ಸಾರಾಂಶ
ಕೆಪೆಕ್ ಸಂಸ್ಥೆಯಿಂದ ಜಿಲ್ಲಾ ಮಟ್ಟದ ಕಾರ್ಯಾಗಾರಕ್ಕೆ ಚಾಲನೆ ಕನ್ನಡಪ್ರಭ ವಾರ್ತೆ ಹೊಸಪೇಟೆರೈತರು ಬೆಳೆದ ಬೆಳೆಗಳಿಗೆ ಉತ್ತಮ ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಒದಗಿಸುವಲ್ಲಿ ಸಂಸ್ಕರಣೆ ಪ್ರಮುಖವಾಗಿದೆ. ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಂಡು ಸಂಸ್ಕರಣಾ ಉದ್ದಿಮೆ ಆರಂಭಿಸಿದರೆ ಪ್ರಗತಿ ಸಾಧ್ಯ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ ಹಾಗೂ ಕೆಪೆಕ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಮತ್ತು ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಬುಧವಾರ ಮಾತನಾಡಿದರು.
ಕೃಷಿ ಭೂಮಿ ಕಡಿಮೆಯಾಗಿ ಆಹಾರ ಉತ್ಪಾದನೆ ಕೊರತೆಯಾಗದೆಂಬುದು ಹುಸಿಯಾಗಿದೆ. ಕಡಿಮೆ ಭೂಮಿಯಲ್ಲಿ ಹೆಚ್ಚು ಆಹಾರ ಉತ್ಪಾದನೆಗೊಳಿಸಿರುವುದಕ್ಕೆ ರೈತರು ಮತ್ತು ಕೃಷಿ ವಿಜ್ಞಾನಿಗಳು ಯಶಸ್ಸು ಕಂಡಿದ್ದಾರೆ. ಬೆಳೆದ ಬೆಳೆಯನ್ನು ಸಂರಕ್ಷಿಸುವಲ್ಲಿ ಸಂಸ್ಕರಣೆ ಸವಾಲಾಗಿ ಪರಿಣಮಿಸಿದೆ. ಆತ್ಮ ನಿರ್ಭರ ಭಾರತ ಅಭಿಯಾನದಡಿ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗೆ ರೈತರಿಗೆ ಅವಕಾಶ ನೀಡಲಾಗಿದೆ ಎಂದರು.ಈ ಯೋಜನೆಯಡಿಯಲ್ಲಿ ಶೇ.೫೦ರಷ್ಟು ಅಥವಾ ಗರಿಷ್ಠ ₹೧೫ ಲಕ್ಷ ಸಹಾಯಧನ ಪಡೆಯಲು ಅವಕಾಶವಿದೆ. ರೈತರು ಬೆಳೆದ ಬೆಳೆಗಳನ್ನು ಸಂಸ್ಕರಿಸಿ ತಮ್ಮದೇ ಬ್ರಾಂಡಿಂಗ್ ಮೂಲಕ ಮಾರುಕಟ್ಟೆಯನ್ನು ತಲುಪಲು ಯೋಜನೆಯ ಸದುಪಯೋಗಪಡೆಯಬೇಕಿದೆ. ಪ್ರಾದೇಶಿಕ ಮತ್ತು ಸಿರಿಧಾನ್ಯಗಳ ಬೆಳೆಗಳನ್ನು ಸಂರಕ್ಷಿಸಿ ನೇರ ಮಾರುಕಟ್ಟೆ ಸೃಷ್ಟಿಸಿಕೊಂಡರೆ ಆರ್ಥಿಕವಾಗಿ ಸಬಲತೆ ಪಡೆಯಬಹುದು ಎಂದರು.ಜಿಪಂ ಸಿಇಒ ಅಕ್ರಮ್ ಷಾ ಮಾತನಾಡಿ, ಕಿರು ಆಹಾರ ಸಂಸ್ಕರಣಾ ಘಟಕಗಳ ಆರಂಭಿಸಲು ಬ್ಯಾಂಕ್‌ಗಳಿಂದ ಆರ್ಥಿಕ ಸಹಾಯ ನೀಡುವುದು ಮುಖ್ಯವಾಗಿದೆ. ಘಟಕ ನಿರ್ಮಾಣಕ್ಕೆ ಆಸಕ್ತಿ ತೋರುವ ರೈತರಿಗೆ ಸಾಲ ಸೌಲಭ್ಯ ವಿಳಂಬ ಮಾಡದೇ ನೀಡಬೇಕು. ವಿವಿಧ ಇಲಾಖೆಗಳು ಅರ್ಹ ಫಲಾನುಭವಿಗಳಿಗೆ ಆರ್ಥಿಕ ಸೌಲಭ್ಯ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು.