ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಆರೋಗ್ಯ ಇಲಾಖೆ ಮತ್ತು ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಡೆಯುವ ರಕ್ತದಾನ ಶಿಬಿರ ಮತ್ತು ಆರೋಗ್ಯ ಉಚಿತ ತಪಾಸಣಾ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಂಡೆನಾಳು ವೈದ್ಯಾಧಿಕಾರಿ ಡಾ. ಐಶ್ವರ್ಯ ಸಾರ್ವಜನಿಕರಿಗೆ ಕರೆ ನೀಡಿದರು.ವಿಶ್ವ ರಕ್ತದಾನ ದಿನಾಚರಣೆಯ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಂಡೆನಾಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ಇವರ ಸಹಯೋಗದೊಂದಿಗೆ ಗಂಡಸಿ ಹ್ಯಾಂಡ್ ಪೋಸ್ಟ್ ನಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂಥ ಶಿಬಿರಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಆಯೋಜಿಸಲಾಗಿರುತ್ತದೆ. ವಿವಿಧ ಬಗೆಯ ವೈದ್ಯರು ಒಂದೆಡೆ ದೊರಕುವುದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು, ರಕ್ತದಾನ ಬಹಳ ಮಹತ್ತರವಾದದ್ದು ಎಂದು ತಿಳಿಸಿದರು.
ಶಿಬಿರದ ಉದ್ಘಾಟನೆ ನೆರವೇರಿಸಿದ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಶಬ್ಬೀರ್ ಅಹ್ಮದ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿಶ್ವ ರಕ್ತದಾನ ದಿನಾಚರಣೆ ಆಚರಿಸುತ್ತಿರುವುದು ಖುಷಿಯ ವಿಚಾರ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರವನ್ನು ವ್ಯವಸ್ಥಿತವಾಗಿ ಆಯೋಜಿಸಿರುವುದು ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿ, ಜಿಲ್ಲೆಯಾದ್ಯಂತ ರೆಡ್ ಕ್ರಾಸ್ ಸಂಸ್ಥೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ತಿಳಿಸಿಕೊಟ್ಟರು,ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಭರತ್ ಕುಮಾರ್, ವಿಶ್ವ ರಕ್ತ ದಾನಿಗಳ ದಿನಾಚರಣೆ ಆಚರಿಸುತ್ತಿರುವುದು ನಮಗೆ ಹಾಗೂ ನಮ್ಮ ಸಂಸ್ಥೆಗೆ ಹೆಮ್ಮೆಯ ವಿಚಾರ. ರಕ್ತದಾನಿಗಳು ಎಂದರೆ ಇನ್ನೊಂದು ಜೀವಕ್ಕೆ ಜೀವ ದಾನಿಗಳು, ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಕೃತಕವಾಗಿ ರಕ್ತ ಉತ್ಪಾದಿಸಲು ಸಾಧ್ಯವಾಗಿಲ್ಲ, ಆದ್ದರಿಂದ ಒಬ್ಬ ಸಹೃದಯಿ ರಕ್ತದಾನ ಮಾಡಿದರೆ ಮೂರು ಜನರ ಜೀವ ಉಳಿಸಲು ಸಾಧ್ಯ, ಈ ನಿಟ್ಟಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕದ ವತಿಯಿಂದ ಜಿಲ್ಲೆಯಾದ್ಯಂತ ಹಲವು ಬಾರಿ ರಕ್ತದಾನ ಮಾಡಿರುವವರನ್ನು ಗುರುತಿಸಿ, ಇಂದು 8 ರಕ್ತ ದಾನಿಗಳಿಗೆ ಸಂಸ್ಥೆಯ ವತಿಯಿಂದ ಸನ್ಮಾನ ಹಾಗೂ ಅಭಿನಂದಿಸಿದ್ದೇವೆ. ಇನ್ನೂ ಹೆಚ್ಚಿನ ರೀತಿ ಸಾರ್ವಜನಿಕರ ಸೇವೆ ಮಾಡುವಲ್ಲಿ ರೆಡ್ ಕ್ರಾಸ್ ಸಂಸ್ಥೆಯು ನಿರಂತರವಾಗಿ ತನ್ನ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸುತ್ತದೆ ಎಂದು ತಿಳಿಸಿದರು,
ಕಾರ್ಯಕ್ರಮದಲ್ಲಿ ರಕ್ತದಾನಿಗಳಾದ ಮಂಜು ಟಿ.ಪಿ., ಗಿರೀಶ್ ಎಂ.ವಿ., ಮಂಜೇಗೌಡ ಎಚ್.ವಿ., ಸುರೇಶ್ ನಾಯಕ್, ನವೀನ್, ಮಂಜುನಾಥ್, ಸೋಮಶೇಖರ್ ಎಚ್.ಸಿ., ಸಂತೋಷ್ ಪಿ.ಎನ್ ಅವರು ಸನ್ಮಾನಕ್ಕೆ ಭಾಜನರಾದರು.ಈ ಕಾರ್ಯಕ್ರಮದಲ್ಲಿ 216 ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಹಾಗೂ 52 ಜನರು ರಕ್ತದಾನ ಮಾಡಿದರು.
ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಗಿರೀಶ್ ಎಂ. ವಿ ನಿರ್ದೇಶಕರು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಹಾಸನ ,ಜಬಿವುಲ್ಲಾ ಬೇಗ್ ಕಾರ್ಯದರ್ಶಿ ತಾಲೂಕು ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ, ಕಿಶೋರ್ ಕುಮಾರ್ ಸಿ. ಎಸ್. ಖಜಾಂಚಿ, ತಾಲೂಕು ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ, ಭೀಮ್ ರಾಜ್ ನಿರ್ದೇಶಕರು, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಹಾಸನ, ರಾಮಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳು ಅರಸಿಕೆರೆ ತಾಲೂಕು, ರಾಜಪ್ಪ ಡಿ.ಪಿ. ನಿರ್ದೇಶಕರು, ತಾಲೂಕು ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ, ಡಾ. ಗುಲ್ಜರ್ ನಾರಾಯಣ ಆಸ್ಪತ್ರೆ, ಮೈಸೂರ್, ಉದಯ ಶಂಕರ್, ನಿರ್ದೇಶಕರು ತಾಲೂಕು ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ, ಭಾರತಿ, ತನುಜ ಪ್ರಯೋಗಶಾಲಾ ತಜ್ಞರು ಹಾಗೂ ಆಸ್ಪತ್ರೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.