ಹಲ್ಲೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ

| Published : Jul 16 2025, 12:45 AM IST

ಸಾರಾಂಶ

ಕಳೆದ ಜು. 10ರಂದು ನಡೆದ ಈ ಘಟನೆ ಕುರಿತು ಸವದತ್ತಿ ಠಾಣೆಯಲ್ಲಿ ಅಣ್ಣಪ್ಪ ದೂರು ದಾಖಲಿಸಿದ್ದರೂ, ಸಹ ಈವರೆಗೆ ಅವರನ್ನು ಬಂಧಿಸಿಲ್ಲ. ಅವರನ್ನು ಕರ್ತವ್ಯದಿಂದಲೂ ಅಮಾನತ್ತು ಕೂಡ ಮಾಡಿಲ್ಲ ಎಂದು ಕಾರ್ಯಕರ್ತರು ಆಪಾದಿಸಿದರು.

ಧಾರವಾಡ: ಶ್ರೀರಾಮ ಸೇನೆ ಧಾರವಾಡ ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ ಮೇಲೆ ಹಲ್ಲೆ ಮಾಡಿದ ಪೊಲೀಸ್ ಮತ್ತು ಹೋಮ್ ಗಾರ್ಡ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸುಮಾರು ಹೊತ್ತು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಹಲ್ಲೆ ಮಾಡಿರುವ ಪೊಲೀಸ್ ಅಧಿಕಾರಿ ಹಾಗೂ ಹೋಮ್ ಗಾರ್ಡ್ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಅಣ್ಣಪ್ಪ ದಿವಟಗಿ ಹಾಗೂ ಪತ್ನಿಯ ಮೇಲೆ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಪೊಲೀಸ್, ಹೋರ್ಮ್ ಗಾರ್ಡ್ ಲಾಠಿಯಿಂದ ಮಾರಾಣಾಂತಿಕ ಹಲ್ಲೆ ಮಾಡಿದ್ದಾಗಿ ಕಾರ್ಯಕರ್ತರು ಆರೋಪ ಮಾಡಿದರು.

ಕಳೆದ ಜು. 10ರಂದು ನಡೆದ ಈ ಘಟನೆ ಕುರಿತು ಸವದತ್ತಿ ಠಾಣೆಯಲ್ಲಿ ಅಣ್ಣಪ್ಪ ದೂರು ದಾಖಲಿಸಿದ್ದರೂ, ಸಹ ಈವರೆಗೆ ಅವರನ್ನು ಬಂಧಿಸಿಲ್ಲ. ಅವರನ್ನು ಕರ್ತವ್ಯದಿಂದಲೂ ಅಮಾನತ್ತು ಕೂಡ ಮಾಡಿಲ್ಲ ಎಂದು ಕಾರ್ಯಕರ್ತರು ಆಪಾದಿಸಿದರು.

ಕಾನೂನು ಕೈಗೆ ತೆಗೆದುಕೊಂಡು ಹಲ್ಲೆ ಮಾಡಿದ ಪೊಲೀಸ್ ಹಾಗೂ ಹೋಮ್ ಗಾರ್ಡ್ ಅವರನ್ನು ಅಮಾನತ್ತು ಮಾಡುವ ಜತೆ ಕಠಿಣ ಶಿಕ್ಷೆಗೆ ಗುರಿಪಡಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರಾದ ಪೂರ್ಣಿಮಾ ಕಾಡಮ್ಮನವರ, ಗಡಿಗೆಪ್ಪ ಕುರುವತ್ತಿ, ಮಂಜು ಕಾಟಕರ, ಬಸು ದರ್ಗದ, ಮೈಲಾರಿ, ಬಸು ಗೌಡರ, ಪುಟ್ಟು ಜೋಶಿ, ಪಾಂಡು ಯಮೋಜಿ, ನಾಗರಾಜ ಸೌತಿಕಾಯಿ ಇದ್ದರು.