ಅಪ್ರಾಪ್ತ ಮಕ್ಕಳಿಗೆ ಯಾವುದೇ ಕಾರಣಕ್ಕೂ ವಾಹನಗಳ ಚಲಾಯಿಸಲು ಅವಕಾಶ ನೀಡಬೇಡಿ ಎಂದು ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದ್ದಾರೆ.

- ಶಾಲಾ ಕಾಲೇಜುಗಳಲ್ಲಿ ಸಂಚಾರ ಜಾಗೃತಿ ಕಾರ್ಯಕ್ರಮಕ್ಕೆ ಚಿಂತನೆ

- - -

ದಾವಣಗೆರೆ: ಅಪ್ರಾಪ್ತ ಮಕ್ಕಳಿಗೆ ಯಾವುದೇ ಕಾರಣಕ್ಕೂ ವಾಹನಗಳ ಚಲಾಯಿಸಲು ಅವಕಾಶ ನೀಡಬೇಡಿ ಎಂದು ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಪ್ರತಿ ಮನೆಗಳಲ್ಲಿ ಎರಡು, ಮೂರು ವಾಹನಗಳಿರುತ್ತವೆ. ಅಪ್ರಾಪ್ತ ವಯಸ್ಸಿನ ಮಕ್ಕಳು ನೆಪ ಹೇಳಿ ವಾಹನ ತೆಗೆದುಕೊಂಡು ರಸ್ತೆಗೆ ಬರುವುದು ಸರ್ವೆ ಸಾಮಾನ್ಯ ಆಗುತ್ತಿದೆ. ಪೋಷಕರೂ ಅಪ್ರಾಪ್ತ ಮಕ್ಕಳಿಗೆ ಯಾವುದೇ ರೀತಿಯ ವಾಹನಗಳ ಚಾಲನೆಗೆ ಪ್ರೋತ್ಸಾಹಿಸಬಾರದು ಎಂದರು.

ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಸಂಚಾರ ನಿಯಮ ಕುರಿತು ಅರಿವು ಕಾರ್ಯಕ್ರಮ ನಡೆಸಬೇಕು. ಈ ನಿಟ್ಟಿನಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ ಶಾಮನೂರು ಅವರೊಂದಿಗೆ ಸಮಾಲೋಚಿಸಿ ಕ್ರಮ ಜರುಗಿಸಲಾಗುವುದು ಎಂದರು.

ವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ಚಾಲನಾ ಪರವಾನಗಿ, ನೋಂದಣಿ ಪ್ರಮಾಣ ಪತ್ರ (ಆರ್‌ಸಿ), ವಿಮೆ ಮತ್ತು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರವನ್ನು ಪ್ರತಿಯೊಬ್ಬರೂ ಚಾಲನೆ ವೇಳೆ ಇಟ್ಟುಕೊಂಡಿರಬೇಕು. ಆ ಮೂಲಕ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರಿನಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ, ತಮ್ಮ ಪ್ರಾಣ ರಕ್ಷಿಸಿಕೊಳ್ಳಬೇಕೆಂದು ತಿಳಿಸಿದರು.

ವಾಹನಗಳನ್ನು ಚಾಲನೆ ಮಾಡುವಾಗ ಮೊಬೈಲ್ ಬಳಸುವುದನ್ನು ಅಥವಾ ಮಾತನಾಡದೇ ವಾಹನ ರಸ್ತೆ ಬದಿ ನಿಲ್ಲಿಸಿ ಮಾತನಾಡಬೇಕು. ರಸ್ತೆಗಳಲ್ಲಿ ಸೂಚಿಸಲಾದ ವೇಗಮಿತಿಯನ್ನು ಮಾತ್ರ ಕಾಯ್ದುಕೊಂಡು ಟ್ರಾಫಿಕ್ ದೀಪಗಳು ಮತ್ತು ರಸ್ತೆ ಗುರುತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆಯೂ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಾಜೇಶ್ವರಿ, ವಿನಯ್ ಜೋಗಪ್ಪನವರ್, ನವೀನ್, ಜ್ಯೋತಿ, ಸುಕನ್ಯ, ವರುಣ್ ಇತರರು ಇದ್ದರು.

- - -

-18ಕೆಡಿವಿಜಿ42: ದಾವಣಗೆರೆಯಲ್ಲಿ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.