆ ಆರೋಗ್ಯ ಉತ್ತಮವಾಗಿರಿಸಿಕೊಳ್ಳುವುದು ಅಗತ್ಯ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಆರೋಗ್ಯವೇ ಭಾಗ್ಯಎಂಬ ನಾಣ್ಣುಡಿಯಂತೆ ನಾವು ಏನೂ ಕಳೆದುಕೊಂಡರೂ ಗಳಿಸಬಹುದು ಆದರೆ ಆರೋಗ್ಯವನ್ನಲ್ಲ. ಈ ನಿಟ್ಟಿನಲ್ಲಿ ಬಂಧೀಖಾನೆಯಲ್ಲಿರುವ ಕೈದಿಗಳಿಗೆ ಹಲವು ಸಂಘಸಂಸ್ಥೆಗಳು ಉಚಿತವಾಗಿ ಏರ್ಪಡಿಸುವ ಆರೋಗ್ಯ ಶಿಬಿರದ ಸದುಪಯೋಗಪಡಿಸಿಕೊಳ್ಳಿ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಹೇಮಾವತಿಯವರು ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಕಾರಾಗೃಹ, ವಿ ಕೇರ್‌ಡೆಂಟಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕೆ ಆರ್ ಪುರಂ, ಹಾಸನ, ಕೆಂಚಾಂಬ ಚಾರಿಟಬಲ್ ಟ್ರಸ್ಟ್, ಕೆ ಈ ಎಲ್, ದಂತ ವೈದ್ಯಕೀಯ ಕಾಲೇಜು, ಬೆಂಗಳೂರು, ಇವರ ಸಹಯೋಗದಲ್ಲಿ ಜಿಲ್ಲಾ ಕಾರಾಗೃಹದಲ್ಲಿ ಬಂಧಿವಾಸಿಗಳಿಗೆ ಏರ್ಪಡಿಸಲಾಗಿದ್ದ ದಂತ ಕ್ಯಾನ್ಸರ್ ಪತ್ತೆ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರಾಗೃಹಗಳಿಗೆ ಬಂದಿರುವ ಮುಕ್ಕಾಲು ಪಾಲು ಬಂಧಿಗಳು ಸಮಯದ ಒತ್ತಡಕ್ಕೆ ಸಿಲುಕಿಯೋ, ಆಕಸ್ಮಿಕವಾಗಿ ಆಗುವ ತಪ್ಪುಗಳಿಂದ ಅಥವಾ ಬೇರೊಬ್ಬರ ಪ್ರಚೋದನೆಯಿಂದ ಬಂದಿರಬಹುದು ಆದರೆ ಮುಂದೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಮೂಲಕ ಹೊಸ ಜೀವನವನ್ನು ಆರಂಭಿಸಲು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದು ಕೂಡ ಮುಖ್ಯವಾಗಿದೆ ಎಂದರು.

ಕ್ಯಾನ್ಸರ್‌ನಂತಹ ಕಾಯಿಲೆಗಳು ಸುಲಭವಾಗಿ ಗೊತ್ತಾಗುವುದಿಲ್ಲ ಅದು ಪತ್ತೆಯಾಗುವ ವೇಳೆಗೆ ನಾಲ್ಕನೇ ಐದನೆಯ ಹಂತ ತಲುಪಿ ಗುಣಮುಖರಾಗದೆ ರೋಗದೊಂದಿಗೆ ಸೆಣಸಾಡುವ ಮೂಲಕ ಯಾತನೆಯನ್ನು ಅನುಭವಿಸಬೇಕಾಗುವುದು. ಆದುದರಿಂದ ಪ್ರತಿಯೊಬ್ಬರೂ ಉತ್ತಮ ಅಭ್ಯಾಸಗಳೊಂದಿಗೆ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಕೀಲರ ಸಂಘದ ಅಧ್ಯಕ್ಷ ಡಿ.