ಅವಕಾಶ ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡಿ

| Published : Sep 02 2024, 02:07 AM IST / Updated: Sep 02 2024, 02:08 AM IST

ಸಾರಾಂಶ

ಕಲೆಯನ್ನು ಬೆಳೆಸಿ, ಉಳಿಸಿ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಕೆ.ಎಸ್. ಆಗ್ರೋ ಕೆಮಿಕಲ್ಸ್ ಶಶಿಧರ ಶೆಟ್ಟಿ ಹೇಳಿದರು.

ತುಮಕೂರು: ಕಲೆಯನ್ನು ಬೆಳೆಸಿ, ಉಳಿಸಿ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಕೆ.ಎಸ್. ಆಗ್ರೋ ಕೆಮಿಕಲ್ಸ್ ಶಶಿಧರ ಶೆಟ್ಟಿ ಹೇಳಿದರು.ನಗರದ ಕನ್ನಡ ಭವನದಲ್ಲಿ ದಕ್ಷಿಣ ಕನ್ನಡ ಮಿತ್ರ ವೃಂದದಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ರಾಧಾ ಕೃಷ್ಣ ವೇಷ ಭೂಷಣ ಸ್ಪರ್ಧೆ, ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ತುಮಕೂರು ಜಿಲ್ಲೆಗೆ ಶೈಕ್ಷಣಿಕ ನಾಡು ಎಂದ ಹೆಸರು ಇದೆ. ಇಲ್ಲಿ ಓದುತ್ತಿರುವ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂಬ ನಂಬಿಕೆ ನಮ್ಮದು. ಇದರ ಸದುಪಯೋಗವನ್ನು ನೀವೆಲ್ಲರೂ ಪಡೆದುಕೊಳ್ಳಬೇಕು. ಹಿರಿಯ ಸದಸ್ಯರಿಗೆ ಸನ್ಮಾನ ಮಾಡಿರುವುದು ಖುಷಿಯ ವಿಚಾರ. ಹಿರಿಯರನ್ನು ಗೌರವದಿಂದ ನೋಡಿಕೊಳ್ಳಿ. ನಾವು ಮಕ್ಕಳಾಗಿದ್ದಾಗ ಇಂತಹ ಅವಕಾಶಗಳು ಕಡಿಮೆ ಇದ್ದವು. ಆದರೆ ಈಗ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲಾ ರೀತಿಯ ಅವಕಾಶಗಳು ಇವೆ ಎಂದರು. ಕಾಫ್‌ರಾಡ್ ಇಂಡಸ್ಟ್ರಿಜ್‌ ಮಾಲೀಕ ಎಚ್.ಜಿ.ಚಂದ್ರಶೇಖರ್ ಮಾತನಾಡಿ, ನನ್ನ ಪ್ರತಿ ಕೆಲಸದಲ್ಲಿಯೂ ನನ್ನ ಧರ್ಮಪತ್ನಿಯ ಪಾಲು ಇದೆ. ಹಾಗಾಗಿಯೇ ಇಂದು ದಕ್ಷಿಣ ಕನ್ನಡ ಮಿತ್ರ ವೃಂದ ದಂಪತಿಗಳನ್ನು ಸನ್ಮಾನಿಸಿದೆ. ಒರ್ವ ಉದ್ಯಮಿಯಾಗಿ ನಾನು ಮಾಡಿದ ಕೆಲಸಗಳನ್ನು ಗುರುತಿಸಿ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇಂತಹ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲು ನನಗೆ ಮತ್ತಷ್ಟು ಪ್ರೇರಣೆಯಾಗಿದೆ ಎಂದರು.ಉದ್ಯಮಿ ಸದಾಶಿವ ಅಮಿನ್ ಮಾತನಾಡಿ, ದಕ್ಷಿಣ ಭಾಗದ ಜನರು ಹೊಟ್ಟೆ ಪಾಡಿಗಾಗಿ ಇಡೀ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ದಕ್ಷಿಣ ಕನ್ನಡ ಮಿತ್ರ ವೃಂದವನ್ನು ರಚಿಸಿಕೊಂಡು, ಒಗ್ಗಟ್ಟು ಕಾಪಾಡಿಕೊಂಡು, ನಮ್ಮ ರಕ್ಷಣೆಯ ಜೊತೆಗೆ ಸಮುದಾಯದ ಬೆಳವಣಿಗಗೂ ಸಹಕಾರಿಯಾಗಿದ್ದೇವೆ. ದಕ್ಷತೆ, ಪ್ರಾಮಾಣಿಕತೆ ಮತ್ತು ಪರಿಶ್ರಮ ಎಂಬ ಮೂರು ಮಂತ್ರಗಳನ್ನು ಮೈಗೂಡಿಸಿಕೊಂಡು ಎಲ್ಲಾ ರಂಗದಲ್ಲಿಯೂ ಮುನ್ನೆಡೆಯುತಿದ್ದೇವೆ. ಹಣದಿಂದ ಎಲ್ಲವನ್ನು ಗಳಿಸಲು ಸಾಧ್ಯವಿಲ್ಲ. ಹಾಗಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಯಶಸ್ಸುಗಳಿಸಲು ಸಾಧ್ಯ ಎಂದರು. ದಕ್ಷಿಣ ಕನ್ನಡ ಮಿತ್ರ ವೃಂದದ ಜಿಲ್ಲಾಧ್ಯಕ್ಷ ಅಮರನಾಥಶೆಟ್ಟಿ ಮಾತನಾಡಿ, ಕಳೆದ 38 ವರ್ಷಗಳಿಂದ ನಮ್ಮ ಸಂಘದವತಿಯಿಂದ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ. ಮಕ್ಕಳಲ್ಲಿ ಶೈಕ್ಷಣಿಕ ವಾತಾವರಣ ಸೃಷ್ಟಿಸಲು ಪ್ರತಿಭಾ ಪುರಸ್ಕಾರ, ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುತಿದ್ದು, ಇದೇ ಮೊದಲ ಬಾರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಸಹ ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದೆ. ಕಣ್ಣಿನ ಪೊರೆ ಇದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ಸಹ ಸಂಘದ ವತಿಯಿಂದ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದ ವಿಶೇಷವಾಗಿ ದಕ್ಷಿಣ ಕನ್ನಡ ಮಿತ್ರ ವೃಂದದಿಂದ ಇದೇ ಮೊದಲು ಬಾರಿಗೆ ರತಿ ಕಲ್ಯಾಣ ಎಂಬ ಯಕ್ಷಗಾನ ಪ್ರಸಂಗವನ್ನು ಸಹ ಆಯೋಜಿಸಲಾಗಿದೆ. ಕರಾವಳಿಯ ಪ್ರಸಿದ್ದ ಕಲಾವಿದರು ಈ ಪ್ರದರ್ಶನವನ್ನು ನಡೆಸಿ ಕೊಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಇಬ್ಬರನ್ನು ಸನ್ಮಾನಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ದಕ್ಷಿಣ ಕನ್ನಡ ಜನರಿದ್ದು, ಇವರಲ್ಲಿ ಮಿತ್ರ ವೃಂದದ ಸದಸ್ಯತ್ವ ಪಡೆದವರ ಸಂಖ್ಯೆ ತೀರ ವಿರಳ. ಹಾಗಾಗಿ ಎಲ್ಲರೂ ಸದಸ್ಯತ್ವ ಪಡೆಯುವ ಮೂಲಕ ನಮ್ಮ ಸಂಘಟನೆಯನ್ನು ಹೆಚ್ಚಿಸಿಕೊಂಡು, ಸರ್ಕಾರದ ಸವಲುತ್ತುಗಳ ಪಡೆಯಲು ಸಾಧ್ಯವಾಗುತ್ತದೆ. ದಕ್ಷಿಣ ಕನ್ನಡ ಮಿತ್ರವೃಂದ ಪತ್ತಿನ ಸೌಹಾರ್ಧ ಸಹಕಾರ ಸಂಘ ಸಹ ತೆರೆದಿದ್ದು, ಎಲ್ಲರೂ ಸದಸ್ಯತ್ವ ಪಡೆದರೆ ಹೆಚ್ಚಿನ ಅನುಕೂಲ ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಎಲ್ಲರೂ ಒಂದು ವೇದಿಕೆ ಬರಬೇಕೆಂದು ಮನವಿ ಮಾಡಿದರು. ಕೃಷ್ಣಾ ಜನ್ಮಾಷ್ಠಮಿ ಪ್ರಯುಕ್ತ ಏರ್ಪಡಿಸಿದ್ದ ರಾಧಾ ಕೃಷ್ಣ ವೇಷಧಾರಿಗಳ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ದಕ್ಷಿಣ ಕನ್ನಡ ಮಿತ್ರ ವೃಂದದ ಸದಸ್ಯರುಗಳ ಕುಟುಂಬದ ಮಕ್ಕಳನ್ನು ಅಭಿನಂದಿಸಲಾಯಿತು.

