ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವಿದ್ಯಾರ್ಥಿಗಳು ದೇಶದ ಇತಿಹಾಸ ಮತ್ತು ಕಲೆ ವಾಸ್ತುಶಿಲ್ಪವನ್ನು ಅಧ್ಯಯನ ಮಾಡುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕೆಜಿಎಫ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ವೆಂಕಟೇಶ್ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರೇರಣಾ ಉಪಕ್ರಮದ ಅಡಿಯಲ್ಲಿ ಐಕ್ಯೂಎಸಿ ಹಾಗೂ ಉದ್ಯೋಗ ಭರವಸಾ ಕೋಶಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಭವ್ಯ ಇತಿಹಾಸ ರಚನೆಯಲ್ಲಿ ಕಲೆ ಮತ್ತು ವಾಸ್ತುಶಿಲ್ಪ ಪ್ರಮುಖ ಆಕರಗಳಾಗಿವೆ ಎಂದರು.
ಕಲಾ ನೈಪುಣ್ಯತೆಗೆ ಸಾಕ್ಷಿದಕ್ಷಿಣ ಭಾರತದ ಹಲವು ರಾಜ ಮನೆತನಗಳು ನಿರ್ಮಿಸಿರುವ ದೇವಾಲಯಗಳು ಅಂದಿನ ಕಾಲದಲ್ಲಿ ಆಧುನಿಕ ಸೌಲಭ್ಯಗಳಿಲ್ಲದ ಕಾಲದಲ್ಲಿ ಈ ದೇಶದಲ್ಲಿ ನಿರ್ಮಿತವಾಗಿರುವ ಭವ್ಯ ನಿರ್ಮಾಣಗಳು ಅಂದಿನವರ ಕಲಾ ನೈಪುಣ್ಯತೆಗೆ ಸಾಕ್ಷಿಯಾಗಿವೆ ಮತ್ತು ಅಚ್ಚರಿ ಮೂಡಿಸುತ್ತವೆ ಎಂದರು.ಪ್ರಾಂಶುಪಾಲ ಡಾ. ಮುನಿರಾಜು ಮಾತನಾಡಿ, ವಿದ್ಯಾರ್ಥಿಗಳು ಕಲೆ ಮತ್ತು ವಾಸ್ತುಶಿಲ್ಪವನ್ನು ಅಭ್ಯಾಸ ಮಾಡಬೇಕು.ನಮ್ಮ ಇತಿಹಾಸ ಹಾಗೂ ಪರಂಪರೆಯನ್ನು ಸಮಗ್ರವಾಗಿ ಅರಿತವರು ಮಾತ್ರ ಸಮರ್ಥವಾಗಿ ಭವಿಷ್ಯವನ್ನು ರೂಪಿಸಬಲ್ಲರು.ಇಂದಿನ ಮಕ್ಕಳಲ್ಲಿ ಇತಿಹಾಸದ ಅರಿವನ್ನು ಮೂಡಿಸಬೇಕು. ನಮ್ಮ ಪರಂಪರೆಯ ಪರಿಚಯ ಮಾಡಿಕೊಡಬೇಕು. ಆಗ ಮಾತ್ರ ಅವರು ಅಭಿಮಾನದಲ್ಲಿ ಬದುಕಲು ಸಾಧ್ಯ ಎಂದರು.
ಪ್ರೇರಣಾ ಸಂಚಾಲಕಿ ಸುಪ್ರಿಯಾ ಮಾತನಾಡಿ,ಇತಿಹಾಸದ ನಿಜವಾದ ಶಕ್ತಿ ನಮ್ಮ ಪ್ರಸ್ತುತ ನಿರ್ಧಾರಗಳನ್ನು ಮಾರ್ಗದರ್ಶನ ಮಾಡುವ ಮತ್ತು ಉಜ್ವಲ ಭವಿಷ್ಯವನ್ನು ರೂಪಿಸುವ ಸಾಮರ್ಥ್ಯದಲ್ಲಿದೆ. ಐತಿಹಾಸಿಕ ಘಟನೆಗಳಿಂದ ಅಮೂಲ್ಯವಾದ ಪಾಠಗಳನ್ನು ಅನ್ವೇಷಿಸುವ ಮೂಲಕ, ನಾವು ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡುತ್ತೇವೆ ಮತ್ತು ಹಿಂದಿನ ತಪ್ಪುಗಳನ್ನು ಪುನರಾವರ್ತಿಸುವುದನ್ನು ತಪ್ಪಿಸುತ್ತೇವೆ ಎಂದರು.ಕಾರ್ಯಕ್ರಮದಲ್ಲಿ ಕೆಜಿಎಫ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ನಾರಾಯಣಪ್ಪ, ಉದ್ಯೋಗ ಭರವಸಾ ಕೋಶದ ಸಂಚಾಲಕ ಡಾ.ಸುರೇಶ್ ಬಾಬು, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಎಲ್.ನಾಗರಾಜ್, ಐಕ್ಯುಎಸಿ ಸಂಚಾಲಕಿ ಡಾ.ಸುನಿತ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ರಂಗಪ್ಪ, ಇಂಗ್ಲೀಷ್ ವಿಭಾಗ ಮುಖ್ಯಸ್ಥರು ಡಾ.ವೆಂಕಟರಾಮ್, ಮತ್ತಿತರರು ಇದ್ದರು.