ಕೆಪೆಕ್ ವ್ಯವಸ್ಥಾಪಕ ನರ‍್ದೇಶಕ ಶಿವಪ್ರಕಾಶ್ ಮಾತನಾಡಿ, ರೈತರು ಬೆಳೆದ ಆಹಾರ ಬೆಳೆಗಳ ಪರ‍್ಯಾಯ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವಲ್ಲಿ ಕಿರು ಸಂಸ್ಕರಣಾ ಘಟಕಗಳು ಪ್ರಮುಖ ಪಾತ್ರವಹಿಸಲಿವೆ. ಬೇರೆ ಯಾವುದೇ ಕ್ಷೇತ್ರಗಳಿಗಿಂತ ಕೃಷಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರುವುದಿಲ್ಲ. ಕಿರು ಆಹಾರ ಸಂಸ್ಕರಣಾ ಘಟಕ ಆರಂಭಿಸಲು ರಾಜ್ಯಾದ್ಯಂತ ೨೦೦೦ ಘಟಕಗಳಿಗೆ ಬ್ಯಾಂಕ್‌ಗಳಿಂದ ಸಬ್ಸಿಡಿ ಸಹಿತ ಸಾಲ ನೀಡಲಾಗಿದೆ. ಕೋಲ್ಡ್ ಪ್ರೆಸ್ಡ್ ಆಯಿಲ್ ಘಟಕಗಳಿಗೆ ೧೨೦೦ ಘಟಕಗಳಿಗೆ ಸಬ್ಸಿಡಿ ಸಹಿತ ಸಾಲ ನೀಡಲಾಗಿದೆ. ಸಕ್ಕರೆ ಬಳಕೆಯ ಪರ‍್ಯಾಯವಾಗಿ ಬೆಲ್ಲ ಬಳಕೆಗೆ ಪ್ರೋತ್ಸಾಹಿಸಿ ಘಟಕಗಳಿಗೆ ಪ್ರೋತ್ಸಾಹಿಸಲಾಗಿದೆ ಎಂದರು.ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಹಾರ ಕೇಂದ್ರ ಆರಂಭಿಸಿ ಸಿರಿಧಾನ್ಯ ಮಿಲೆಟ್‌ಗಳು ಸೇರಿದಂತೆ ಪ್ರಾದೇಶಿಕ ಉತ್ಪನ್ನಗಳ ಮಾರಾಟಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಕೃಷಿ ಇಲಾಖೆಗಳಿಂದ ಕಿರು ಉತ್ಪನ್ನ ಆಹಾರ ಸಂಸ್ಕರಣಾ ಘಟಕಗಳನ್ನು ಆರಂಭಿಸಿ ಯಶಸ್ಸು ಕಂಡಿರುವ ಯಶೋಗಾಥೆಗಳನ್ನು ಸಂಚಿಕೆ ರೂಪದಲ್ಲಿ ಹೊರತಂದು ಮುಖ್ಯಮಂತ್ರಿಗಳಿಂದ ಬಿಡುಗಡೆಗೊಳಿಸಲು ಚಿಂತನೆ ನಡೆಸಲಾಗಿದೆ ಎಂದರು.ಬಳಿಕ ಕಾರ್ಯಕ್ರಮದಲ್ಲಿ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕ ಆರಂಭಿಸಿ ಯಶಸ್ಸು ಕಂಡಿರುವ ಉದ್ಯಮಿಗಳಾದ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದ ಆನಂದ ಸಜ್ಜನ್, ಹೊಸಪೇಟೆಯ ಪದಕಿ ಎಂಟರಪ್ರೈಸಸ್ ಸತೀಶ್ ಕುಮಾರ ಪದಕಿ, ಹಗರಿಬೊಮ್ಮನಹಳ್ಳಿಯ ನಂದಿ ಇಂಡಸ್ಟ್ರಿಸ್‌ನ ಶಿವಕುಮಾರ್ ಅವರನ್ನು ಸನ್ಮಾನಿಸಿದರು.ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಿ.ಟಿ. ಮಂಜುನಾಥ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ೯೨ ಫಲಾನುಭವಿಗಳ ಅರ್ಜಿಗಳಲ್ಲಿ ೩೬ ಸಿರಿಧಾನ್ಯಗಳ ಉತ್ಪನ್ನಗಳನ್ನು ತಯಾರು ಮಾಡಲು ಮಂಜೂರಾಗಿದೆ ಎಂದರು.ಕೆಪೆಕ್ ಸಹಾಯಕ ಕೃಷಿ ನಿರ್ದೇಶಕರಾದ ಚಂದ್ರಕುಮಾರ್, ಕೃಷಿ ಇಲಾಖೆ ಉಪನಿರ್ದೇಶಕ ನಯೀಮ್ ಪಾಷಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ವೀರೇಂದ್ರ ಕುಮಾರ್, ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್, ಸಹಾಯಕ ಕೃಷಿ ನಿರ್ದೇಶಕ ಮನೋಹರ್ ಗೌಡ, ಹಗರಿ ಕೃಷಿ ಕಾಲೇಜು ವಿಜ್ಞಾನಿ ಡಾ. ಶಿಲ್ಪಾ, ಹಡಗಲಿ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನ ಡಾ. ಮಂಜುನಾಥ, ಜಿಲ್ಲೆಯ ಎಲ್ಲಾ ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರು ಸಭೆಯಲ್ಲಿ ಭಾಗವಹಿಸಿದ್ದರು.ಕನ್ನಡಪ್ರಭ ಯಶೋಗಾಥೆ ವರದಿ ಪ್ರಶಂಸೆವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ಕನ್ನಡಪ್ರಭ ಪತ್ರಿಕೆ ಕೆಪೆಕ್‌ನಲ್ಲಿ ಸಾಲ ಪಡೆದು ಯಶಸ್ಸು ಹೊಂದಿರುವ ರೈತರ ಬದುಕಿನ ಕುರಿತ ಯಶೋಗಾಥೆ ವರದಿಗಳನ್ನು ಪ್ರಕಟಿಸಲಾಗುತ್ತಿದೆ. ಕನ್ನಡಪ್ರಭ ಮಾಡುತ್ತಿರುವ ಕಾರ್ಯ ಸುತ್ತ್ಯಾರ್ಹವಾಗಿದೆ. ಇದರಿಂದ ರೈತರು ಸಾಲ ಸೌಲಭ್ಯ ಪಡೆದು, ಕಿರು ಆಹಾರ ಸಂಸ್ಕರಣ ಘಟಕ ಆರಂಭಿಸಲು ಇದರಿಂದ ಅನುಕೂಲ ಆಗಲಿದೆ. ಕನ್ನಡಪ್ರಭ ಪತ್ರಿಕೆ ರಾಜ್ಯಪುಟದಲ್ಲಿ ಪ್ರಕಟ ಮಾಡಿ ರೈತರಿಗೆ ನೆರವಾಗುತ್ತಿದೆ ಎಂದರು.ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ ಮಾತನಾಡಿ, ಕನ್ನಡಪ್ರಭ ಪತ್ರಿಕೆ ಸಂಪಾದಕರು ಆಸಕ್ತಿ ವಹಿಸಿ ರೈತರ ಕುರಿತು ಯಶೋಗಾಥೆ ಬರೆಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪುಸ್ತಕ ಹೊರತರುವ ಯೋಜನೆ ಇದೆ ಎಂದರು.