ಯಕ್ಷದೀವಿಗೆ ತುಮಕೂರು ವತಿಯಿಂದ ರತಿ ಕಲ್ಯಾಣ ಎಂಬ ಯಕ್ಷಗಾನ ಪ್ರಸಂಗವನ್ನು ಹಮ್ಮಿಕೊಳ್ಳಲಾಗಿತ್ತು. ಹಿಮ್ಮೇಳದಲ್ಲಿ ಶ್ರೀಮತಿ ಅಮೃತ ಅಡಿಗ, ಅವಿನಾಶ್ ಬೈಪಾಡಿತ್ತಾಯ, ಕೌಶಿಕ್ ರಾವ್ ಕಾರ್ಯ ನಿರ್ವಹಿಸಿದ್ದರು. ಹಿರಿಯ ಉದ್ಯಮಿಗಳಾದ ಬಾಲಕೃಷ್ಣ ಭಂಡಾರಿ ಮತ್ತು ನಿಮರ್ಲ ಹಾಗೂ ಹೆಚ್.ಜಿ.ಚಂದ್ರಶೇಖರ್ ಮತ್ತು ಶಶಿಕಲ ದಂಪತಿಗಳನ್ನು ಅಭಿನಂದಿಸಲಾಯಿತು. ಉದ್ಯಮಿ ವಿ.ಬಿ.ಮೊರೀಸ್, ವೈದ್ಯರಾದ ದುರ್ಗಾದಾಸ್ ಅಸ್ರಣ್ಣ, ದಕ್ಷಿಣ ಕನ್ನಡ ಮಿತ್ರ ವೃಂದದ ಕಾರ್ಯದರ್ಶಿ ವೆಂಕಟೇಶ್ ಎಂ..ಎಸ್.ಕಾರಂತ್, ಉಪಾಧ್ಯಕ್ಷ ಸುಧೀರ್ ಹೆಗ್ಡೆ, ವೆಂಕಟೇಶ್ ಕಾರಂತ ಎಂ.ಎಸ್, ಖಜಾಂಚಿ ನರಸಿಂಹನಾಯಕ್, ಜಂಟಿ ಕಾರ್ಯದರ್ಶಿ ಸುಶೀಲಾ ರಮೇಶ್, ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಭಾಗವಹಿಸಿದ್ದರು.