ರುದ್ರಣ್ಣ ಯಡವಣ್ಣವರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊ‍ಳ್ಳಿ

| Published : Nov 09 2024, 01:09 AM IST / Updated: Nov 09 2024, 01:10 AM IST

ರುದ್ರಣ್ಣ ಯಡವಣ್ಣವರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊ‍ಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮೃತ ನೌಕರರಾದ ರುದ್ರಣ್ಣ ಯಡವಣ್ಣವರ ಸಾವಿನ ಕುರಿತು ನ್ಯಾಯಸಮ್ಮತವಾದ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಲಾಯಿತು.

ಕುಷ್ಟಗಿ: ಬೆಳಗಾವಿ ತಾಲೂಕು ಕಚೇರಿ ದ್ವಿತೀಯ ದರ್ಜೆ ಸಹಾಯಕರಾದ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರ ಹಾಗೂ ಲಿಪಿಕ ನೌಕರರ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ನೌಕರರು, ಬೆಳಗಾವಿ ಜಿಲ್ಲೆಯ ಬೆಳಗಾವಿ ತಹಸೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ ನವಂಬರ್ 5ರಂದು ಬೆಳಗಾವಿಯ ತಾಲೂಕು ಕಚೇರಿಯ ತಹಸೀಲ್ದಾರ್ ಚೇಂಬರ್‌ನಲ್ಲಿಯೇ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ.

ಆತ್ಮಹತ್ಯೆಗೂ ಮುನ್ನ ಕಚೇರಿಯ ವಾಟ್ಸಪ್ ಗ್ರೂಪ್‌ನಲ್ಲಿ ತನ್ನ ಸಾವಿಗೆ ತಹಸೀಲ್ದಾರ್ ಬಸವರಾಜ ನಾಗರಾಳ, ಸಿಬ್ಬಂದಿ ಅಶೋಕ ಕಬ್ಬಲಗೇರಿ ಮತ್ತು ಸೋಮು ಎಂಬುವವರು ಕಾರಣ ಎಂದು ಮಾಹಿತಿ ಹಂಚಿಕೊಂಡಿದ್ದು ಹಾಗೂ ತಹಸೀಲ್ದಾರರು ಒಂದು ವರ್ಷದಿಂದ ಕಿರುಕುಳ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಮೃತ ನೌಕರರಾದ ರುದ್ರಣ್ಣ ಯಡವಣ್ಣವರ ಸಾವಿನ ಕುರಿತು ನ್ಯಾಯಸಮ್ಮತವಾದ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಂದಾಯ ಇಲಾಖೆಯಲ್ಲಿ ಜನಸಂಖ್ಯೆಗೆ ಪೂರಕವಾಗಿ ಹುದ್ದೆಗಳು ಮಂಜೂರಾಗದ ಇರುವುದರಿಂದ ಸಿಬ್ಬಂದಿ ಅತಿ ಹೆಚ್ಚಿನ ಕೆಲಸದ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಜೊತೆಗೆ ರಾಜ್ಯದ ಸಾಕಷ್ಟು ಕಚೇರಿಗಳಲ್ಲಿ ವಿವಿಧ ಹಂತದ ಮೇಲಧಿಕಾರಿಗಳು ಸಾರ್ವಜನಿಕರ ಎದುರಿಗೆ ನೌಕರರನ್ನು ನಿಂದಿಸುವುದು, ವೈಯಕ್ತಿಕ ಕೆಲಸಗಳಿಗೆ ರಜೆ ನೀಡುವುದನ್ನು ನಿರಾಕರಿಸುವುದು, ಸಾಮರ್ಥ್ಯಕ್ಕಿಂತ ಅತೀ ಹೆಚ್ಚಿನ ಕೆಲಸಗಳನ್ನು ನೀಡುತ್ತಿದ್ದು, ಇದರಿಂದ ನೌಕರರು ಮಾನಸಿಕವಾಗಿ ಒತ್ತಡ ಅನುಭವಿಸುತ್ತಿದ್ದಾರೆ.

ಈಗಾಗಲೇ ಸಾಕಷ್ಟು ನೌಕರರು ಇದನ್ನು ದ್ವಿತೀಯ ದರ್ಜೆ ಸಹಾಯಕ ನೌಕರರ ಸಂಘದ ಗಮನಕ್ಕೆ ತಂದಿದ್ದಾರೆ. ಆದ್ದರಿಂದ ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ತಮ್ಮ ಅಧೀನದ ನೌಕರರೊಂದಿಗೆ ಸಾರ್ವಜನಿಕರ ಎದುರು ಸೌಜನ್ಯದಿಂದ ವರ್ತಿಸುವಂತೆ, ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸದ ಒತ್ತಡ ನೀಡದಂತೆ ಹಾಗೂ ಯಾವುದೇ ರೀತಿಯ ಕಿರುಕುಳ ನೀಡದಂತೆ ಸರಕಾರದಿಂದ ಆದೇಶವನ್ನು ಹೊರಡಿಸಬೇಕು ಎಂದು ಕೋರಿದ್ದಾರೆ.

ಈ ಸಂದರ್ಭದಲ್ಲಿ ಕುಷ್ಟಗಿ ತಾಲೂಕಿನ ಕಂದಾಯ ಇಲಾಖೆಯ ವಿವಿಧ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕರು ಇದ್ದರು. ಈ ವೇಳೆ, ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.