ಟಿ ಪ್ರಸನ್ನ ಅವರು ಮಾತನಾಡಿ, ಸಮಾಜಮುಖಿಯಾಗಿ ಕೆಲಸ ಮಾಡುವ ಮನೋಭಾವ ಎಲ್ಲರಲ್ಲಿಯೂ ಬರುವುದಿಲ್ಲ. ಕೆಲವೊಂದು ಜನರಲ್ಲಿ ಇಂತಹ ಗುಣವಿದ್ದು ಡಾ. ವೈಭವ್ ರವರು ಅಂತಹ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಕೆಲವೊಮ್ಮೆ ನಮಗೆ ತಿಳಿದೋ ತಿಳಿಯದೆ ಆಗುವ ಕೆಲವೊಂದು ತಪ್ಪುಗಳಿಂದ ನಾವು ಕ್ಯಾನ್ಸರ್‌ನಂತಹ ಭೀಕರ ರೋಗಕ್ಕೆ ತುತ್ತಾಗಿ ಅದರಿಂದ ಹೊರಗೆ ಬರಲಾಗದೆ ಸಾವನ್ನಪ್ಪಬಹುದು, ಆಗಿಂದಾಗ್ಗೆ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯದ ಮೇಲೆ ನಿಗಾ ಇರಿಸಿಕೊಳ್ಳಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿ ಕೇರ್ ಡೆಂಟಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ವೈಭವ್ ಅವರು ಮಾತನಾಡಿ, ಕ್ಯಾನ್ಸರ್‌ನಂತಹ ಭೀಕರತೆಯು ಪ್ರಸ್ತುತ ಜನಜೀವನ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿದ್ದು ಇದಕ್ಕೆ ನಾವು ರೂಢಿಸಿಕೊಂಡ ಅಭ್ಯಾಸಗಳೇ ಕಾರಣವಾಗಿವೆ. ಹಲ್ಲಿನ ಅಥವಾ ಬಾಯಿಯ ಕ್ಯಾನ್ಸರ್‌ಗೆ ಮದ್ಯಪಾನ ಮತ್ತು ಧೂಮಪಾನ, ತಂಬಾಕು ಉತ್ಪನ್ನಗಳನ್ನು ಜಗಿಯುವುದು ಸಹಜವಾದ ಕಾರಣವಾಗಿದೆ ಎಂದರು.

ಕ್ಯಾನ್ಸರ್ ಪತ್ತೆ ಹಚ್ಚುವಲ್ಲಿ ಕೆಂಪು ಮಚ್ಚೆ ಮತ್ತು ಬಿಳಿ ಮಚ್ಚೆಯೆಂದು ಗುರುತಿಸಬಹುದಾಗಿದ್ದು, ಪ್ರಾಥಮಿಕ ಹಂತದಲ್ಲಿಯೇ ಕ್ಯಾನ್ಸರ್ ಗುರುತಿಸುವಿಕೆ ಮತ್ತು ಚಿಕಿತ್ಸೆಯೇ ಇದಕ್ಕೆ ಸೂಕ್ತವಾದ ಮಾರ್ಗವಾಗಿದೆ. ನಾವು ನಮ್ಮ ಸಂಸ್ಥೆಯಿಂದ ವರ್ಷಕ್ಕೆ ರಾಷ್ಟ್ರವ್ಯಾಪಿ ಮೂವತ್ತರಿಂದ ಮೂವತ್ತೈದು ಸಾವಿರ ಜನರನ್ನು ಹಲ್ಲಿನ ಕ್ಯಾನ್ಸರ್ ಪತ್ತೆ ಹಚ್ಚುವ ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದೆ ಮತ್ತು ಪತ್ತೆಯಾದ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಕಾರಾಗೃಹದ ಅಧೀಕ್ಷಕ ಪರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಾಕ್ಷಾಯಿಣಿ ಜಿ.ಕೆ , ಬಂಧೀಖಾನೆಯ ಕಾನೂನು ಸಲಹಾ ಕೇಂದ್ರದ ಪ್ಯಾನಲ್ ವಕೀಲರಾದ ರಾಮ, ನ್ಯಾಯಾಲಯ ಕಾನೂನು ಸಲಹಾ ಕೇಂದ್ರದ ಪ್ಯಾನಲ್ ವಕೀಲರಾದ ಎಸ್.ಆರ್ ಮನು, ಎ.ಆರ್.ಟಿ ಕೇಂದ್ರದ ಕಾನೂನು ಸಲಹಾ ಕೇಂದ್ರದ ಪ್ಯಾನಲ್ ವಕೀಲರಾದ ಜಿ.ಆರ್ ಸುಗುಣ, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.