ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸೂಕ್ತ‌ ಕ್ರಮ ವಹಿಸಿ: ಎಸ್ಸೆಸ್ಸೆಎಂ

| Published : Nov 05 2024, 12:30 AM IST

ಸಾರಾಂಶ

ದಾವಣಗೆರೆ ತಾಲೂಕಿನ ಹೂವಿನಮಡು ಸರ್ಕಾರಿ ಶಾಲೆಯ ಅಭಿವೃದ್ಧಿಯ ಕುರಿತು ಗ್ರಾಮಸ್ಥರು, ಶಾಲಾ ಎಸ್‌ಡಿಎಂಸಿ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ತಾಲೂಕಿನ ಮತ್ತಿ ಗ್ರಾಪಂ ವ್ಯಾಪ್ತಿಗೆ ಬರುವ ಹೂವಿನಮಡು ಗ್ರಾಮದಲ್ಲಿ ಸರ್ಕಾರಿ ಶಾಲೆ ಸೇರಿದಂತೆ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿರುವ ಕುಂದುಕೊರತೆ ನೀಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಹೂವಿನಮಡು ಸರ್ಕಾರಿ ಶಾಲೆಯ ಅಭಿವೃದ್ಧಿಯ ಕುರಿತು ಗ್ರಾಮಸ್ಥರು ಹಾಗೂ ಶಾಲಾ ಎಸ್‌ಡಿಎಂಸಿಯ ಪದಾಧಿಕಾರಿಗಳು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಸಚಿವರು, ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಆಲಿಸುವಂತೆ ಸೂಚನೆ ನೀಡಿದರು. ಹೂವಿನಮಡು ಸರ್ಕಾರಿ ಶಾಲೆಯು ಅಭಿವೃದ್ಧಿಯಿಂದ ವಂಚಿತವಾಗಿದ್ದು, ಶಾಲೆಯ ಮೇಲ್ಚಾವಣಿ ಕುಸಿಯುತ್ತಿದೆ. ಮಳೆಗಾಲದಲ್ಲಿ ಹೆಚ್ಚಿನ ಸಮಸ್ಯೆಯಾಗಿದೆ. ಶಾಲೆಗೆ ಸಿಸಿ ಕ್ಯಾಮೆರ, ಸ್ಮಾರ್ಟ್‌ಕ್ಲಾಸ್ ಸಲಕರಣೆಗಳು ಅಗತ್ಯವಾಗಿವೆ. ಶಾಲೆಯ ಸುತ್ತಲು ಕಾಂಪೌಂಡ್, ಶಾಲೆಯ ಸಮೀಪದಲ್ಲಿನ ವಿದ್ಯುತ್ ಕಂಬಗಳ ತೆರವು ಸೇರಿದಂತೆ ಅಗತ್ಯ ಸೇವೆಗಳು ಸರ್ಕಾರಿ ಶಾಲೆಗೆ ಮುಖ್ಯವಾಗಿವೆ ಎಂದು ಗ್ರಾಮಸ್ಥರು ಕೋರಿದರು.

ಸಚಿವ ಎಸ್‌ಎಸ್ಎಂ ಮಲ್ಲಿಕಾರ್ಜುನ ಅವರು ಜಿಪಂ ಸಿಇಒ ಅವರಿಗೆ ದೂರವಾಣಿ ಕರೆ ಮಾಡಿ, ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳಲ್ಲಿರುವ ಕುಂದು ಕೊರತೆಗಳನ್ನು ಶೀಘ್ರವಾಗಿ ನಿವಾರಿಸುವಂತಹ ಕ್ರಮಗಳನ್ನು ಜರುಗಿಸುವಂತೆ ತಿಳಿಸಿದರು.

ಈ ವೇಳೆ ಹೂವಿನಮಡು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜಪ್ಪ, ರೇಖಾ, ಎಸ್‌ಡಿಎಂಸಿ ಅಧ್ಯಕ್ಷ ರಂಗಪ್ಪ, ಶಿಕ್ಷಕಿ ಭಾಗ್ಯಲಕ್ಷ್ಮಿ, ಗ್ರಾಮದ ಮುಖಂಡರಾದ ಡಾ.ಮಲ್ಲಿಕಾರ್ಜುನಪ್ಪ, ಎಚ್.ಬಿ.ಜಯ್ಯಪ್ಪ, ಗ್ರಾಮಸ್ಥರಾದ ಮಹಾಂತೇಶ್, ನಾಗರಾಜ್ ಸೇರಿ ಇತರರು ಇದ್ದರು.